ಶೋಭಾ ಕರಂದ್ಲಾಜೆ ವಿರುದ್ಧ ಪ್ರೇಮಪತ್ರ ಬರೆದಿಲ್ಲ

ಆದರೂ ಈ ಬಗ್ಗೆ ತಲೆಕೆಡಿಸಿಕೊಳ್ಳದ ಸದಾನಂದ ಗೌಡರು 'ನಾನೇನೂ ಶೋಭಾ ಕರಂದ್ಲಾಜೆ ವಿರುದ್ಧ ಶಿಸ್ತು ಕ್ರಮಕ್ಕೆ ಕದ್ದುಮುಚ್ಚಿ ಪತ್ರ ಬರೆದಿಲ್ಲ. ಅದು ಪ್ರೇಮಪತ್ರವೂ ಅಲ್ಲ. ನಾನು ಯಾರಿಗೂ ಹೆದರುವುದೂ ಇಲ್ಲ' ಎಂದು ತಮ್ಮ ನಡೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಸದಾನಂದ ಗೌಡರ ಪತ್ರದ ಬಗ್ಗೆ ಚರ್ಚಿಸಲು ಯಡಿಯೂರಪ್ಪ ಅವರು ತಮ್ಮ ನಿವಾಸದಲ್ಲಿ ನಾಳೆ (ಮೇ 11) ಬೆಂಬಲಿಗರ ಸಭೆ ಕರೆದಿದ್ದಾರೆ. ಈ ಮಧ್ಯೆ, ನಾಯಕರ ನಡುವಣ ಜಗಳದಿಂದಾಗಿ ಶಾಸಕರು ಆತಂಕಕ್ಕಿಳಗಾಗಿದ್ದಾರೆ. ಅದರಲ್ಲೂ ಸಚಿವ ಸ್ಥಾನದ ಆಕಾಂಕ್ಷಿಗಳು ತೀವ್ರ ನಿರಾಶೆಯ ಮಡುವಿನಲ್ಲಿದ್ದಾರೆ. ಸಚಿವ ಸಂಪುಟದ ವಿಸ್ತರಣೆ ಕಥೆಯೇನಾಗಲಿದೆ? ನಾಯಕತ್ವ ಬದಲಾಗಲಿದೆಯೇ? ಅಥವಾ ಚುನಾವಣೆಗೆ ಸಿದ್ಧವಾಗಬೇಕಾ? ಎಂಬ ಪ್ರಶ್ನೆಗಳು ಅವರನ್ನು ಕಾಡತೊಡಗಿವೆ.
ಈ ಮಧ್ಯೆ ದೆಹಲಿಯಲ್ಲಿ ಬಿಜೆಪಿ ವರಿಷ್ಠರು ತುಟಿಕ್ ಪಿಟಿಕ್ ಎನ್ನದೆ ದಿವ್ಯಮೌನಕ್ಕೆ ಶರಣಾಗಿದ್ದಾರೆ. ಮೊದಲು ಯಡಿಯೂರಪ್ಪ ವಿರುದ್ಧದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಹೊರಬೀಳಲಿದೆ. ಅದಕ್ಕೆ ತಕ್ಕಂತೆ ಕಾರ್ಯತಂತ್ರ ರೂಪಿಸಿದರೆ ಆದೀತು ಎಂದು ಸುಮ್ಮನಾಗಿದ್ದಾರೆ.
ಶಾಸಕಾಂಗ ಸಭೆ ಕರೆಯೊಲ್ಲ: ಸದಾನಂದ ಗೌಡರು ವರಿಷ್ಠರಿಗೆ ಬರೆದಿರುವ ಪತ್ರದ ಬಗ್ಗೆ ವಿವರವಾಗಿ ಚರ್ಚಿಸಲು ಶಾಸಕಾಂಗ ಸಭೆ ಕರೆಯಬೇಕು ಎಂದು ಯಡಿಯೂರಪ್ಪ ಪರ ಬಣ ಆಗ್ರಹಿಸಿದೆ. ಆದರೆ 19 ಶಾಸಕರ ಸಹಿಯುಳ್ಳ ಪತ್ರ ಕೈ ಸೇರಿದೆ. ಆದರೆ ಶಾಸಕಾಂಗ ಪಕ್ಷದ ಸಬೇ ಕರೆಯವುದಿಲ್ಲ ಎಂದು ಮುಖ್ಯಮಂತ್ರಿ ಡಿವಿ ಎಸ್ ಸ್ಪಷ್ಟಪಡಿಸಿದ್ದಾರೆ.











Click it and Unblock the Notifications