ಪಾಪ! ನಿವೃತ್ತ ಜಡ್ಜ್ ಗೆ 3 ವರ್ಷ ಜೈಲು

ಅದು ಬರೋಬ್ಬರಿ 26 ವರ್ಷಗಳ ಹಿಂದಿನ ಕೇಸ್. ಗುಲಾಬ್ ತುಲ್ಸಿಯಾ ಎಂಬುವವರು ನವದೆಹಲಿಯ ಪಾಟಿಯಾಲ ಹೌಸ್ ನ್ಯಾಯಾಲಯದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಆಗಿದ್ದರು. ಆದರೆ 1986ರಲ್ಲಿ ಕಂಪನಿಯ ಚಲನ್ ವಿತರಣೆ ಪ್ರಕರಣದಲ್ಲಿ ತೀರ್ಪು ನೀಡಲು ಗುಲಾಬ್ 2,000 ರೂ. ಲಂಚ ಪಡೆದಿದ್ದರು.
ಅದು ಕಳೆದ ವಾರ ಸಾಬೀತಾದ ಹಿನ್ನೆಲೆಯಲ್ಲಿ ಈಗ 74 ವರ್ಷದ ಮಾಜಿ ನ್ಯಾಯಾಧೀಶ ಗುಲಾಬ್ ತುಲ್ಸಿಯಾನಿಗೆ ವಿಶೇಷ ಸಿಬಿಐ ನ್ಯಾಯಾಧೀಶ ವಿಕೆ ಮಹೇಶ್ವರಿ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ 50,000 ರೂ. ದಂಡವನ್ನೂ ವಿಧಿಸಿದ್ದಾರೆ.
ಈ ಮಧ್ಯೆ, ನ್ಯಾಯಾಲಯವು ತನ್ನ ತೀರ್ಪನ್ನು ಮೇ 28ರ ವರೆಗೆ ತಡೆ ಹಿಡಿದಿದೆ. ವೈಯಕ್ತಿಕ ಬಾಂಡ್ ಆಧಾರದಲ್ಲಿ ಜಾಮೀನು ನೀಡಿರುವ ನ್ಯಾಯಾಲಯ, ಮೇ 29ರೊಳಗಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ತುಲ್ಸಿಯಾನಿಗೆ ನಿರ್ದೇಶನ ನೀಡಿದೆ. 'ನ್ಯಾಯಾಂಗವು ಸಾರ್ವಜನಿಕರ ನಂಬಿಕೆಯ ಕಚೇರಿಯಾಗಿದೆ.
ಹೀಗಾಗಿ ಇಲ್ಲಿ ಉತ್ಕೃಷ್ಟ ಪ್ರಾಮಾಣಿಕತೆ, ಸಮಗ್ರತೆ ಮತ್ತು ದೃಢ ನೈತಿಕತೆಯನ್ನು ನ್ಯಾಯಾಧೀಶರಿಂದ ನಿರೀಕ್ಷಿಸುತ್ತದೆ. ಇಲ್ಲವಾದಲ್ಲಿ, ಅದು ನ್ಯಾಯ ದಾನದ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗಿರುವ ಭರವಸೆಯನ್ನು ಕುಂದಿಸುತ್ತದೆ' ಎಂದು ತೀರ್ಪಿನಲ್ಲಿ ಎಚ್ಚರಿಸಲಾಗಿದೆ.












Click it and Unblock the Notifications