ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನರನ್ನೇ ತರಾಟೆಗೆ ತೆಗೆದುಕೊಂಡ ಶೆಟ್ಟರ್ ಗ್ಯಾಂಗ್

By Prasad
|
Google Oneindia Kannada News

Dissident MLAs lambast Dharmendra Pradhan
ಬೆಂಗಳೂರು, ಜೂ. 30 : ಬಗೆಹರಿಯಲಾಗದಷ್ಟು ಹದಗೆಟ್ಟಿರುವ ಭಾರತೀಯ ಜನತಾ ಪಕ್ಷದ ಒಳಜಗಳವನ್ನು ಬಿಡಿಸಲು ಬಂದ ಕರ್ನಾಟಕ ಬಿಜೆಪಿ ಉಸ್ತುವಾರಿ ವಹಿಸಿರುವ ಧರ್ಮೇಂದ್ರ ಪ್ರಧಾನ್ ಅವರನ್ನೇ ಭಿನ್ನಮತದ ಬಾಂಬ್ ಸ್ಫೋಟಿಸಿರುವ ಯಡಿಯೂರಪ್ಪ ಅವರನ್ನು ಬೆಂಬಲಿಸಿ ರಾಜೀನಾಮೆ ನೀಡಿರುವ 8 ಶಾಸಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮುಖ್ಯಮಂತ್ರಿ ಡಿವಿ ಸದಾನಂದ ಗೌಡರನ್ನು ಕೆಳಗಿಳಿಸಿ, ಜಗದೀಶ್ ಶೆಟ್ಟರ್ ಅವರನ್ನು ಪ್ರತಿಷ್ಠಾಪಿಸಿ ಎಂದು ಪಟ್ಟುಹಿಡಿದು ಬಿಜೆಪಿಯಲ್ಲಿ ತೀವ್ರ ಬಿಕ್ಕಟ್ಟು ಸೃಷ್ಟಿಸಿರುವ ಯಡಿಯೂರಪ್ಪ ಬೆಂಬಲಿತ 8 ಶಾಸಕರನ್ನು ಕಟ್ಟಿಹಾಕಲು ಬಂದ ಪ್ರಧಾನ್ ಅವರೇ ಬಿಕ್ಕಟ್ಟು ಸೃಷ್ಟಿಸಿದವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವಿದ್ಯಾರ್ಥಿಗಳನ್ನು ಹದ್ದುಬಸ್ತಿನಲ್ಲಿ ಇಡಬೇಕಾದ ಮೇಷ್ಟ್ರೇ ವಿದ್ಯಾರ್ಥಿಗಳಿಗೆ ಹೆದರಿದರೆ ತರಗತಿ ನಡೆಯುವುದಾದರೂ ಹೇಗೆ?

