ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಬಿಕ್ಕಟ್ಟು : ಮಂಗಳವಾರದ 10 ಪ್ರಮುಖ ಬೆಳವಣಿಗೆಗಳು

By Prasad
|
Google Oneindia Kannada News

ಬೆಂಗಳೂರು, ಜು. 10 : ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಯಾರಿಗೆ ನೀಡಬೇಕು, ಎಷ್ಟು ಉಪ ಮುಖ್ಯಮಂತ್ರಿ ಪದವಿಗಳನ್ನು ಸೃಷ್ಟಿಸಬೇಕು, ಯಾರ್ಯಾರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಯಡಿಯೂರಪ್ಪ ಮತ್ತು ಸದಾನಂದ ಗೌಡ ಬಣಗಳು ಮುಂದಿಟ್ಟುಕೊಂಡು, ಬಿಜೆಪಿ ಹೈಕಮಾಂಡನ್ನು ಹೈಜಾಕ್ ಮಾಡಲು ಯತ್ನಿಸಿದ್ದರಿಂದ ಮಂಗಳವಾರ ನಡೆಯಬೇಕಾಗಿದ್ದ ಶಾಸಕಾಂಗ ಪಕ್ಷದ ಸಭೆ ನಡೆಯುವುದೇ ಅನುಮಾನವಾಗಿತ್ತು.

Yeddyurappa, Sadananda Gowda, Rajnath Singh congratulate Jagadish Shettar

ಯಡಿಯೂರಪ್ಪ ಬಣದವರು ಬೆಳಗ್ಗೆಯಿಂದಲೇ ಹೋಟೆಲ್ ಕ್ಯಾಪಿಟಲ್‌ನಲ್ಲಿ ಬೀಡುಬಿಟ್ಟು ಶಾಸಕಾಂಗ ಪಕ್ಷದ ಸಭೆಯಾಗಿ ಕಾಯುತ್ತಿದ್ದರೆ, ಸದಾನಂದ ಗೌಡರ ಹಿಂದೆ ನಿಂತಿದ್ದ 45ಕ್ಕೂ ಹೆಚ್ಚು ಶಾಸಕರು ಹೋಟೆಲ್ ಅಶೋಕದಲ್ಲಿ ತಮ್ಮ ಷರತ್ತುಗಳ ಪಟ್ಟಿ ಹಿಡಿದುಕೊಂಡು ಶಾಸಕಾಂಗ ಪಕ್ಷದ ಸಭೆಯನ್ನು ತಳ್ಳುತ್ತಲೇ ಬಂದರು. ಕೊನೆಗೂ ಕೆಲ ಗೊಂದಲ ನಿವಾರಣೆಯಾಗಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಹೊರಹೊಮ್ಮಿದ್ದಾರೆ. ಇಂದು ಬೆಳಿಗ್ಗೆಯಿಂದ ನಡೆದ 10 ಪ್ರಮುಖ ಘಟನಾವಳಿಗಳು ಇಲ್ಲಿವೆ.

1) ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮಾಡಲು 50ಕ್ಕೂ ಹೆಚ್ಚು ಯಡಿಯೂರಪ್ಪ ಬಣದ ಶಾಸಕರು ರಾಜಭವನದ ರಸ್ತೆಯಲ್ಲಿರುವ, ಪ್ರಧಾನ ಅಂಚೆ ಕಚೇರಿ ಎದುರಿನಲ್ಲಿರುವ ಹೋಟೆಲ್ ಕ್ಯಾಪಿಟಲ್‌ನಲ್ಲಿ ಜಮಾಯಿಸಿದ್ದರು. 11 ಗಂಟೆಗೆ ಆರಂಭವಾಗಿದ್ದ ಶಾಸಕಾಂಗ ಪಕ್ಷದ ಸಭೆ, ಡಿವಿ ಸದಾನಂದ ಗೌಡರ ಅನುಪಸ್ಥಿತಿಯಿಂದ ಆರಂಭವಾಗಲೇ ಇಲ್ಲ.

