ರೆಡ್ಡಿಗೆ ಜಾಮೀನು : ಐದಲ್ಲ ಹತ್ತಲ್ಲ ಅರವತ್ತು ಕೋಟಿ ಡೀಲ್

ಓಬಳಾಪುರ ಮೈನಿಂಗ್ ಕಂಪನಿಯ ಮಾಲಿಕ ಜನಾರ್ದನ ರೆಡ್ಡಿಗೆ ಜಾಮೀನು ನೀಡಲು ರೆಡ್ಡಿ ಮತ್ತು ನ್ಯಾಯಮೂರ್ತಿ ಪಟ್ಟಾಭಿರಾಮ ರಾವ್ ಅವರ ನಡುವೆ ನಡೆದಿರುವ ಡೀಲ್ ಕೇವಲ 5 ಕೋಟಿ ರು. ಅಲ್ಲ, ಅವರಿಬ್ಬರ ನಡುವೆ ನಡೆದಿರುವುದು ಅನಾಮತ್ 60 ಕೋಟಿ ರು. ಡೀಲ್. ಮತ್ತು ಈ ಭಾರೀ ಮೊತ್ತದ ಹಣ ಕರ್ನಾಟಕದಿಂದ ರಾಜಕಾರಣಿಗಳಿಬ್ಬರು ಹೈದರಾಬಾದಿಗೆ ಸಾಗಿಸಿ ಬ್ಯಾಂಕ್‌ನಲ್ಲಿ ಜಮಾ ಮಾಡಿರುವುದು ಕೂಡ ಬಯಲಾಗಿದೆ.
ಇಡೀ ದೇಶವನ್ನೇ ಕಂಪಿಸುವಂತೆ ಮಾಡಿರುವ ಮತ್ತು ನ್ಯಾಯಾಂಗದಲ್ಲಿರುವ ಹುಳುಕನ್ನು ಬಯಲಿಗೆಳೆದಿರುವ ಈ ಪ್ರಕರಣದಲ್ಲಿ ಪಟ್ಟಾಭಿರಾಮ ರಾವ್ ಅವರ ಮಗ, ರಾಜಕಾರಣಿಗಳು, ಪತ್ರಕರ್ತರು, ನ್ಯಾಯವಾದಿಗಳು ಮತ್ತಿತರರು ಭಾಗಿಯಾಗಿದ್ದಾರೆಂಬುದು ಸಿಬಿಐಗೆ ದಕ್ಕಿರುವ ದೂರವಾಣಿ ಸಂಭಾಷಣೆಯ ದಾಖಲೆಯಿಂದ ತಿಳಿದುಬಂದಿದೆ. ಇದರಲ್ಲಿ ಆಂಧ್ರಪ್ರದೇಶದ ರಾಜಕಾರಣಿಗಳು ಮಾತ್ರವಲ್ಲ ಕರ್ನಾಟಕದ ರಾಜಕಾರಣಿಗಳು ಕೂಡ ಭಾಗಿಯಾಗಿದ್ದಾರೆಂಬುದನ್ನು ಸಿಬಿಐ ಬಯಲಿಗೆಳೆದಿದೆ.
ಪತ್ರಕರ್ತ ರಾಮಚಂದ್ರ ರೆಡ್ಡಿ ಎಂಬುವವರು ನ್ಯಾಯಮೂರ್ತಿ ಪಟ್ಟಾಭಿರಾಮ ರಾವ್ ಅವರ ಮಗ ಚಲಪತಿರಾವ್ ಅವರು ಡೀಲ್ ಬಗ್ಗೆ ದೂರವಾಣಿಯಲ್ಲಿ ಮಾತನಾಡಿ ಲಂಚದ ಹಣ ಫಿಕ್ಸ್ ಮಾಡಿರುವುದು ದಕ್ಕಿರುವ ದಾಖಲೆಯಲ್ಲಿ ಸಾಬೀತಾಗಿದೆ. ಸಂಭಾಷಣೆಯಲ್ಲಿ ಎಷ್ಟು ಹಣ ನೀಡಬೇಕು, ಯಾವ ರೀತಿ ಲಂಚದ ಹಣವನ್ನು ಬ್ಯಾಂಕುಗಳಲ್ಲಿ ಜಮಾ ಮಾಡಬೇಕು ಎಂಬಿತ್ಯಾದಿ ವಿವರಗಳು ಚಲಪತಿರಾವ್ ತಿಳಿಸಿರುವುದು ಗೊತ್ತಾಗಿದೆ.
