ಯುವ ಮನಸ್ಸಿನ ನೇತಾರ ಜಯಪ್ರಕಾಶ್ ಹೆಗ್ಡೆ

ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ಮಾಜಿ ಸಚಿವ ಕೆ ಜಯಪ್ರಕಾಶ್ ಹೆಗ್ಡೆ ಅವರು ಆಯ್ಕೆಯಾಗಿದ್ದಾರೆ. ಬಿಜೆಪಿಯ ಯುವ ನೇತಾರ ಕಾರ್ಕಳದ ವಿ ಸುನಿಲ್ ಕುಮಾರ್ ಗೆ ಸಮಬಲದ ಸ್ಪರ್ಧೆ ಒಡ್ಡಬಲ್ಲ ಸಾಮರ್ಥ್ಯವುಳ್ಳ ಯುವ ಮನಸ್ಸಿನ ನೇತಾರ ಜಯಪ್ರಕಾಶ್ ಹೆಗ್ಡೆ ಅವರ ಸಂಕ್ಷಿಪ್ತ ಪರಿಚಯ ಇಲ್ಲಿದೆ...
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬಂಟ ಸಮುದಾಯದ ಚಂದ್ರಶೇಖರ್ ಹೆಗ್ಡೆ ದಂಪತಿಗಳಿಗೆ ಜಯಪ್ರಕಾಶ್ ಅವರು ಜನಿಸಿದರು. ಯುವ ನಾಯಕರಾಗಿ ಬೆಳೆದ ಹೆಗ್ಡೆ, ಚಿಕ್ಕ ವಯಸ್ಸಿನಲ್ಲೇ ರಾಜಕೀಯದತ್ತ ಆಕರ್ಷಿತರಾಗಿದ್ದರು. ಹೆಗ್ಡೆ ಅವರ ಕುಟುಂಬದಲ್ಲಿ ಪತ್ನಿ ಶೋಭಾ ಹೆಗ್ಡೆ ಹಾಗೂ ಪುತ್ರ ನಿಶಾಂತ್ ಮತ್ತು ಪುತ್ರಿ ದಿವ್ಯಾ ಇದ್ದಾರೆ.
* 1972-78ರ ಅವಧಿಯಲ್ಲಿ ವಿಜಯ ಬ್ಯಾಂಕ್ ನೌಕರರ ಯೂನಿಯನ್‌ನ ಉಪಾಧ್ಯಕ್ಷರಾಗಿ ನಂತರ ಅಧ್ಯಕ್ಷರಾಗಿ ದುಡಿದರು.
* ಅಖಿಲ ಭಾರತ ಯುವ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ರಾಜಕೀಯ ಪ್ರವೇಶಿಸಿದರು.
* 1987ರಲ್ಲಿ ಸ್ಪೈನ್‌ನ ವೆಲೆನ್ಸಿಯಾದಲ್ಲಿ ನಡೆದ ಇಂಟರ್‌ನ್ಯಾಷನಲ್ ಯೂನಿಯನ್ ಆಫ್ ಸೋಷಿಯಲಿಸ್ಟ್ ಯೂತ್‌ನ 'ಯುವಜನೋತ್ಸವ"ದಲ್ಲಿ ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದರು.
* ಯುವ ರಾಜಕೀಯ ನೇತಾರರ ಅಮೆರಿಕನ್ ಕೌನ್ಸಿಲ್ ಏರ್ಪಡಿಸಿದ ಪ್ರಜಾಪ್ರಭುತ್ವ ಸಮ್ಮೇಳನದಲ್ಲಿ ಹೆಗ್ಡೆ ಅವರು ಎರಡು ಬಾರಿ(1986, 1989) ಭಾರತವನ್ನು ಪ್ರತಿನಿಧಿಸಿದ್ದರು.
* 1991ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾಮನ್ವೆಲ್ತ್ ಯುವ ಕಾರ್ಯಕ್ರಮದಲ್ಲೂ ಅವರು ಭಾರತದ ಪ್ರತಿನಿಧಿಯಾಗಿದ್ದರು.
