ಯಾರು ತಿಳಿಯರು ನನ್ನ ಭುಜಬಲದ ಪರಾಕ್ರಮ

ಗುಪ್ತಗಾಮಿನಿಯಾಗಿ ಪ್ರವಹಿಸುತ್ತಿದ್ದ ಭಿನ್ನಮತದ ಕರೆಂಟು ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ತವರು ಜಿಲ್ಲೆಯಲ್ಲಿಯೇ ಸ್ಫೋಟಗೊಂಡಿದೆ. ಬಳ್ಳಾರಿಯಲ್ಲಿ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಯಡಿಯೂರಪ್ಪ ಪ್ರಭಾವ ಕಡಿಮೆಯಾಗಿರುವುದು ಕಂಡುಬರುತ್ತಲೇ ತಣ್ಣಗಾಗಿದ್ದ ಈಶ್ವರಪ್ಪ ಉಗ್ರಪ್ರತಾಪಿಯಾಗಿದ್ದಾರೆ.
ದಾವಣಗೆರೆಯಲ್ಲಿ ಹೇಳಿದ್ದನ್ನೇ ಯಡಿಯೂರಪ್ಪ ಶಿವಮೊಗ್ಗದಲ್ಲಿ ಶನಿವಾರ ಪ್ರತಿಧ್ವನಿಸಿದ್ದಾರೆ. 'ರಾಜ್ಯದ ಜನತೆ ನನ್ನನ್ನೇ ನಾಯಕ ಎಂದು ತಿಳಿದಿದೆ. ನಾನೇ ಬಿಜೆಪಿ ತಂಡದ ಕ್ಯಾಪ್ಟನ್' ಎಂದು ಹೇಳಿದ್ದರೆ, 'ಅದೆಲ್ಲ ಸಾಧ್ಯವಿಲ್ಲ. ಸಾಮೂಹಿಕ ನಾಯಕತ್ವಕ್ಕೆ ಬಿಜೆಪಿ ಹೈಕಮಾಂಡ್ ಕೂಡ ಅಸ್ತು ಎಂದಿದೆ. ಏಕ ನಾಯಕತ್ವದ ಪ್ರಶ್ನೆಯೇ ಉದ್ಭವಿಸುವುದಿಲ್ಲ' ಎಂದು ಈಶ್ವರಪ್ಪ ಅಬ್ಬರಿದ್ದಾರೆ.
ಇಷ್ಟು ಮಾತ್ರವಲ್ಲ, ಶ್ರೀರಾಮುಲು ಸೇರಿದಂತೆ ಪಕ್ಷೇತರರನ್ನು ಬಿಜೆಪಿಗೆ ಸೆಳೆಯಲು ಯಡಿಯೂರಪ್ಪ ಎಲ್ಲ ತಂತ್ರಗಾರಿಕೆ ನಡೆಸುತ್ತಿದ್ದರೆ, ಬಿಜೆಪಿ ಸಂಪುಟದಲ್ಲಿ ಪಕ್ಷೇತರರಿಗೆ ಯಾವುದೇ ಸಚಿವ ಸ್ಥಾನ ಲಭಿಸುವುದಿಲ್ಲ ಎಂದು ಬಹಿರಂಗವಾಗಿಯೇ ಯಡಿಯೂರಪ್ಪನವರನ್ನು ಈಶ್ವರಪ್ಪ ವಿರೋಧಿಸಿದ್ದಾರೆ. ವಾಲಿ ಸುಗ್ರೀವರಂತಿದ್ದ ಯಡಿಯೂರಪ್ಪ ಮತ್ತು ಈಶ್ವರಪ್ಪ ಈಗ ಯುದ್ಧಕ್ಕೆ ಅಣಿಯಾಗಿದ್ದಾರೆ.
ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟುಹಿಡಿದು ಹೈಕಮಾಂಡಿಗೆ ಜ.19ರ ಗಡುವನ್ನು ನೀಡಿರುವ ಯಡಿಯೂರಪ್ಪ ತಮ್ಮ ಪಟ್ಟನ್ನು ಸಡಲಿಸದಿದ್ದರೆ ಬಿಜೆಪಿ ಎರಡು ಹೋಳಾಗುವುದು ಖಚಿತ ಎಂದು ಶಿವಮೊಗ್ಗದ ಕಾರ್ಯಕರ್ತರು ಗುಸುಗುಸು ಮಾತಾಡಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿ ಹಿರಿಯ ನಾಯಕರು ಸದಾನಂದ ಗೌಡ ಮತ್ತು ಈಶ್ವರಪ್ಪ ಅವರನ್ನು ಡಿ. 28ರಂದು ದೆಹಲಿಗೆ ಬನ್ನಿರೆಂದು ಆಹ್ವಾನ ನೀಡಿದ್ದಾರೆ.











Click it and Unblock the Notifications