'ಕಳಂಕಿತ' ಯಡಿಯೂರಪ್ಪ ಬೆಂಬಲ ಮೋದಿಗೆ ಬೇಕಾ?

"ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಲು ಎಲ್ಲಾ ರೀತಿಯಿಂದಲೂ ಅರ್ಹತೆ ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಪಕ್ಷದ ಯಾವುದೇ ಉನ್ನತ ಹುದ್ದೆಗೆ ಮೋದಿ ಸೂಕ್ತ ವ್ಯಕ್ತಿ" ಎಂದು ಯಡಿಯೂರಪ್ಪ ಹೇಳಿರುವುದನ್ನು ಮೋದಿ ಯಾವ ರೀತಿ ಸ್ವೀಕರಿಸಲಿದ್ದಾರೆ? ಅಕ್ರಮ ಗಣಿಗಾರಿಕೆ, ಭೂ ಕಬಳಿಕೆ ಹಗರಣಗಳಲ್ಲಿ ಸಿಲುಕಿರುವ ಯಡಿಯೂರಪ್ಪ ಹೇಳಿಕೆಯಿಂದ ಪ್ರಧಾನಿ ಹುದ್ದೆಗೆ ಸಿದ್ಧರಾಗುತ್ತಿರುವ ಮೋದಿ 'ಬ್ರಾಂಡ್'ಗೆ ಹೊಡೆತ ಬೀಳುವುದೆ?
ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಯಾವುದೇ ಉನ್ನತ ಸ್ಥಾನಮಾನ ಸಿಗದಿದ್ದರಿಂದ ಮುನಿಸಿಕೊಂಡಿದ್ದ ಯಡಿಯೂರಪ್ಪ ಬಿಜೆಪಿಯಿಂದ ದೂರ ಸರಿಯುತ್ತಿದ್ದಾರೆ ಎಂಬ ಮಾತುಗಳೇ ಕೇಳಿಬರುತ್ತಿವೆ. ಜೊತೆಗೆ ಅವರ ಉರುಳಿಗೆ ಜೋತುಬಿದ್ದಿರುವ ಹಲವಾರು ಕ್ರಿಮಿನಲ್ ಪ್ರಕರಣಗಳು ಯಡಿಯೂರಪ್ಪನವರ ವರ್ಚಸ್ಸಿಗೆ ಸಾಕಷ್ಟು ಧಕ್ಕೆ ತಂದಿವೆ. ಎಲ್ಲಕ್ಕಿಂತ ಹೆಚ್ಚಾಗಿ ಈಶ್ವರಪ್ಪ, ಸದಾನಂದ ಗೌಡ ಅಂಥವರೇ ಬಹಿರಂಗವಾಗಿ ಯಡಿಯೂರಪ್ಪ ವಿರುದ್ಧ ಸೊಲ್ಲೆತ್ತುತ್ತಿದ್ದಾರೆ. ಇನ್ನು ಅಡ್ವಾಣಿ, ಸುಷ್ಮಾ, ಗಡ್ಕರಿ ಅಂಥವರು ಯಡಿಯೂರಪ್ಪನವರನ್ನು ಹತ್ತಿರಕ್ಕೂ ಸೇರಿಸುತ್ತಿಲ್ಲ.
'ಕಳಂಕಿತರು' ಎಂಹ ಹಣೆಪಟ್ಟಿ ಕಟ್ಟಿಕೊಂಡಿರುವ ಯಡಿಯೂರಪ್ಪ ಅವರಿಂದ ನರೇಂದ್ರ ಮೋದಿ ಅವರಿಗೆ 'ಪ್ರಧಾನಿ ಹುದ್ದೆಗೆ ಅರ್ಹ ವ್ಯಕ್ತಿ' ಎಂದು ಸರ್ಟಿಫಿಕೇಟ್ ನೀಡುವುದು ಬೇಕಿತ್ತಾ? ಎಂಬ ಮಾತುಗಳು ಕಿವಿಯಿಂದ ಕಿವಿಗೆ ಪಿಸುಗುಡುತ್ತಿವೆ. ಎಲ್ಲಕ್ಕಿಂತ ಹೆಚ್ಚಾಗಿ, ಸಂಜಯ್ ಜೋಶಿ ರಾಜೀನಾಮೆ ಪಡೆಯುವ ಮುಖಾಂತರ, ತಾವು ಒಂದು ಕೈ ಮೇಲೆಯೇ ಎಂದು ಸಾಬೀತುಪಡಿಸಿರುವ ನರೇಂದ್ರ ಮೋದಿ ಅವರು ಯಡಿಯೂರಪ್ಪನವರನ್ನು ಮುಂಬೈನಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಣಿಯಲ್ಲಿ ಬದಿಯಲ್ಲಿ ಸೇರಿಸಿಕೊಳ್ಳುತ್ತಾರಾ?
ಎಲ್ಲಕ್ಕಿಂತ ಹೆಚ್ಚಾಗಿ ಬೆಂಗಳೂರಿನಲ್ಲಿ ತಮ್ಮದೇ ಹೊಸ ಕಚೇರಿ ಆರಂಭಿಸಿರುವ ಯಡಿಯೂರಪ್ಪನವರು, ಬಿಜೆಪಿಯ ಯಾವುದೇ ಹಿರಿಯ ನಾಯಕರ ಛಾಯಾಚಿತ್ರವನ್ನು ಲಗತ್ತಿಸುವ ಬದಲು, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಚಿತ್ರವನ್ನು ತೂಗುಬಿಟ್ಟಿದ್ದು ಅನೇಕರ ಹುಬ್ಬೇರುವಂತೆ ಮಾಡಿದೆ. ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಯಾವುದೇ ಕಾರಣಕ್ಕೂ ಭಾಗವಹಿಸುವುದಿಲ್ಲ ಎಂಬ ಪ್ರತಿಜ್ಞೆ ಕೂಡ ಯಡಿಯೂರಪ್ಪ ಮಾಡಿದ್ದರು. ಆದರೂ, ಕೆಲವರು ಕರೆ ಮಾಡಿ ಮನವೊಲಿಸಿದ್ದರಿಂದ ಕಾರ್ಯಕಾರಣಿಯಲ್ಲಿ ಯಡಿಯೂರಪ್ಪ ಭಾಗವಹಿಸುತ್ತಿದ್ದಾರೆ. ಅಲ್ಲಿ ಸಿಗಬೇಕಾದ ಎಲ್ಲಾ ಮರ್ಯಾದೆಗಳು ಅವರಿಗೆ ಸಿಗುತ್ತವಾ?












Click it and Unblock the Notifications