ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ!

ಹೀಗಾಗಿ ಹಾಲಿಗೆ ನೀರು, ನೀರಿಗೆ ಹಾಲು ಬೆರೆಸಿ ಕಲಬೆರಕೆ ವ್ಯಾಪಾರ ನಿರತರಾಗಿದ್ದವರಿಗೆ ಡಬ್ಬಲ್ ಹೊಡೆತ ಬಿದ್ದಿದೆ. ಇನ್ನು ಸಾಮಾನ್ಯ ನಾಗರಿಕರಿಗೆ ಸಹಿಸಲಾಗದ ಹೊರೆ.
ಕೆಎಂಎಫ್ ಹಾಲಿನ ಬೆಲೆ, ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ ದರ ಏರಿಕೆ, ಆಟೋ ಮೀಟರ್ ಕನಿಷ್ಟ ಪ್ರಯಾಣ ದರ ಏರಿಕೆ ವಿರುದ್ಧದ ಕೂಗುಗಳ ಮಧ್ಯೆ ಹೊಸ ಸುದ್ದಿಯಾಗಿ ಕುಡಿಯುವ ನೀರಿನ ಬೆಲೆ ಏರಿಕೆಯ ಬಿಸಿ ಕರ್ನಾಟಕದ ಜನತೆಗೆ ಚಳಿಗಾಲದ ಶಾಕ್ ಆಗಿ ಬಂದಿದೆ.
ಜನ ಸಾಮಾನ್ಯರ ನಿತ್ಯ ಬಳಕೆಯ ವಸ್ತು, ಪದಾರ್ಥ ಸೇವೆಗಳ ಬೆಲೆಗಳು ಏರುತ್ತಲೇ ಇರುವುದರಿಂದ ಜನ ಕಂಗಾಲಾಗಿದ್ದಾರೆ. ಬೆಲೆಯನ್ನು ಇಳಿಸುವ ಯಾವ ಮಾರ್ಗವೂ ಜನತೆಯ ಬಳಿ ಇಲ್ಲದಿರುವುದರಿಂದ ರಾಘವೇಂದ್ರ ಸ್ವಾಮಿಗಳ ಸ್ತುತಿ ಅನಿವಾರ್ಯವಾಗಿದೆ.
ರಾಜ್ಯದ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ದರ ಏರಿಸುವ ಚಿಂತನೆ ನಡೆದಿದೆ ಎಂದು ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಪೌರಾಡಳಿತ ವ್ಯಾಪ್ತಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 120 ಕೋಟಿಗಳ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದ್ದು, ಆದರೆ ಕೇವಲ 60 ಕೋಟಿ ರೂ ಸಂಗ್ರಹವಾಗಿದೆ. ಆಸ್ತಿ ತೆರಿಗೆ ಸಂಗ್ರಹ ಕಾರ್ಯ ಮಾತ್ರ ಸಮರ್ಪಕವಾಗಿ ಜಾರಿಯಲ್ಲಿದೆ.
ಆದರೆ, ನೀರಿನ ತೆರಿಗೆ ಸಂಗ್ರಹ ಕುಂಠಿತವಾಗಿದೆ. ನೀರಿನ ದರ ಏರಿಕೆ ಏಕಾಏಕಿ ಮಾಡುವುದಿಲ್ಲ. ಮೊದಲು ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಉತ್ತಮಗೊಳಿಸಿ ನಂತರ ದರ ಏರಿಕೆ ಪ್ರಸ್ತಾಪದ ಬಗ್ಗೆ ಚರ್ಚಿಸಲಾಗುವುದು ಎಂದು ಸಚಿವ ಬಾಲಚಂದ್ರ ಹೇಳಿದರು.
ಹಾಲಿನ ದರ ಏರಿಕೆ: ಉತ್ಪಾದನೆ ವೆಚ್ಚ ಹೆಚ್ಚಳ, ಸಾಗಾಣಿಕೆ ವ್ಯವಸ್ಥೆಯಲ್ಲಿ ವ್ಯತ್ಯಯದ ಹಿನ್ನೆಲೆಯಲ್ಲಿ ಮಹಾಮಂಡಲ ದರ ಹೆಚ್ಚಳಕ್ಕೆ ಮುಂದಾಗಲು ಕಾರಣ ಎನ್ನಲಾಗಿದೆ. ಪ್ರತೀ ಲೀಟರ್‌ಗೆ 4 ರೂ ಹೆಚ್ಚಿಸುವ ಬಗ್ಗೆ ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದೆ.












Click it and Unblock the Notifications