ಬೆಂಗಳೂರು ಯುವಕನ ಆಹುತಿ ತೆಗೆದ ಪ್ರೇಮ ವೈಫಲ್ಯ

ಮೃತನನ್ನು ತುಮಕೂರು ಜಿಲ್ಲೆಯ ಕುಣಿಗಲ್ ಬಳಿಯ ಹುಲಿಯೂರುದುರ್ಗದ ಮೂಲದ, ಬೆಂಗಳೂರಿನ ಮಲ್ಲತ್ತಹಳ್ಳಿಯ ನಿವಾಸಿ ದಯಾನಂದ (28) ಎಂದು ಗುರುತಿಸಲಾಗಿದೆ. ಆತ ಕಾಲ್ ಸೆಂಟರೊಂದರಲ್ಲಿ ಕ್ಯಾಬ್ ಡ್ರೈವರಾಗಿ ಕಾರ್ಯ ನಿರ್ವಹಿಸುತ್ತಿದ್ದ.
ದಯಾನಂದನಿಗೆ ಜಯಲಕ್ಷ್ಮಿ ಎಂಬ ಯುವತಿ ಜೊತೆ ಮದುವೆಯಾಗಿದ್ದ. ದಂಪತಿಗಳಿಗೆ ಒಂದು ಮಗುವೂ ಇತ್ತು. ಆದರೆ ಪಾಪಿ ಮನಸು ಕೇಳಬೇಕಲ್ಲ. ಸಂಗೀತಾ ಎಂಬ ಯುವತಿಯನ್ನು ಪ್ರೇಮಿಸಲು ಪ್ರಾರಂಭಿಸಿದ. ಇದು ತಿಳಿಯುತ್ತಿದ್ದಂತೆ ಪ್ರೇಯಸಿಯ ಮನೆಯವರು ದೂರ ಇರುವಂತೆ ದಯಾನಂದನನ್ನು ಎಚ್ಚರಿಸಿದ್ದಾರೆ.
ಇದರಿಂದ ತೀವ್ರ ಮನೋಕ್ಷೋಭೆಗೆ ಒಳಗಾದ ದಯಾನಂದ 11 ಗಂಟೆ ಸುಮಾರಿಗೆ ತಾನು ಓಡಿಸುತ್ತಿದ್ದ ಟಾಟಾ ಸುಮೋ ಕಾರಿನಲ್ಲಿ ಕುಳಿತು, ಬೆಲ್ಟ್ ಕಟ್ಟಿಕೊಂಡು, ಪೊಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ. ಅವನೊಡನೆ ಕಾರು ಕೂಡ ಧಗಧಗನೆ ಉರಿಯಲು ಪ್ರಾರಂಭಿಸಿದ್ದರಿಂದ ಅವನನ್ನು ಉಳಿಸಲು ದಾರಿಹೋಕರಿಗೆ ಸಾಧ್ಯವಾಗಿಲ್ಲ.
ಆತನ ಸುಟ್ಟು ಕರಕಲಾಗಿದ್ದ ದೇಹವನ್ನು ಕೆಂಗೇರಿ ಬಳಿಯ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದ್ದು, ಬುಧವಾರ ಶವಪರೀಕ್ಷೆ ಮಾಡಲಾಗುವುದು. ಪೊಲೀಸರು ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.












Click it and Unblock the Notifications