2) ಅಷ್ಟೊತ್ತಿಗೆ, ಕ್ಯಾಪಿಟಲ್‌ಗೆ ಬರುವ ಬದಲು 47ಕ್ಕೂ ಹೆಚ್ಚು ಬೆಂಬಲ ಪಡೆದಿದ್ದ ಸದಾನಂದ ಗೌಡರ ತಂಡ ಹೋಟೆಲ್ ಅಶೋಕ ದಾರಿ ಹಿಡಿದು, ಸದಾನಂದ ಗೌಡರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಒಕ್ಕಲಿಗ ಜಾತಿಯ ಆರ್ ಅಶೋಕ್ ಜೊತೆ ಕುರುಬ ಜಾತಿಯ ಕೆ.ಎಸ್. ಈಶ್ವರಪ್ಪ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬ ಬೇಡಿಕೆಯನ್ನು ಹಿರಿಯರ ಮುಂದಿಟ್ಟಿತು. ಉಪ ಮುಖ್ಯಮಂತ್ರಿ ಪಟ್ಟಕ್ಕೆ ಆರ್ ಅಶೋಕ್ ಅವರ ಹೆಸರನ್ನು ಯಡಿಯೂರಪ್ಪ ಸೂಚಿಸಿದ್ದರು.

3) ಈ ಎರಡು ಬೇಡಿಕೆಗಳ ಜೊತೆಗೆ, ಇಲ್ಲಿಯವರೆಗೆ ಪ್ರಾತಿನಿಧ್ಯ ದೊರೆಯದ ಎಲ್ಲ ಜಿಲ್ಲೆಗಳಿಗೆ ನೂತನ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಬೇಕು ಎಂದು ಮತ್ತೊಂದು ಬೇಡಿಕೆಯನ್ನು ಡಿವಿ ಸದಾನಂದ ಗೌಡರು ಮುಂದಿಟ್ಟಿದ್ದರಿಂದ ಅವಾಕ್ಕಾದ ಅರುಣ್ ಜೇಟ್ಲಿ ಮತ್ತು ರಾಜನಾಥ್ ಸಿಂಗ್ ಅವರು ಡಿವಿಎಸ್ ಮನವೊಲಿಕೆ ಧಾವಿಸುವಂತಾಯಿತು. ಕಾಂಗ್ರೆಸ್ ನಾಯಕರು ಕೂಡ ಈ ಬೆಳವಣಿಗೆಯ ಲೇವಡಿ ಮಾಡಿ, ವಿಧಾನಸಭೆಯನ್ನು ವಿಸರ್ಜಿಸಬೇಕು ಎಂದು ಹೇಳಿಕೆ ನೀಡಿದರು.

4) ಮೊದಲಿಗೆ ಡಿವಿ ಸದಾನಂದ ಗೌಡರ ನಿವಾಸದಲ್ಲಿ ಭೇಟಿಯಾದ ಶಾಸಕರು ನಂತರ ಅಶೋಕ ಹೋಟೆಲಿಗೆ ತೆರಳಿದರು. ಆ ಬಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ, ಸುರೇಶ್ ಕುಮಾರ್, ರಾಮದಾಸ್, ಅನಂತ್ ಕುಮಾರ್ ಮುಂತಾದವರು ಸೇರಿಕೊಂಡಿದ್ದರು. ಬಿಕ್ಕಟ್ಟು ನಿವಾರಣೆಗೆಂದು ಬಂದಿದ್ದ ಹಿರಿಯ ನಾಯಕರನ್ನು ಅಶೋಕ ಹೋಟೆಲಿಗೆ ಕರೆಸಿಕೊಂಡ ಡಿವಿಎಸ್ ಬಣ, ಯಡಿಯೂರಪ್ಪ ಬಣದ ಕೈಮೇಲಾಗದಂತೆ ಹಿರಿಯರ ಮನವೊಲಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಯಿತು.