ನಾಯಕತ್ವ ಕುರಿತಂತೆ ಬಿಕ್ಕಟ್ಟು ಸೃಷ್ಟಿಯಾಗಿರುವುದು ಇದು ಮೊದಲೇನಲ್ಲ. ಆದರೆ, ಬಿಕ್ಕಟ್ಟು ಸೃಷ್ಟಿಯಾದಾಗಲೆಲ್ಲ ತಾತ್ಕಾಲಿಕ ಪರಿಹಾರ ದೊರಕಿಸಿಕೊಟ್ಟು ಹೋಗುತ್ತಿದ್ದ ಬಿಜೆಪಿ ಹೈಕಮಾಂಡ್ ನಿಲುವನ್ನು ಭಿನ್ನಮತೀಯ ಶಾಸಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಜೂ.18ರಂದು ಬಿಕ್ಕಟ್ಟು ಶಮನಕ್ಕೆ ಬರಬೇಕಾಗಿತ್ತು. ಆಗ ಬಂದಿದ್ದರೆ ಈಗ ರಾಜೀನಾಮೆ ಕೊಟ್ಟು ಬಿಕ್ಕಟ್ಟು ಸೃಷ್ಟಿಸುವ ಸಂದರ್ಭವೇ ಬರುತ್ತಿರಲಿಲ್ಲ ಎಂದು ಧರ್ಮೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದೇ ಸಂದರ್ಭದಲ್ಲಿ, ಉಡುಪಿಯಲ್ಲಿ ಅಬಕಾರಿ ಆಯುಕ್ತರು ಲಂಚ ಕೇಳುತ್ತಿದ್ದಾರೆಂದು ಜೆಡಿಎಸ್ ಮುಖಂಡ ನೀಡಿದ ದೂರಿನ ಆಧಾರದ ಮೇಲೆ, ತಮ್ಮದೇ ಪಕ್ಷದವರಾದ ರೇಣುಕಾಚಾರ್ಯ ಅವರ ವಿರುದ್ಧ ತನಿಖೆಗೆ ಸದಾನಂದ ಗೌಡ ಆದೇಶಿಸಿದ್ದು ಏಕೆ ಎಂದು ಪ್ರಧಾನ್ ಅವರನ್ನು ಬಸವರಾಜ್ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ತನಿಖೆಗೆ ಆದೇಶಿಸುವ ಮೊದಲು ರೇಣುಕಾಚಾರ್ಯ ಅವರ ಒಂದು ಮಾತನ್ನೂ ಸದಾನಂದ ಗೌಡ ಕೇಳಿಲ್ಲ. ಕೆಲ ಶಾಸಕರನ್ನು ಸಿಎಂ ಪರಿಗಣನೆಗೇ ತೆಗೆದುಕೊಳ್ಳುತ್ತಿಲ್ಲ ಎಂದು ಬೊಮ್ಮಾಯಿ ದೂರಿದರು. ಇಂಥ ಪಕ್ಷಪಾತಿಯನ್ನು ಮುಖ್ಯಮಂತ್ರಿ ಎಂದು ಒಪ್ಪಿಕೊಳ್ಳುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಮಲ್ಲೇಶ್ವರದ ಬಿಜೆಪಿ ಕಚೇರಿಯ 3ನೇ ಮಹಡಿಯಲ್ಲಿ 2 ಗಂಟೆ ಕಾಲ ನಡೆದ ಚರ್ಚೆಯುದ್ದಕ್ಕೂ ಚಕಾರವೆತ್ತದೆ ಕುಳಿತಿದ್ದ ಜಗದೀಶ್ ಶೆಟ್ಟರ್ ಅವರ ಅಸಹನೆಯ ಕಟ್ಟೆಯೊಡೆದು, ಚರ್ಚೆಯ ಕಡೆಯಲ್ಲಿ, "ನಾಯಕತ್ವ ಬದಲಾವಣೆ ಮಾಡುತ್ತೀರೋ ಇಲ್ಲವೋ ಹೇಳಿ, ನಾಯಕತ್ವ ಬದಲಾವಣೆ ಕುರಿತು ಬಿಜೆಪಿ ಹಿರಿಯ ನಾಯಕರ ಖಚಿತ ತೀರ್ಮಾನವೇನು, ಬದಲಾವಣೆ ಮಾಡಲು ಆಗದಿದ್ದರೆ ಸ್ಪಷ್ಟವಾಗಿ ಹೇಳಿ" ಎಂದು ಪ್ರಧಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಾರುಕೋಲು ಹಿಡಿಯದೆ ಬರಿಗೈಯಲ್ಲಿ ಬಂದಿರುವ ಪ್ರಧಾನ್ ಎಲ್ಲರ ಮಾತನ್ನು ಕೇಳಿ, ತಾಳ್ಮೆಯೇ ಪ್ರಧಾನವಾಗಿರಲಿ, ಹೀಗೆ ರಾಜೀನಾಮೆ ಕೊಟ್ಟು ಷರತ್ತುಗಳನ್ನು ವಿಧಿಸಿ ಮಾತಿಗೆ ಕುಳಿತುಕೊಳ್ಳುವುದು ಸಮ್ಮತವಲ್ಲ, ರಾಜೀನಾಮೆ ವಾಪಸ್ ಪಡೆದು ನಂತರ ನಿಮ್ಮ ಷರತ್ತುಗಳ ಬಗ್ಗೆ ಮಾತುಕತೆ ನಡೆಸಿ ಎಂದು ಭಿನ್ನಮತೀಯರಿಗೆ ಮತ್ತೆ ಅದೇ ಹಳೇ ರಾಗದಲ್ಲಿ ಕಿವಿಮಾತು ಹೇಳಿದ್ದಾರೆ. ಇಂಥ ಅದೆಷ್ಟೋ ಮಾತು ಕೇಳಿರುವ ಭಿನ್ನಮತೀಯ ಶಾಸಕರು ಪ್ರಧಾನ್ ಅವರ ಒಂದು ಮಾತನ್ನೂ ಕೇಳುವ ಸ್ಥಿತಿಯಲ್ಲಿಲ್ಲ.

ಈ ನಡುವೆ, ಪರ್ಯಾಯವಾಗಿ ಮಾತುಕತೆ ನಡೆಸಿರುವ ಡಿವಿ ಸದಾನಂದ ಗೌಡರನ್ನು ಬೆಂಬಲಿಸುತ್ತಿರುವ ಶಾಸಕರ ದಂಡು ಪ್ರಧಾನ್ ಅವರನ್ನು ಭೇಟಿ ಮಾಡಲು ಮಲ್ಲೇಶ್ವರಕ್ಕೆ ತೆರಳಿದೆ. ಸದಾನಂದ ಗೌಡ ಅವರನ್ನು ಬೆಂಬಲಿಸಿ ಗೋವಿಂದ ಕಾರಜೋಳ, ಸುರೇಶ್ ಕುಮಾರ್, ಅಶೋಕ್, ಆಸ್ನೋಟಿಕರ್, ಜಾರಕಿಹೊಳಿ, ರಾಮದಾಸ್ ಮುಂತಾದ 10ಕ್ಕೂ ಹೆಚ್ಚು ಶಾಸಕರು, ಮುಖ್ಯಮಂತ್ರಿಗಳ ಅಧಿಕೃತ ನಿವಾಸ 'ಅನುಗ್ರಹ'ದಲ್ಲಿ ಚರ್ಚೆ ನಡೆಸಿ ಸದಾನಂದ ಗೌಡರೊಡನೆ ಪ್ರಧಾನ್ ಅವರನ್ನು ಭೇಟಿ ಮಾಡಲಿದ್ದಾರೆ.

English summary
The MLAs who have stood in support of Yeddyurappa have lambasted Karnataka BJP in-charge Dharmendra Pradhan for not finding any solution too BJP crisis. In the meantime, Sadananda Gowda and his supporters are scheduled to meet Pradhan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X