ಭಾರದ್ವಾಜ್- ಸದಾನಂದರ ಭೇಟಿ ಸುಖಾಂತ್ಯ
ಬೆಂಗಳೂರು, ಜೂನ್ 30: ಮುಖ್ಯಮಂತ್ರಿ ಸದಾನಂದ ಗೌಡರು ರಾಜ್ಯಪಾಲ ಭಾರಧ್ವಾಜ್ ಜತೆಗಿನ ನಿಗದಿತ ಭೇಟಿಯನ್ನು ಕೇವಲ 15 ನಿಮಷಗಳಲ್ಲಿ ಮುಕ್ತಾವಾಗಿದ್ದು, ಉಭಯಕುಶಲೋಪರಿ ಮಧ್ಯೆ ಒಂದಷ್ಟು ಆಡಳಿತ ಸಂಬಂಧಿ ಮಾತುಕತೆ ನಡೆಸುವ ಮೂಲಕ ಭೇಟಿಯನ್ನು ಸುಖಾಂತ್ಯಗೊಳಿಸಿದ್ದಾರೆ.

ಅದಕ್ಕೂ ಮುನ್ನ ಸದಾನಂದ ಗೌಡರು ಶನಿವಾರ ಬೆಳಗ್ಗೆ ನೇರವಾಗಿ ರಾಜ್ಯಪಾಲ ಭಾರಧ್ವಾಜ್ ಅವರನ್ನು ಭೇಟಿ ಮಾಡಿ, ಸಚಿವರುಗಳು ರಾಜೀನಾಮೆ ಪತ್ರವನ್ನು ಅಂಗೀಕರಿಸುವಂತೆ ಕೋರುತ್ತಾರೆ. ಅದರೊಂದಿಗೆ ಹಾಲಿ ಬಿಜೆಪಿ ಸರಕಾರ ಪತನಗೊಳ್ಳಲಿದೆ ಎಂಬ ಸುದ್ದಿ ಸರಿದಾಡಿತ್ತು.
'ಬಜೆಟ್ ಅಂಗೀಕಾರ ಮಾಡುವುದು ಸದ್ಯಕ್ಕೆ ತಮ್ಮ top most priority ಆಗಿದೆ. ಆದ್ದರಿಂದ ವಿಧಾನಮಂಡಲ ಅಧಿವೇಶನ ಕರೆದು, ಹಣಕಾಸು ಮಸೂದೆಗೆ ಅಂಗೀಕಾರ ಪಡೆಯುವ ಮಹತ್ತರ ಜವಾಬ್ದಾರಿ ನನ್ನ ಮೇಲಿದೆ. ಸರಕಾರಿ ನೌಕರರು ಮತ್ತು ರಾಜ್ಯದ ಅಭಿವೃದ್ಧಿ ಕೆಲಸಗಳಿಗಾಗಿ ಹಣ ಬಿಡುಗಡೆ ಮಾಡುವುದಕ್ಕೆ ಈ ಬಜೆಟ್ ಅಂಗೀಕಾರ ಅತ್ಯವಶ್ಯಕವಾಗಿದೆ. ಆದನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯಪಾಲ ಭಾರಧ್ವಾಜ್ ಅವರನ್ನು ಭೇಟಿ ಮಾಡಿದ್ದೇನೆ' ಎಂದು ಮುಖ್ಯಮಂತ್ರಿ ಸದಾನಂದ ಗೌಡರು ಸ್ಪಷ್ಟಪಡಿಸಿದ್ದಾರೆ.
ಇನ್ನು ನಿನ್ನೆ ಕೆಲವು ಸಚಿವರುಗಳು ಸಾಮೂಹಿಕ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದರು 'ಅದು ಪಕ್ಷದ ಆಂತರಿಕ ವಿಚಾರ. ಬಹಿರಂಗವಾಗಿ ಚರ್ಚಿಸಲಾಗದು. ಪಕ್ಷದ ವರಿಷ್ಠರ ಸೂಚನೆಯಂತೆ ಸದ್ಯಕ್ಕೆ ಸಚಿವರುಗಳ ರಾಜೀನಾಮೆ ಅಂಗೀಕರಿಸುವುದಿಲ್ಲ' ಎಂದು ಸ್ಪಷ್ಟಪಡಿಸಿದರು.
ಭೇಟಿಯ ವೇಳೆ ನಿನ್ನೆ ತಮ್ಮ ಸಂಪುಟದ 9 ಸಹದ್ಯೋಗಿಗಳು ರಾಜೀನಾಮೆ ಸಲ್ಲಿಸಿರುವ ಬಗ್ಗೆಯೂ ಸೂಕ್ಷ್ಮವಾಗಿ ಮತ್ತು ಕ್ಲುಪ್ತವಾಗಿ ಚರ್ಚಿಸಿದ್ದೇನೆ. 'ಅದು ಪಕ್ಷದ ಆಂತರಿಕ ವಿಷಯವಾಗಿದ್ದು, ಸರಕಾರದ ಅಸ್ತಿತ್ವಕ್ಕೆ ಯಾವುದೇ ಬಾಧೆಯಿಲ್ಲ' ಎಂದು ರಾಜ್ಯಪಾಲ ಭಾರಧ್ವಾಜ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾಗಿ ಅವರು ಹೇಳಿದರು.
ವಿಧಾನಮಂಡಲ ಅಧಿವೇಶನ ನಿರ್ಣಾಯಕ: ಹೇಗೂ ಮುಖ್ಯಮಂತ್ರಿಯೇ ಜುಲೈ ಮೊದಲ ವಾರದಲ್ಲಿ ವಿಧಾನಮಂಡಲ ಅಧಿವೇಶನ ಕರೆದು ಬಜೆಟ್ ಅನುಮೋದನೆ ಅಂಗೀಕರಿಸುವುದಾಗಿ ಹೇಳುತ್ತಿದ್ದಾರೆ. ಆಗ ತನ್ನಷ್ಟಕ್ಕೆ ತಾನೆ ಸರಕಾರದ ಬಂಡವಾಳ ಬಯಲಾಗುತ್ತದೆ. ಬಹುಮತವಿದ್ದರೆ ಅಂಗೀಕಾರ ಆಗುತ್ತದೆ. ಇಲ್ಲವಾದಲ್ಲಿ ಸರಕಾರ ತನ್ನಷ್ಟಕ್ಕೆ ತಾನೆ ಉರುಳಲಿದೆ. ಅಂತಹುದರಲ್ಲಿ ತಾನು ಆತುರಕ್ಕೆ ಬಿದ್ದು ಈಗಲೇ ಬಹುಮತ ಸಾಬೀತುಪಡಿಸಿ ಎಂದು ಮುಖ್ಯಮಂತ್ರಿಗೆ ಸೂಚಿಸುವ ಜರೂರತ್ತು ಇಲ್ಲ ಎಂದು ಮನಗಂಡು ಸಿಎಂ ಸದಾನಂದರ ಜತೆಗಿನ ಭೇಟಿಯನ್ನು ರಾಜ್ಯಪಾಲ ಭಾರಧ್ವಾಜ್ ಅವರು ಸುಖಾಂತ್ಯದಲ್ಲಿ ಮುಗಿಸಿದ್ದಾರೆ ಎಂದು ರಾಜಕೀಯ ಪರಿಣತರು ವಿಶ್ಲೇಷಿಸಿದ್ದಾರೆ.












Click it and Unblock the Notifications