ದೇವರು ಬರೆದ ಹಾಗೆ ಆಗಲಿ ನನ್ನ ಜೀವನ : ಶ್ರೀರಾಮುಲು

ನಾನು ಜೀವನದಲ್ಲಿ ಜನಾರ್ದನ ರೆಡ್ಡಿ ಮತ್ತು ಸುಷ್ಮಾ ಅಮ್ಮ ಅವರಿಗೆ ಆಭಾರಿಯಾಗಿದ್ದೇನೆ. ರಾಜಕೀಯವಾಗಿ ನಾನು ಇಷ್ಟು ಮುಂದುವರೆಯಲು ಅವರೇ ಕಾರಣ ಎಂದು ಎದೆ ತಟ್ಟಿ ಹೇಳುತ್ತೇನೆ. ಕರುಣಾಕರ ರೆಡ್ಡಿ ಚುನಾವಣಾ ಪ್ರಚಾರದಲ್ಲಿ ಗೈರು ಹಾಜರಾಗಿದ್ದಕ್ಕೆ ತಪ್ಪು ಕಲ್ಪನೆ ಬೇಡ, ಅವರು ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಹೊರಗಡೆ ಇದ್ದಾರೆ. ಇನ್ನು ಕೆಲ ದಿನಗಳಲ್ಲಿ ಅವರು ಬಳ್ಳಾರಿಗೆ ವಾಪಸಾಗಲಿದ್ದಾರೆ. ಬಳ್ಳಾರಿ ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಗೆ ನಾವು ದುಡಿದಿದ್ದೇವೆ ಎನ್ನುವ ಮನಃಸಂತೋಷ ನಮಗಿದೆ ಎಂದರು.
ಬಿಜೆಪಿಯ ಕೆಲ ಸಂಪುಟ ಸಚಿವರು ನನ್ನನ್ನು ಪಕ್ಷದಿಂದ ಉಚ್ಛಾಟಿಸಲು ಕಾತುರರಾಗಿದ್ದರು. ಅವರ ಹೆಸರು ಹೇಳಲು ನಾನು ಬಯಸುವುದಿಲ್ಲ. ಲೋಕಾಯುಕ್ತ ವರದಿಯ ಬಗ್ಗೆ ಚರ್ಚಿಸುವ ಸಂಪುಟ ಸಭೆಯ ಮುನ್ನವೇ ನನ್ನನ್ನು ಪಕ್ಷದಿಂದ ಉಚ್ಛಾಟಿಸುವ ತೀರ್ಮಾನಕ್ಕೆ ಬಿಜೆಪಿ ಬಂದಿತ್ತು. ಹೀಗಾಗಿ ನನ್ನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ. ಬಳ್ಳಾರಿ ಜಿಲ್ಲೆಯ ಎಲ್ಲಾ ಶಾಸಕರು ನನ್ನ ಜೊತೆ ಇದ್ದಾರೆ. ಆದರೆ ನಾನು ಯಾರನ್ನೂ ನನ್ನ ಕಡೆಗೆ ಸೆಳೆಯಲು ಯತ್ನಿಸಿಲ್ಲ ಎಂದು ರಾಮುಲು ಸ್ಪಷ್ಟಪಡಿಸಿದರು.
ನಾನು ಚುನಾವಣೆಯಲ್ಲಿ ಜಯಿಸುತ್ತೇನೆ ಎನ್ನುವ ಆಶಾಭಾವ ನನ್ನಲ್ಲಿದೆ. ಯಡಿಯೂರಪ್ಪ ಅವರ ಮೇಲೆ ನನಗೆ ತುಂಬಾ ಗೌರವ ಮತ್ತು ವಿಶ್ವಾಸವಿದೆ. ಸಿಬಿಐನವರು ಯಾವುದೇ ಕ್ಷಣದಲ್ಲಿ ಬಂಧಿಸಬಹುದು ಎನ್ನುವ ಭಯ ನನಗಿಲ್ಲ, ನಾನೇನೂ ತಪ್ಪು ಮಾಡಿಲ್ಲ. ದೇವರು ಬರೆದ ಹಾಗೆ ಆಗಲಿ ನನ್ನ ಜೀವನ. ನಾನು ಕಾಂಗ್ರೆಸ್ ಪಕ್ಷಕ್ಕೆ ಹತ್ತಿರವಾಗುತ್ತಿದ್ದೇನೆ ಎನ್ನುವ ಮಾತ್ರ ಸತ್ಯಕ್ಕೆ ದೂರವಾದುದು. ರಾಜಕೀಯದಲ್ಲಿ ಯಾರಿಗೆ ಯಾರೂ ದೊಡ್ಡವರಲ್ಲ, ಮತದಾರರೇ ಪ್ರಭುಗಳು ಎನ್ನುವ ವಿಷಯ ನಮಗೆ ತಿಳಿದಿದೆ ಎಂದು ರಾಮುಲು ಮಾತಿಗೆ ಮಂಗಳ ಹಾಡಿದರು.












Click it and Unblock the Notifications