ಕೆರೆಯ ನೀರನು ಕೆರೆಗೆ ಚೆಲ್ಲಿದ ಎಸ್ ಎಲ್ ಭೈರಪ್ಪ

SL Bhyrappa
ಬೆಂಗಳೂರು, ಡಿ.5: ಕನ್ನಡಕ್ಕೆ ಮೊದಲ 'ಸರಸ್ವತಿ ಸಮ್ಮಾನ್' ಪುರಸ್ಕಾರ ಗಳಿಸಿಕೊಟ್ಟ ಧೀಮಂತ ಸಾಹಿತಿ ಡಾ. ಎಸ್ಎಲ್ ಭೈರಪ್ಪ ಅವರನ್ನು ಕರ್ನಾಟಕ ಸರ್ಕಾರ ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಿದೆ.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ನೀಡಿದ ಸನ್ಮಾನ ಧನವನ್ನು ಹಿಂತಿರುಗಿಸಿದ ಮೇರು ಸಾಹಿತಿ ಭೈರಪ್ಪ ಅವರು, 'ಕನ್ನಡ ಮಾಧ್ಯಮ ವಿದ್ಯಾರ್ಥಿ ವೇತನಕ್ಕೆ ವಿನಿಯೋಗಿಸುವಂತೆ ಕೋರಿದರು'.

ಐದು ಲಕ್ಷ ರೂಪಾಯಿ ನಗದನ್ನು ಮರಳಿಸಿದ ಸಾಹಿತಿ ಎಸ್.ಎಲ್.ಭೈರಪ್ಪ, 'ಈ ಹಣವನ್ನು ನಿಧಿಯ ರೂಪದಲ್ಲಿ ಇಟ್ಟರೆ ಬ್ಯಾಂಕ್‌ನಿಂದ ಬರುವ ಬಡ್ಡಿ ಹಣದಿಂದ 15 ಕನ್ನಡ ಮಾಧ್ಯಮ ವಿದ್ಯಾರ್ಥಿ ವೇತನ ಒದಗಿಸಬಹುದು. ವಿದ್ಯಾರ್ಥಿ ವೇತನ ನೀಡಲು ಸರ್ಕಾರ ಮುಂದಾಗಲೆಂದು ಆಶಿಸಿ ಸಾಂಕೇತಿಕವಾಗಿ ಈ ಹಣವನ್ನು ಸರ್ಕಾರಕ್ಕೆ ಹಿಂತಿರುಗಿಸುತ್ತಿದ್ದೇನೆ' ಎಂದರು.

'ತಿಂಗಳಿಗೆ 250 ರುನಂತೆ ಅರ್ಹ ವಿದ್ಯಾರ್ಥಿಗೆ ವರ್ಷಕ್ಕೆ ಮೂರು ಸಾವಿರ ರೂಪಾಯಿ ಒದಗಿಸಬಹುದಾಗಿದೆ. ಸರ್ಕಾರ 30 ಲಕ್ಷ, 3 ಕೋಟಿ, 30 ಕೋಟಿ ಹೀಗೆ ತನಗೆ ಸಾಧ್ಯವಾದಷ್ಟು ಹಣವನ್ನು ವಿದ್ಯಾರ್ಥಿ ವೇತನಕ್ಕೆ ಮೀಸಲಿಡಬಹುದಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಕಾರ್ಯಕ್ಕೆ ಮುಂದಾಗಬಹುದು' ಎಂದು ಭೈರಪ್ಪ ಸಲಹೆ ನೀಡಿದರು.

ಕನ್ನಡ ಮಾಧ್ಯಮವೇ ಇರಲಿ: ಯಾವ ಭಾಷೆಯಲ್ಲಿ ಬೋಧಿಸಬೇಕು ಎಂದು ನಿರ್ಧರಿಸುವುದು ಪೋಷಕರ ಹಕ್ಕು ಎಂದು ನ್ಯಾಯಾಲಯ ಹೇಳುತ್ತದೆ. ಹಾಗಾಗಿ ಪೋಷಕರು ಆಂಗ್ಲ ಮಾಧ್ಯಮ ಶಾಲೆಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಆದರೆ ಭಾಷಾವಾರು ಪ್ರಾಂತ್ಯಗಳನ್ನು ವಿಂಗಡಿಸಿ ಆಯಾ ಭಾಷೆ, ಸಂಸ್ಕೃತಿ ಬೆಳೆಯಲು ಸಂವಿಧಾನ ಅವಕಾಶ ನೀಡಿರುವುದನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಳ್ಳುವುದಿಲ್ಲ' ಎಂದರು.

ಸಿಎಂ ಪ್ರಶಂಸೆ: ಗೌರವ ರೂಪದಲ್ಲಿ ನೀಡಲಾಗಿದ್ದ 5 ಲಕ್ಷ ರೂಪಾಯಿ ನಗದನ್ನು ಸರ್ಕಾರಕ್ಕೆ ಹಿಂತಿರುಗಿಸುವ ಮೂಲಕ ಕನ್ನಡವನ್ನು ಒಗ್ಗೂಡಿಸುವ ಕೆಲಸಕ್ಕೆ ಭೈರಪ್ಪ ಮುಂದಾಗಿದ್ದಾರೆ. ಬರುವ ಬಜೆಟ್‌ನಲ್ಲಿ ವಿದ್ಯಾರ್ಥಿ ವೇತನಕ್ಕಾಗಿ 3 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲಿ ಎಂದು ಸದಾನಂದ ಗೌಡ ಅವರು ಸೂಚಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+