'ಹ್ಯಾಟ್ರಿಕ್ ಹೀರೊ' ಶ್ರೀರಾಮುಲು ಸಾಧನೆಯೇನು?

ಮೊದಲ ಚುನಾವಣೆಯಲ್ಲೇ ಸೋಲು: ಬಳ್ಳಾರಿಯ ದೇವಿನಗರದ ನಿವಾಸಿಯಾಗಿದ್ದ ಶ್ರೀರಾಮುಲು ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದು 1996 ರಲ್ಲಿ. ನಗರ ಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1999 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಳ್ಳಾರಿ ವಿಧಾನ ಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದ ಶ್ರೀರಾಮುಲು ಲೋಕಸಭೆ ಚುನಾವಣೆಗೆ ಅಂದು ಕಾಂಗ್ರೆಸ್‌ನಿಂದ ಸೋನಿಯಾ ಗಾಂಧಿ ಮತ್ತು ಬಿಜೆಪಿಯಿಂದ ಸುಷ್ಮಾ ಸ್ವರಾಜ್ ಅವರ ನಡುವಿನ ಯುದ್ದದ ಜೊತೆಯಲ್ಲೇ ದಿವಾಕರ ಬಾಬು ಅವರೊಂದಿಗೆ ಕಾದಾಡಿ 46,508 ಮತ ಪಡೆದರೂ 8933 ಮತಗಳ ಅಂತರದಿಂದ ಸೋಲು ಕಂಡಿದ್ದರು.
ಎರಡನೆಯದ್ದರಲ್ಲಿ ಗೆಲುವು: 2004 ರ ಚುನಾವಣೆಯಲ್ಲಿ ದಿವಾಕರ ಬಾಬು ವಿರುದ್ಧ 53, 354 ಮತ ಪಡೆದು ಸಚಿವರಾಗಿದ್ದ ದಿವಾಕರ ಬಾಬು ಅವರನ್ನು 6711 ಮತಗಳ ಅಂತರದಿಂದ ಸೋಲಿಸಿದ್ದರು. ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶೀಸಿದ್ದ ಅವರು, ಕ್ಷೀಪ್ರ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪ್ರವಾಸೋದ್ಯಮ ಖಾತೆ ಮೂಲಕ ನೆರೆಯ ಗದಗ ಜಿಲ್ಲೆಗೂ ತಮ್ಮ ಖ್ಯಾತಿಯನ್ನು ವಿಸ್ತರಿಸಿಕೊಂಡಿದ್ದರು. ನಂತರ ವಾಲ್ಮೀಕಿ ಜನಾಂಗದ ಪ್ರಮುಖ ನಾಯಕನಾಗಿ ಗುರುತಿಸಿಕೊಂಡರು.
ಮೂರನೆಯದ್ದರಲ್ಲೂ ಜಯವೇ: 2008ರ ಚುನಾವಣೆಯಲ್ಲಿ ಎರಡನೇ ಬಾರಿ ಕಾಂಗ್ರೆಸ್‌ನ ರಾಮಪ್ರಸಾದ್ ವಿರುದ್ದ 61,991 ಮತ ಪಡೆದು 25,716 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. ಬಳಿಕ ಬಿಜೆಪಿ ಸರ್ಕಾರದಲ್ಲಿಯೂ ಸಚಿವ ಸ್ಥಾನ ಹೊಂದಿದ್ದರು.
ಮೊನ್ನಯದ್ದು ನಾಲ್ಕನೆಯ ಸ್ಪರ್ಧೆ: 2011 ರ ಸೆಪ್ಟಂಬರ್ 4 ರಂದು ಬಿಜೆಪಿ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಮಾಡಿದೆ ಎಂದು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ನವೆಂಬರ್ 30 ರಂದು ನಡೆದ ಬಳ್ಳಾರಿ ಉಪ ಚುನಾವಣೆಯಲ್ಲಿ ಬಿಜೆಪಿ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಆಡಳಿತ ಸರ್ಕಾರಕ್ಕೆ ಸಡ್ಡು ಹೊಡೆದರು. ಶ್ರೀರಾಮುಲು ಈ ಉಪಚುನಾವಣೆಯಲ್ಲೂ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.












Click it and Unblock the Notifications