* ಜನತಾದಳದ ಮೂಲಕ ರಾಜ್ಯದ ರಾಜಕೀಯ ರಂಗಕ್ಕೆ ಪ್ರವೇಶ ಪಡೆದ ಜಯಪ್ರಕಾಶ್ ಹೆಗ್ಡೆ, 1985ರ ಮೊದಲ ಪ್ರಯತ್ನದಲ್ಲೇ ಸೋಲುಂಡಿದ್ದರು.
*1994ರಲ್ಲಿ ಬ್ರಹ್ಮಾವರ ಕ್ಷೇತ್ರದಲ್ಲೇ ಮೊದಲ ಬಾರಿ ಜಯಗಳಿಸುವ ಮೂಲಕ ರಾಜ್ಯ ವಿಧಾನಸಭೆಯನ್ನು ಪ್ರವೇಶಿಸಿದ್ದರು. ನಂತರ ಬ್ರಹ್ಮಾವರ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವವರೆಗೆ ಸತತ 11 ವರ್ಷ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
* 1994-99ರ ಅವಧಿಯಲ್ಲಿ ಅವರು ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಬಂದರು ಮತ್ತು ಮೀನುಗಾರಿಕಾ ಸಚಿವರಾಗಿ ಜನ ಮೆಚ್ಚುಗೆ ಕಾರ್ಯಗಳನ್ನು ಮಾಡಿದರು.
* 1999ರಲ್ಲಿ ಅವರು ಮತ್ತೆ ಇದೇ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಜಯಗಳಿಸಿದರು. * 2004 ರಲ್ಲಿ ನಡೆದ 12ನೇ ವಿಧಾನಸಭಾ ಚುನಾವಣೆಯಲ್ಲೂ ಗೆಲುವು ಸಾಧಿಸಿ ಹ್ಯಾಟ್ರಿಕ್ ಸಾಧಿಸಿದರು.
* 2008 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಂದಾಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಹಾಲಾಡಿ ಶ್ರೀನಿವಾಸ ಶೆಟ್ಟರ ವಿರುದ್ಧ ಸೋಲನುಭವಿಸಿದರು.
* 2009ರ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದ ಅವರು ಡಿ.ವಿ.ಸದಾನಂದ ಗೌಡರಿಂದ ಕೇವಲ 27,018 ಮತಗಳಿಂದ ಸೋತರು.
ಕ್ರೀಡಾಪ್ರೇಮಿ ಹೆಗ್ಡೆ: ಬ್ರಹ್ಮಾವರದಲ್ಲಿ ಹಲವು ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ. ಕ್ರಿಕೆಟ್ ಪ್ರೇಮಿಯಾಗಿ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಶಿವಮೊಗ್ಗ ತಂಡ(ಮಲ್ನಾಡ್ ಗ್ಲ್ಯಾಡಿಯೇಟರ್ಸ್)ದ ಮಾಲೀಕರಾಗಿದ್ದಾರೆ.
ಜಡ್ಜ್ ಚಂದ್ರಶೇಖರ್ ಹೆಗ್ದೆ ಅವರ ಪುತ್ರರಾಗಿ ವಕೀಲ ವೃತ್ತಿಯನ್ನು ಮೊದಲಿಗೆ ಅಪ್ಪಿಕೊಂಡ ಜಯಪ್ರಕಾಶ್ ಅವರು ನಂತರದ ದಿನಗಳಲ್ಲಿ ಜನನಾಯಕರಾಗಿ ಬೆಳೆದರು. ಸುಮಾರು 25 ವರ್ಷಗಳ ಕಾಲದಿಂದ ರಾಜಕೀಯದಲ್ಲಿ ಉತ್ತಮ ಹೆಸರು ಪಡೆದಿರುವ ಹೆಗ್ಡೆ ಅವರಿಗೆ ಈ ಬಾರಿ ಅಗ್ನಿಪರೀಕ್ಷೆಯಲ್ಲಿ ಗೆಲ್ಲುವ ವಿಶ್ವಾಸವಿದೆ.












Click it and Unblock the Notifications