ಯಡಿಯೂರಪ್ಪರನ್ನು ಸದಾನಂದಗೌಡ ಜೈಲಿನಲ್ಲಿ ಭೇಟಿಯಾಗಿಲ್ಲ

ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಮಾಜಿ ಮುಖ್ಯಮಂತ್ರಿಯನ್ನು ಭೇಟಿಯಾಗಲು ಜೈಲಿಗೆ ಹೋಗಿದ್ದ ಗಣ್ಯರ ಪಟ್ಟಿಯನ್ನು ಪರಪ್ಪನ ಅಗ್ರಹಾರ ಜೈಲು ಅಧೀಕ್ಷಕರು ಹೈಕೋರ್ಟ್‌ಗೆ ಮಂಗಳವಾರ ಸಲ್ಲಿಸಿದ್ದಾರೆ. ಅದರಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಜೈಲಿನಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗಿಲ್ಲ. ಆದರೆ ಅವರು ಆಸ್ಪತ್ರೆಯಲ್ಲಿ ಭೇಟಿಯಾಗಿದ್ದರೂ ನಮ್ಮ ಬಳಿ ಆ ಮಾಹಿತಿ ಇಲ್ಲ ಎಂದು ಬಂಧಿಖಾನೆ ಅಧೀಕ್ಷಕರು ತಿಳಿಸಿದ್ದಾರೆ.
ನ್ಯಾಯಾಂಗ ಬಂಧನಕ್ಕೊಳಗಾದ ನಂತರ ಬಿಎಸ್‌ವೈ ಅನಾರೋಗ್ಯ ಪೀಡಿತರಾಗಿ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಒಂದೇ ದಿನ 500 ಕ್ಕೂ ಹೆಚ್ಚು ಮಂದಿ ಅವರನ್ನು ಭೇಟಿಯಾಗಿದ್ದರು. ಬಂಧಿಖಾನೆ ನಿಯಮಕ್ಕೆ ವಿರುದ್ಧವಾಗಿ ಬಿಎಸ್‌ವೈ ಅವರನ್ನು ಅಭಿಮಾನಿಗಳು ಹಾಗೂ ಬೆಂಬಲಿಗರು ಭೇಟಿಯಾಗಿದ್ದಾರೆ ಎಂದು ಆರೋಪಿಸಿ ಮಾಜಿ ಪೊಲೀಸ್ ಅಧಿಕಾರಿ, ಗೌರಿಬಿದನೂರಿನ ಶಿವರಾಮರೆಡ್ಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
'ಆಸ್ಪತ್ರೆಯಲ್ಲಿ ಭೇಟಿಯಾದವರಿಗೂ ಬಂಧಿಖಾನೆ ಇಲಾಖೆಗೂ ಯಾವುದೇ ಸಂಬಂಧವಿಲ್ಲ. ಆಸ್ಪತ್ರೆ ಬಂಧಿಖಾನೆ ನಿಯಮದ ವ್ಯಾಪ್ತಿಗೆ ಒಳಪಡುವುದಿಲ್ಲ. ಆಸ್ಪತ್ರೆಯಲ್ಲಿದ್ದ ವಿಚಾರಣಾಧೀನ ಕೈದಿಗಳನ್ನು ನೋಡಿಕೊಳ್ಳಲು ಆಯಾ ವಿಭಾಗದ ಶಸಸ್ತ್ರ ಮೀಸಲು ಪಡೆ ಪೊಲೀಸರು ನಿಯೋಜನೆಯಾಗಿರುತ್ತಾರೆ' ಎಂದು ಬಂಧಿಖಾನೆ ಅಧೀಕ್ಷಕರು ಸ್ಪಷ್ಟನೆ ನೀಡಿದ್ದಾರೆ.
ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಆಸ್ಪತ್ರೆಯಿಂದ ಮರಳಿದ ಬಿಎಸ್‌ವೈ ಅವರನ್ನು ಸಚಿವರಾದ ಶೋಭ ಕರದ್ಲಾಂಜೆ, ರೇಣುಕಾಚಾರ್ಯ, ಉಮೇಶ್‌ಕತ್ತಿ, ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಶಾಸಕ ಸುರೇಶ್‌ಗೌಡ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ, ವಿಧಾನ ಪರಿಷತ್ ಸದಸ್ಯ ಲೇಹರ್ ಸಿಂಗ್ ಮತ್ತಿತರರು ಭೇಟಿಯಾಗಿದ್ದರು.












Click it and Unblock the Notifications