ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4ನೇ ಬಾರಿಗೆ ಡಿವಿಎಸ್‌ ವಿರುದ್ಧ ಸಿಡಿದೆದ್ದ ಯಡಿಯೂರಪ್ಪ

By Srinath
|
Google Oneindia Kannada News

yeddyurappa-again-revolts-against-sadananda-gowda
ಬೆಂಗಳೂರು, ಮೇ 28: ತಾವೇ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂರಿಸಿದ್ದ ವ್ಯಕ್ತಿಯನ್ನು ಶತಾಯಗತಾಯ ಕೆಳಗಿಳಿಸಬೇಕೆಂದು ನಿರ್ಧರಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಅವರ ಬಂಟರು 4ನೇ ಬಾರಿಗೆ ಹಾಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ವಿರುದ್ಧ ಸಿಡಿದೆದ್ದಿದ್ದಾರೆ.

ಈ ನಿಟ್ಟಿನಲ್ಲಿ ಭಾನುವಾರ ಸಂಜೆ ಕ್ಷಿಪ್ರ ಕಾರ್ಯಾಚಾರಣೆ ನಡೆದಿದೆ. ಮಹಾರಾಷ್ಟ್ರದ ನಾಗಪುರಕ್ಕೆ ತೆರಳಿದ ಯಡಿಯೂರಪ್ಪ ಬೆಂಬಲಿಗ ಸಚಿವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿದ್ದಾರೆ.

ಅಕ್ರಮ ಗಣಿಗಾರಿಕೆ ಸಂಬಂಧ ಇತರೆ ಮಾಜಿ ಮುಖ್ಯಮಂತ್ರಿಗಳ ಬಗ್ಗೆ ಸದಾನಂದಗೌಡರು ಮೃದು ಧೋರಣೆ ತಳೆದಿದ್ದು, ಯಡಿಯೂರಪ್ಪ ವಿರುದ್ಧ ತಾರತಮ್ಯ ನೀತಿ ಅನುಸರಿಸಿದ್ದಾರೆ ಎಂದು ಅಲವತ್ತುಕೊಂಡಿದ್ದಾರೆ. ಅಷ್ಟೇ ಅಲ್ಲ. ಈ ವಿಷಯವನ್ನೇ ಮುಂದಿಟ್ಟುಕೊಂಡು ಸದಾನಂದಗೌಡ ಅವರನ್ನು ಬದಲಾವಣೆ ಮಾಡುವಂತೆಯೂ ಗಡ್ಕರಿಗೆ ಗಂಟುಬಿದ್ದಿದ್ದಾರೆ ಎನ್ನಲಾಗಿದೆ.

ಇದರಿಂದ ಆಡಳಿತಾರೂಢ ಬಿಜೆಪಿಯಲ್ಲಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳುವುದು ನಿಚ್ಚಳವಾಗಿದೆ. ಸಚಿವರಾದ ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಉಮೇಶ್‌ ಕತ್ತಿ, ಸಿ.ಎಂ.ಉದಾಸಿ, ಮುರುಗೇಶ್‌ ನಿರಾಣಿ ಹಾಗೂ ಎಂ.ಪಿ.ರೇಣುಕಾಚಾರ್ಯ ಅವರು ಗಡ್ಕರಿ ಅವರನ್ನು ಭೇಟಿ ಮಾಡಿದ್ದರು. ವಾಸ್ತವವಾಗಿ ಭಾನುವಾರ ಗಡ್ಕರಿ ಅವರ ಹುಟ್ಟುಹಬ್ಬ. ಹೀಗಾಗಿ ಅವರಿಗೆ ಶುಭ ಕೋರುವ ನೆಪದಲ್ಲಿ ಭೇಟಿ ಮಾಡಿದ ಈ ಸಚಿವರು ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ವಿವರಿಸಿದರು ಎಂದು ತಿಳಿದುಬಂದಿದೆ.

ಶನಿವಾರ ಸಚಿವ ಸಂಪುಟ ಸಭೆಗೂ ಮುನ್ನವೇ ಯಡಿಯೂರಪ್ಪ ಬೆಂಬಲಿಗ ಸಚಿವರು ಮುಖ್ಯಮಂತ್ರಿ ಸದಾನಂದಗೌಡರ ಕಚೇರಿಗೆ ತೆರಳಿ ನೇರವಾಗಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್‌. ಈಶ್ವರಪ್ಪ ಬಳಿಯೂ ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದರು.

4 ಕಾಲಘಟ್ಟಗಳು ಹೀಗಿವೆ:
ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬ ವಾದಕ್ಕೆ ಜನವರಿಯಲ್ಲಿ ನಾಂದಿ ಹಾಡಿದ ಬಿಎಸ್‌ವೈ ಪಡೆ ಕಳೆದ 3 ತಿಂಗಳಲ್ಲಿ ಸಿಎಂ ಸದಾನಂದರ ಬದಲಾವಣೆಗೆ ಒತ್ತಾಯಿಸುತ್ತಿರುವುದು ಇದು ನಾಲ್ಕನೆಯ ಬಾರಿಗೆ. ಆ ಕಾಲಘಟ್ಟಗಳು ಹೀಗಿವೆ: ಫೆಬ್ರವರಿ ಕೊನೆಯ ವಾರದಲ್ಲಿ ಚಿಂತನ ಮಂಥನ ಸಂದರ್ಭದಲ್ಲಿ. ಮಾರ್ಚ್ ಕೊನೆಯ ವಾರದಲ್ಲಿ ಬಜೆಟ್ ಸಂದರ್ಭದಲ್ಲಿ ಮತ್ತು ಮೇ 2ನೆ ವಾರದಲ್ಲಿ ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡಿದ ಸಂದರ್ಭದಲ್ಲಿ ಸದಾನಂದರು ಮತ್ತು ಈಶ್ವರಪ್ಪನವರು ವರಿಷ್ಠರಿಗೆ ಎಂದೋ ಬರೆದ ಪತ್ರದ ಬಗ್ಗೆ ತಕರಾರು ತೆಗೆದಾಗ.

English summary
The former Karnataka Chief Minister B S Yeddyurappa and his loyalists again hoisted flag against DV Sadananda Gowda. And they complained to party chief Nitin Gadkari about the same yesterday (May 28).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X