ಬಲ್ಲ ಮಾಹಿತಿಗಳ ಪ್ರಕಾರ, ಕೆಎಂಎಫ್ ಅಧ್ಯಕ್ಷ, ಬಳ್ಳಾರಿ ನಗರದ ಶಾಸಕ ಸೋಮಶೇಖರ ರೆಡ್ಡಿ ಮತ್ತು ಕಂಪ್ಲಿ ಶಾಸಕ ಟಿಎಚ್ ಸುರೇಶ್ ಬಾಬು ಅವರು ರಸ್ತೆಯ ಮುಖಾಂತರ 60 ಕೋಟಿ ರು. ಹಣವನ್ನು ಹೈದರಾಬಾದಿಗೆ ತಲುಪಿಸಿದ್ದಾರೆ. ಜನಾರ್ದನ ರೆಡ್ಡಿಯ ಸಂಬಂಧಿ ಮತ್ತು ಆಂಧ್ರದ ಕಾನೂನು ಸಚಿವ ಎರಸು ಪ್ರತಾಪ್ ರೆಡ್ಡಿ ಮತ್ತು ದಿನೇಶ್ ರೆಡ್ಡಿ ಎಂಬುವವರೂ ಈ ಹಗರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಸಿಬಿಐ ನೀಡಿರುವ ಮಾಹಿತಿಯ ಮುಖಾಂತರ ಬಹಿರಂಗವಾಗಿದೆ.
ಜಾಮೀನು ಸಿಕ್ಕನಂತರ ಲಂಚದ ವಾಸನೆ ಸಿಗುತ್ತಿದ್ದಂತೆ ಕಾರ್ಯಗತರಾಗಿದ್ದ ಸಿಬಿಐ ಅಧಿಕಾರಿ ಲಕ್ಷ್ಮಿನಾರಾಯಣ್ ಅವರು, ಬಂಜಾರಾ ಹಿಲ್ಸ್ ನಲ್ಲಿರುವ ನ್ಯಾಯಮೂರ್ತಿಗಳ ಮನೆಗೆ ತೆರಳಿ, ವಿಚಾರಣೆ ನಡೆಸಿ, ಬ್ಯಾಂಕ್ ಲಾಕರುಗಳನ್ನು ಜಾಲಾಡಿ ಹಗರಣವನ್ನು ಬಯಲಿಗೆಳೆದಿದ್ದರು. ಒಂದು ಕಡೆ 2 ಕೋಟಿ ರು., ಬೇನಾಮಿ ಖಾತೆಯಲ್ಲಿ 3 ಕೋಟಿ ರು. ಮತ್ತೊಂದೆಡೆ 10 ಕೋಟಿ ರು. ಜಮಾ ಆಗಿರುವುದು ಬಹಿರಂಗವಾಗಿದೆ. ನಂತರ, ಮೇಲ್ನೋಟದಲ್ಲಿ ನ್ಯಾ. ಪಟ್ಟಾಭಿರಾಮ ಅವರು ಲಂಚಪಡೆದಿರುವುದು ಸಾಬೀತಾಗುತ್ತಿದ್ದಂತೆ ಅವರನ್ನು ಅಮಾನತು ಮಾಡಿದ ಆಂಧ್ರ ಹೈಕೋರ್ಟ್ ಜಡ್ಜ್ ನ್ಯಾ. ಮದನ್ ಲೋಕೂರ್ ಅವರು ತನಿಖೆಗೆ ಅಸ್ತು ಎಂದಿದ್ದರು.
ಭ್ರಷ್ಟಾಚಾರದ ಬೃಹತ್ ಸ್ವರೂಪವನ್ನು ಬಯಲಿಗೆಳೆದಿರುವ ಸಿಬಿಐ ಈ ಲಂಚ ಹಗರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಬೇಕಾಗಿದೆ. ಒಂದೆಡೆ 5 ಲಕ್ಷ ರು. ಲಂಚ ಕೇಳಿ ರೆಡ್ ಹ್ಯಾಂಡಾಗಿ ಸಿಕ್ಕುಬಿದ್ದಿದ್ದ ಕೆಜಿಎಫ್ ಶಾಸಕ ವೈ ಸಂಪಂಗಿ ಅವರನ್ನು ನ್ಯಾಯಾಲಯ ಶಿಕ್ಷಿಸಿದ್ದರೆ, ಮತ್ತೊಂದೆಡೆ 60 ಕೋಟಿ ರು. ಲಂಚದ ಆಮಿಷ ಒಡ್ಡಿದವರಿಗೆ ಸರಾಗವಾಗಿ ಜಾಮೀನು ಲಭ್ಯವಾಗುತ್ತಿದೆ.












Click it and Unblock the Notifications