ಸಿಂದಗಿಯಲ್ಲಿ ಪಾಕ್ ಧ್ವಜ: ಶ್ರೀರಾಮಸೇನೆ ವಿದ್ಯಾರ್ಥಿಗಳ ಕುಕೃತ್ಯ

'ಬಂಧಿತ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ತಂಡದ ಎಲ್ಲ ಸದಸ್ಯರು ಈ ಕೃತ್ಯವನ್ನು ತಾವು ಮಾಡಿದ್ದಾಗಿ ಒಪ್ಪಿಕೊಂದ್ದಾರೆ. ಈ ವ್ಯಕ್ತಿಗಳು ತಾವೇ ಪಾಕಿಸ್ತಾನದ ಧ್ವಜ ತಯಾರಿಸಿ, ಅದನ್ನು ಹಾರಿಸಿರುವ ಬಗ್ಗೆ ಸಾಂದರ್ಭಿಕ ಸಾಕ್ಷ್ಯಗಳು ನಮ್ಮ ಬಳಿ ಇವೆ. ಈ ಕೃತ್ಯ ನಡೆಸಲು ಕಾರಣ ಹಾಗೂ ಉದ್ದೇಶದ ಬಗ್ಗೆ ತನಿಖೆ ನಡೆಯುತ್ತಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಡಿ.ಸಿ. ರಾಜಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೊಸ ವರ್ಷದ ಮೊದಲ ದಿನ ನಸುಕಿನಲ್ಲಿ ನಡೆದಿದ್ದ ಈ ಘಟನೆ ಜಿಲ್ಲೆಯಲ್ಲಿ ತೀವ್ರ ಖಂಡನೆಗೆ ಒಳಗಾಗಿತ್ತು. ಆರೋಪಿಗಳ ಪತ್ತೆಗೆ ಆಗ್ರಹಿಸಿ ನಿರಂತರ ಪ್ರತಿಭಟನೆ, ಬಂದ್‌ಗಳನ್ನು ನಡೆಸಲಾಗಿತ್ತು.
ಶ್ರೀರಾಮ ಸೇನೆಯವರೇ ಬುಧವಾರ ವಿಜಾಪುರ ಬಂದ್‌ಗೆ ಕರೆ ನೀಡಿದ್ದರು. ಹಿಂದೂಪರ ಸಂಘಟನೆಯವರೇ ಈ ಕೃತ್ಯವೆಸಗಿದ್ದಾರೆ ಎಂಬ ಪೊಲೀಸರ ಹೇಳಿಕೆಯಿಂದ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಅತ್ಯಂತ ಸೂಕ್ಷ್ಮ ಹಾಗೂ ಗಂಭೀರವಾಗಿದ್ದ ಈ ಪ್ರಕರಣದ ತನಿಖೆಗೆ ಇಂಡಿ ಡಿವೈಎಸ್ಪಿ ಎಂ.ಮುತ್ತುರಾಜ್ ನೇತೃತ್ವದಲ್ಲಿ, ಡಿಸಿಐಬಿ ಇನ್ಸ್‌ಪೆಕ್ಟರ್ ಸಿದ್ದೇಶ್ವರ, ಪಿಎಸ್‌ಐ ಬಾಬಾಗೌಡ ಪಾಟೀಲ ಹಾಗೂ ಸಿಬ್ಬಂದಿಯನ್ನು ಒಳಗೊಂಡ ತನಿಖಾ ತಂಡ ರಚಿಸಲಾಗಿತ್ತು.
ಪೊಲೀಸರಿಗೆ ಬಹುಪರಾಕ್: ಘಟನೆ ನಡೆದ ಮೂರು ದಿನಗಳಲ್ಲಿಯೇ ಆರೋಪಿಗಳನ್ನು ಬಂಧಿಸಿರುವ ತಂಡಕ್ಕೆ 10 ಸಾವಿರ ರೂಪಾಯಿ ನಗದು ಬಹುಮಾನ ಘೋಷಿಸಲಾಗಿದೆ. ಪ್ರಭಾರ ಜಿಲ್ಲಾಧಿಕಾರಿ ಕಾಶಿನಾಥ ಪವಾರ, ತನಿಖಾ ತಂಡದವರು ಪತ್ರಿಕಾಗೋಷ್ಠಿಯಲ್ಲಿದ್ದರು.












Click it and Unblock the Notifications