ನಿತ್ಯಾನಂದನ ಅಕ್ರಮ : ತನಿಖೆಗೆ ಅಧಿಕೃತ ಆದೇಶ

Official inquiry ordered against Nithyananda
ಬೆಂಗಳೂರು, ಜೂ. 12 : ಬಿಡದಿ ಆಶ್ರಮದಲ್ಲಿ ಅಕ್ರಮ ಮತ್ತು ಅನೈತಿಕ ಚಟುವಟಿಕೆ ನಡೆಸುತ್ತಿದ್ದಾನೆ, ಭೂಮಿಯ ಅಕ್ರಮ ಬಳಕೆ ಮಾಡುತ್ತಿದ್ದಾನೆಂದು ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಸ್ವಾಮಿ ನಿತ್ಯಾನಂದನ ವಿರುದ್ಧ ತನಿಖೆ ನಡೆಸಬೇಕೆಂದು ಗೃಹ ಸಚಿವಾಲಯದ ಕಾರ್ಯದರ್ಶಿ ರಾಘವೇಂದ್ರ ಔರಾದಕರ್ ಅವರು ಮಂಗಳವಾರ ಅಧಿಕೃತ ಸೂಚನೆ ಹೊರಡಿಸಿದ್ದಾರೆ.

ರಾಮನಗರ ಜಿಲ್ಲಾಧಿಕಾರಿ ಶ್ರೀರಾಮ್ ರೆಡ್ಡಿ ಮತ್ತು ಎಸ್‌ಪಿ ಅನುಪಮ್ ಅಗರವಾಲ್ ಅವರು ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ಇನ್ನು 15 ದಿನಗಳೊಳಗೆ ಪ್ರಾದೇಶಿಕ ಆಯುಕ್ತರಿಂದ ತನಿಖೆ ನಡೆಸಿ ವರದಿ ಸಲ್ಲಿಸಬೇಕೆಂದು ಸೂಚನೆ ನೀಡಲಾಗಿದೆ. ಮಂಗಳವಾರ ಬಿಡದಿಯ ಧ್ಯಾನಪೀಠಂ ಆಶ್ರಮಕ್ಕೆ ಅಧಿಕೃತವಾಗಿ ಬೀಗಮುದ್ರೆ ಬೀಳಲಿದೆ.

ಆಶ್ರಮದಲ್ಲಿ ಅತ್ಯಾಚಾರ, ಲೈಂಗಿಕ ಚಟುವಟಿಕೆ, ಮಾದಕ ವಸ್ತು ಬಳಕೆ, ಸರಕಾರ ನೀಡಿದ್ದ ಭೂಮಿಯ ಅಕ್ರಮ ಬಳಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕೆಂದು ಆದೇಶ ನೀಡಲಾಗಿದೆ. ಪೊಲೀಸರು ನಡೆಸಿದ ಶೋಧದಲ್ಲಿ ಅಶ್ಲೀಲ ಡಿವಿಡಿಗಳು, ಮದ್ಯದ ಬಾಟಲಿಗಳು, ಕಾಂಡೋಮ್‌ಗಳು ದೊರೆತಿವೆ. ಒಂದು ಮೂಲದ ಪ್ರಕಾರ, ಸರಕಾರ ನೀಡಿದ್ದ 35 ಎಕರೆ ಜಮೀನಿನಲ್ಲಿ ಕೇವಲ 2 ಎಕರೆಯಲ್ಲಿ ಮಾತ್ರ ಸಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಉಳಿದ ಭೂಮಿಯಲ್ಲಿ ಕೃಷಿಯೇತರ ಚಟುವಟಿಕೆ ನಡೆಯುತ್ತಿದೆ.

ರಾಮನಗರ ಡಿಸಿ ಸಲ್ಲಿಸಿರುವ ವರದಿಯಲ್ಲಿ, ಆಶ್ರಮದಲ್ಲಿ ಅನೇಕ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಇಲ್ಲಿ ಅನೇಕ ಕೋಣೆಗಳಿದ್ದು, ಕೆಲ ಒಳ ಕೋಣೆಗಳಲ್ಲಿ ಪ್ರವೇಶವನ್ನು ನಿಷೇಧಿಸಲಾಗಿದೆ. ಅಲ್ಲಲ್ಲಿ ಗಾಂಜಾ ಮತ್ತಿತರ ಮಾದಕ ವಸ್ತುಗಳು, ಮದ್ಯದ ಬಾಟಲಿಗಳು ಕೂಡ ದೊರೆತಿವೆ. ಜೊತೆಗೆ ತೆರಿಗೆ ವಂಚಿಸುರುವ ಬಗ್ಗೆ ಕೂಡ ಕೆಲ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದರ ಸುಳಿವು ದೊರೆತಿದ್ದಂತೆ ಕೆಲ ದಾಖಲೆಗಳನ್ನು ಕೂಡ ಸುಡಲಾಗಿದ್ದು, ತನಿಖೆಯ ದಾರಿತಪ್ಪಿಸುವ ಕಾರ್ಯ ನಡೆದಿದೆ.

ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ : ಅತ್ಯಾಚಾರ, ಲೈಂಗಿಕ ಚಟುವಟಿಕೆ, ಭೂ ಕಬಳಿಕೆ, ಮೋಸ, ಮಾದಕ ವಸ್ತು ಬಳಕೆ ಮುಂತಾದ ಆರೋಪಗಳನ್ನು ಎದುರಿಸುತ್ತಿರುವ ಬಿಡದಿ ಧ್ಯಾನಪೀಠಂ ಆಶ್ರಮದ ಸ್ವಾಮಿ ನಿತ್ಯಾನಂದ ಕರ್ನಾಟಕ ಪೊಲೀಸರು ರಾಮನಗರ ಕೋರ್ಟಿನಲ್ಲಿ ಸಲ್ಲಿಸಿರುವ ಎಫ್ಐಆರ್ ರದ್ದುಪಡಿಸಬೇಕು ಮತ್ತು ನಿರೀಕ್ಷಣಾ ಜಾಮೀನು ನೀಡಬೇಕು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾನೆ. ನಿತ್ಯಾನಂದನನ್ನು ವಕೀಲ ರವಿ ನಾಯಕ್ ಪ್ರತಿನಿಧಿಸುತ್ತಿದ್ದಾರೆ.

ನಿತ್ಯಾನಂದ ತನ್ನ ವಕೀಲರ ಮುಖಾಂತರ ಮಂಗಳವಾರ, ಜೂ. 12ರಂದು ಹಾಕಿರುವ ನಿರೀಕ್ಷಣಾ ಜಾಮೀನು ಅರ್ಜಿ ಬುಧವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ. ನನಗೆ ನ್ಯಾಯಾಂಗ ಮೇಲೆ ವಿಶ್ವಾಸವಿದೆ. ಕಾನೂನಿನ ಮುಖಾಂತರವೇ ಹೋರಾಟ ನಡೆಸುತ್ತೇನೆ. ನನಗೆ ನ್ಯಾಯ ಸಿಗುವುದೆಂಬ ಭರವಸೆಯಿದೆ ಎಂದು ಜೂ.9ರಂದು ವೆಬ್‌ಸೈಟಿನಲ್ಲಿ ನೀಡಲಾಗಿದ್ದ ಹೇಳಿಕೆಯಲ್ಲಿ ನಿತ್ಯಾನಂದ ನುಡಿದಿದ್ದ.

ಬಿಡದಿ ಆಶ್ರಮದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನು ಹೊರಹಾಕಿದ ಮರುದಿನ ಕನ್ನಡಪರ ಹೋರಾಟಗಾರರು ಮತ್ತು ನಿತ್ಯಾನಂದ ಶಿಷ್ಯರ ನಡುವೆ ನಡೆದ ದೊಂಬಿಯ ನಂತರ ಪೊಲೀಸರೆದಿರು ವಿಚಾರಣೆಗೆ ಕೂಡ ಹಾಜರಾಗದೆ ನಿತ್ಯಾನಂದ ತಲೆಮರೆಸಿಕೊಂಡಿದ್ದಾರೆ. ಆಶ್ರಮದಲ್ಲಿ ಸನ್ಯಾಸಿಗಳಿಂದಲೇ ಹಿಂಸಾಚಾರ ನಡೆದಿದ್ದರೂ ಅವರನ್ನೇ ನಿತ್ಯಾನಂದ ಸಮರ್ಥಿಸಿಕೊಂಡಿದ್ದ.

ಈ ಘಟನೆಯ ವಿರುದ್ಧ ಇಡೀ ರಾಜ್ಯದಾದ್ಯಂತ ಸಾರ್ವಜನಿಕರಿಂದ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ನಿತ್ಯಾನಂದನನ್ನು ಗಡಿಪಾರು ಮಾಡಬೇಕು, ಆಶ್ರಮಕ್ಕೆ ಬೀಗ ಜಡಿಯಬೇಕು, ಎಲ್ಲ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಬೇಕು, ರಾಜ್ಯದಲ್ಲಿ ಕಾಲಿಡಲು ಅವಕಾಶ ಮಾಡಿಕೊಡಬಾರದು ಎಂಬ ಕೂಗು ಕೇಳಿಬಂದಿತ್ತು. ಜನರ ಆಕ್ರೋಶಕ್ಕೆ ಸ್ಪಂದಿಸಿದ್ದ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಕ್ರಮ ಜರುಗಿಸಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+