ಬಳ್ಳಾರಿ ಶ್ರೀರಾಮುಲುಗೆ ಸದಾನಂದ ಗೌಡರ ಸವಾಲ್

ಬಿಜೆಪಿಯಿಂದ ಯಾರನ್ನು ನಿಲ್ಲಿಸಬೇಕು, ನಿಲ್ಲಿಸಿದರೂ ಯಾರ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸಬೇಕು ಎಂಬ ಪ್ರಶ್ನೆಗಳೂ ಉದ್ಭವವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸದಾನಂದ ಗೌಡ ಅವರು, ಬಿಜೆಪಿಯಲ್ಲಿ ಅಭ್ಯರ್ಥಿಗಳ ಕೊರತೆಯಿಲ್ಲ. ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಬಿಜೆಪಿ ಸಿದ್ಧವಿದೆ ಎಂದಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿ ಬಂದಿರುವ ಯಡಿಯೂರಪ್ಪ ಈ ಬೆಳವಣಿಗೆ ಬಗ್ಗೆ ಬಾಯಿ ಬಿಡುತ್ತಿಲ್ಲ.
ಈ ಎಲ್ಲ ಬೆಳವಣಿಗೆಯಿಂದ ಕಿರುನಗೆ ಬೀರಿದವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು. ಶ್ರೀರಾಮುಲು ಪಕ್ಷೇತರರಾಗಿ ನಿಂತರೆ, ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ, ಶ್ರೀರಾಮುಲುಗೇ ತೆನೆಹೊತ್ತ ಮಹಿಳೆಯ ಬೆಂಬಲ ಎಂದು ಘಂಟಾಘೋಷವಾಗಿ ಸಾರಿದ್ದರು. ಕೆಲ ದಿನಗಳ ಹಿಂದೆ ಶ್ರೀರಾಮುಲುವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿಯಾಗಿದ್ದರ ಫಲಶ್ರುತಿಯೇ ಇದು ಎಂದು ಗುಟ್ಟಾಗೇನೂ ಉಳಿದಿಲ್ಲ.
ಇದರಿಂದ ಕಂಗೆಟ್ಟಿರುವ ಬಿಜೆಪಿ ನಾಯಕರು ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಶ್ರೀರಾಮುಲುವನ್ನು ಬಿಜೆಪಿಯಿಂದ ಉಚ್ಚಾಟಿಸುವುದು ಖಂಡಿತ ಎಂದು ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಹೇಳಿದ್ದರೆ, ಸಂಸದ ಪ್ರಹ್ಲಾದ್ ಜೋಶಿಯವರು ಆ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಇನ್ನು ಯಡಿಯೂರಪ್ಪ ವಕ್ತಾರರಂತಿರುವ ರೇಣುಕಾಚಾರ್ಯ ಉಚ್ಚಾಟನೆ ಸಾಧ್ಯವೇ ಇಲ್ಲ ಎಂದು ರಾಜ್ಯಾಧ್ಯಕ್ಷರಿಗೇ ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ ಮಾತ್ರ, ನಾಮಪತ್ರ ಸಲ್ಲಿಸಲು ಎರಡು ದಿನ ಮಾತ್ರ ಬಾಕಿಯಿದ್ದರೂ, ಇನ್ನೂ ಅಭ್ಯರ್ಥಿಯ ಹುಡುಕಾಟದಲ್ಲಿ ತೊಡಗಿದೆ. ಬಿಜೆಪಿಯ ಭದ್ರಕೋಟೆಯಾಗಿದ್ದ ಬಳ್ಳಾರಿ ಗ್ರಾಮೀಣ ಕ್ಷೇತ್ರವನ್ನು ಛೇದಿಸುವುದು ಹೇಗೆ ಎಂಬುದು ಬಿಜೆಪಿ ಸೇರಿದಂತೆ ಕಾಂಗ್ರೆಸ್ಸಿಗೆ ಕೂಡ ತಲೆನೋವಾಗಿ ಪರಿಣಮಿಸಿದೆ. ಪಕ್ಷೇತರ ಅಭ್ಯರ್ಥಿಯನ್ನು ಸದೆಬಡಿಯಲು ಈ ಎರಡೂ ರಾಜಕೀಯ ಪಕ್ಷಗಳಿಗೆ ಸಾಧ್ಯವೆ?












Click it and Unblock the Notifications