5) ಇಷ್ಟೆಲ್ಲ ನಡೆಯುತ್ತಿರುವಾಗ ಎರಡೂ ಬಣದಲ್ಲಿ ಸಹಿ ಸಂಗ್ರಹ ಕಾರ್ಯ ಆರಂಭವಾಗಿತ್ತು. ಸದಾನಂದ ಗೌಡರನ್ನು ಬೆಂಬಲಿಸಿ 50 ಶಾಸಕರ ಸಹಿ ಸಂಗ್ರಹವಾದರೆ, ಯಡಿಯೂರಪ್ಪನವರ ಗುಂಪಿನಲ್ಲಿಯೂ ಸಹಿ ಸಂಗ್ರಹ ಕಾರ್ಯ ಆರಂಭವಾಗಿತ್ತು. ಅಚ್ಚರಿಯ ಸಂಗತಿಯೆಂದರೆ, ಕೆಲವರ ಹೆಸರುಗಳು ಎರಡೂ ಪಟ್ಟಿಯಲ್ಲಿ ಕಂಡುಬಂದು ನಾಯಕರನ್ನು ಕಕ್ಕಾಬಿಕ್ಕಿಯನ್ನಾಗಿಸಿತು.

6) ಬಿಜೆಪಿ ಬಿಕ್ಕಟ್ಟು ಬಗೆಹರಿಯುವುದು ಸಾಧ್ಯವೇ ಇಲ್ಲ ಎಂಬ ಘಟ್ಟ ತಲುಪಿದ ಹಂತದಲ್ಲಿ, ಹಠಾತ್ತಾಗಿ ಅರುಣ್ ಜೇಟ್ಲಿ ಅವರು ನವದೆಹಲಿಗೆ ತೆರಳಬೇಕಾಯಿತು. ಅವರ ಶ್ರೀಮತಿ ಸಂಗೀತಾ ಜೇಟ್ಲಿ ಅವರಿಗೆ ಹೃದಯಾಘಾತವಾಗಿ ಎಂಬ ಸುದ್ದಿ ಬಂದ ಹಿನ್ನೆಲೆಯಲ್ಲಿ ಅರುಣ್ ಅವರು ಸಭೆಯನ್ನು ತೊರೆದು ನವದೆಹಲಿಗೆ ಧಾವಿಸಿದರು. ನಂತರ ಸದಾನಂದ ಗೌಡರ ಮನವೊಲಿಸುವ ಕಾರ್ಯ ರಾಜನಾಥ್ ಸಿಂಗ್ ಮುಂದುವರಿಸಿದರು.

7) ಇನ್ನೇನು ಗೌಡರ ಮನವೊಲಿಕೆಯಾಗಿ ಅವರು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುತ್ತಾರೆ ಎನ್ನುವ ಹೊತ್ತಿಗೆ, ತಮ್ಮನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸದ ಹೊರತು ರಾಜೀನಾಮೆ ಸಲ್ಲಿಸುವುದಿಲ್ಲ ಎಂದು ಸದಾನಂದ ಗೌಡರು ಬಿಗಿಯಾದ ಪಟ್ಟು ಹಿಡಿದಿದ್ದರಿಂದ ಬಿಕ್ಕಟ್ಟು ಮತ್ತಷ್ಟು ಕಗ್ಗಂಟಾಯಿತು. ಆಗ ರಾಜನಾಥ್ ಸಿಂಗ್ ಅವರಿಂದ ಸಕಾರಾತ್ಮಕ ಹೇಳಿಕೆ ಬಂದ ಹಿನ್ನೆಲೆಯಲ್ಲಿ ಗೌಡರು ತಮ್ಮ ಪಟ್ಟನ್ನು ಸಡಿಲಗೊಳಿಸಿ ಶಾಸಕಾಂಗ ಪಕ್ಷದ ಸಭೆಗೆ ಆಗಮಿಸಲು ಒಪ್ಪಿದರು.

8) ಸಂಜೆ 4.30ಕ್ಕೆ ಆರಂಭವಾದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ, ಜಗದೀಶ್ ಶೆಟ್ಟರ್ ಅವರನ್ನು ನಾಯಕನನ್ನಾಗಿ ಮಾಡುವ ನಿರ್ಣಯ ತೆಗೆದುಕೊಂಡ ನಂತರ ಕೆಲವೇ ನಿಮಿಷಗಳಲ್ಲಿ ಮುಕ್ತಾಯವಾಯಿತು. ಶಾಸಕಾಂಗ ಪಕ್ಷದ ನಾಯಕನನ್ನಾಗಿ ಜಗದೀಶ್ ಶೆಟ್ಟರ್ ಅವರ ಹೆಸರನ್ನು ಕೆಎಸ್ ಈಶ್ವರಪ್ಪ ಪ್ರಸ್ತಾಪಿಸಿದರೆ, ಡಿವಿ ಸದಾನಂದ ಗೌಡ ಅನುಮೋದಿಸಿದರು. ಅಲ್ಲಿಗೆ, ಒಂದು ವಿವಾದಕ್ಕೆ ತೆರೆ ಎಳೆದಂತಾಯಿತು.

