ಗಣಿ ಅಕ್ರಮದಲ್ಲಿ ಎಸ್ಎಂ ಕೃಷ್ಣ ಪಾತ್ರವಿಲ್ಲ- ಹೆಗ್ಡೆ

ಅಣ್ಣಾ ತಂಡದ ಪ್ರಶಾಂತ್ ಭೂಷಣ್ ಅವರ ಆರೋಪ ಸಂಬಂಧ ಸ್ಪಷ್ಟನೆ ನೀಡಿರುವ ನ್ಯಾ. ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಸಂಬಂಧ ಹೆಸರು ಸೇರಿಸಿಲ್ಲ. ಆದರೆ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಗಣಿಗಾರಿಕೆ ಸಚಿವ ವಿ. ಮುನಿಯಪ್ಪ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ನಡೆಸಿರುವ ಅಕ್ರಮಗಳ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಹೀಗಾಗಿ ಕೃಷ್ಣ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡುವುದು ತಪ್ಪು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈಗ ಪ್ರಶಾಂತ್ ಭೂಷಣ್ ಅವರು ಎಸ್ ಎಂ ಕೃಷ್ಣ ಅವರ ಅಕ್ರಮಗಳ ಬಗ್ಗೆ ದಾಖಲೆಗಳಿವೆ ಎಂದು ಹೇಳುತ್ತಿದ್ದಾರೆ. ಅಲ್ಲದೆ ಎಸ್ ಎಂ ಕೃಷ್ಣ ಅವರ ವಿರುದ್ಧ ಹೆಚ್ಚಿನ ತನಿಖೆಯಾಗಬೇಕು ಎಂದೂ ಆಗ್ರಹಿಸುತ್ತಿದ್ದಾರೆ. ನಾನು ಬೆಂಗಳೂರಿನಲ್ಲಿರುವುದರಿಂದ ನನಗೆ ಆ ಬಗ್ಗೆ ಗೊತ್ತಿಲ್ಲ ಎಂದಿರುವ ಸಂತೋಷ್ ಹೆಗ್ಡೆ, ಈ ಬಗ್ಗೆ ಅವರೇ ನಿರ್ಧಾರ ತೆಗೆದುಕೊಳ್ಳಬೇಕು, ಹೆಚ್ಚಿನದಾಗಿ ಏನನ್ನೂ ಹೇಳುವುದಿಲ್ಲ ಎಂದಿದ್ದಾರೆ.
ಇದರ ಜತೆಗೆ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸೇರಿದಂತೆ 14 ಮಂದಿ ಸಚಿವರ ವಿರುದ್ಧ ಅಣ್ಣಾ ತಮಡ ನಡೆಸುತ್ತಿರುವ ವಾಗ್ದಾಳಿ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಎಲ್ಲದಕ್ಕೂ ದಾಖಲೆ ಇಟ್ಟುಕೊಂಡೇ ಮಾತನಾಡಬೇಕು ಎಂದು ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಬಿಜೆಪಿ ಏನನ್ನುತ್ತದೆ: ಅಣ್ಣಾ ತಂಡ ಪ್ರಧಾನಿ ವಿರುದ್ಧ ಬಳಸಿರುವ ಭಾಷೆ ಸರಿಯಲ್ಲ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ. ಪ್ರಧಾನಿ ಹುದ್ದೆಗೆ ಅದರದ್ದೇ ಆದ ಗೌರವವಿದೆ. ಅಲ್ಲದೆ ವ್ಯಕ್ತಿಗತವಾಗಿಯೂ ಇಂತಹ ಆರೋಪಗಳು ಸಲ್ಲದು ಎಂದು ಬಿಜೆಪಿಯ ರಾಜೀವ್ ಪ್ರತಾಪ್ ರೂಡಿ ಹೇಳಿದ್ದಾರೆ.
ಸಭ್ಯತೆ ಮೀರಬೇಡಿ-ಆರ್ ಎಸ್ಎಸ್:ಪ್ರಧಾನ ಮಂತ್ರಿಗಳನ್ನು ಟೀಕಿಸುವಾಗ ಸಭ್ಯತೆ ಕಾಪಾಡಬೇಕು ಎಂದು ಆರ್ ಎಸ್ಎಸ್ ಜಂಟಿ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನ ಮಂತ್ರಿಗಳು ಸರ್ಕಾರದಲ್ಲಿ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುತ್ತಾರೆ. ಹಾಗಾಗಿ ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಅಣ್ಣಾ ತಂಡಕ್ಕೆ ಆರ್ ಎಸ್ಎಸ್ ಪರೋಕ್ಷವಾಗಿ ತಿಳಿಯಹೇಳಿದೆ.
ನವದೆಹಲಿ ವರದಿ: ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅರಣ್ಯ ಭೂಮಿಯನ್ನು ನಿಯಮ ಮೀರಿ ಡಿರಿಸರ್ವ್ ಮಾಡಿ, ಗಣಿಗಾರಿಕೆಗೆ ನೀಡಿರುವುದಕ್ಕೆ ತಮ್ಮ ಬಳಿ ದಾಖಲೆ ಇದೆ ಎಂದು ಅಣ್ಣಾ ತಂಡದ ಸದಸ್ಯ, ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಹೇಳಿದ್ದಾರೆ.












Click it and Unblock the Notifications