9) ರಾಜ್ಯಾಧ್ಯಕ್ಷ ಯಾರನ್ನು ಮಾಡಬೇಕು, ಎಷ್ಟು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕು, ಯಾರ್ಯಾರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಯಾವ ನಿರ್ಣಯಗಳನ್ನು ತೆಗೆದುಕೊಳ್ಳಲಾಗಲಿಲ್ಲ. ಇನ್ನು ಎರಡು ವಾರದಲ್ಲಿ ಈ ಬೇಡಿಕೆಗಳಿಗೆ ಪರಿಹಾರ ಕಂಡುಹಿಡಿಯುವುದಾಗಿ ಹಿರಿಯ ನಾಯಕರು ನಿರ್ಣಯಿಸಿದ್ದಾರೆ.

10) ಕಡೆಗೆ ಜಗದೀಶ್ ಶೆಟ್ಟರ್ ಅವರಿಗೆ ಯಡಿಯೂರಪ್ಪ, ಸದಾನಂದ ಗೌಡ, ರಾಜನಾಥ್ ಸಿಂಗ್, ಕೆಎಸ್ ಈಶ್ವರಪ್ಪ, ಅನಂತ್ ಕುಮಾರ್ ಅವರು ಒಟ್ಟಾಗಿ ಹೂಗುಚ್ಛ ನೀಡಿ ಅಭಿನಂದಿಸಿದರು. ಅಕ್ಕಪಕ್ಕದಲ್ಲಿ ನಿಂತಿದ್ದ ಯಡಿಯೂರಪ್ಪ ಮತ್ತು ಸದಾನಂದ ಗೌಡ ಅಪ್ಪಿತಪ್ಪಿಯೂ ಒಂದು ಮಾತನ್ನಾಡಲಿಲ್ಲ. ಎಲ್ಲರಿಗೂ ಥ್ಯಾಂಕ್ಸ್ ಹೇಳಿದ ಜಗದೀಶ್ ಶೆಟ್ಟರ್ ಅವರು ಜುಲೈ 12ರಂದು ಗುರುವಾರ ಕರ್ನಾಟಕದ 27ನೇ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುವುದು ನಿಗದಿಯಾಗಿದೆ.

ಈ ಒಂದು ಬಿಕ್ಕಟ್ಟು ನಿವಾರಣೆ ಇನ್ನೂ ಅನೇಕ ಬಿಕ್ಕಟ್ಟುಗಳಿಗೆ ದಾರಿ ಮಾಡಿಕೊಡಲಿವೆಯೆ? ರಾಜ್ಯಾಧ್ಯಕ್ಷ ಪಟ್ಟವನ್ನು ಬಿಜೆಪಿ ಹೈಕಮಾಂಡ್ ಯಾರಿಗೆ ನೀಡಲಿದೆ, ಸದಾನಂದ ಗೌಡಗೋ ಯಡಿಯೂರಪ್ಪನವರಿಗೋ? ಉಪ ಮುಖ್ಯಮಂತ್ರಿ ಪಟ್ಟ ಯಾರ ಪಾಲಾಗಲಿದೆ? ಶೆಟ್ಟರ್ ಜೊತೆಗೆ ಯಾರ್ಯಾರು ಪ್ರಮಾಣವಚನ ಸ್ವೀಕರಿಸಲಿದ್ದಾರೆ? ಈ ಉಳಿದ ಬಿಕ್ಕಟ್ಟುಗಳಿಗೆ ದೆಹಲಿಯ ಹಿರಿಯರು ಎಂದು ಪರಿಹಾರ ಹುಡುಕಲಿದ್ದಾರೆ? ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಒನ್ಇಂಡಿಯಾ ಕನ್ನಡ ಓದುತ್ತಲಿರಿ.

English summary
Though Jagadish Shettar, supported by BS Yeddyurappa has been elected as BJP legislative party leader the crisis is not yet over. Sadananda Gowda is demending state president post in lieu of CM post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X