ಬಳ್ಳಾರಿ ಉಪಚುನಾವಣೆ ರಾಜ್ಯ ರಾಜಕೀಯಕ್ಕೆ ದಿಕ್ಸೂಚಿ?

ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಮಾಜಿ ಸಚಿವ, ಬಿಜೆಪಿಯ ಶ್ರೀರಾಮುಲು ಅವರು ಲೋಕಾಯುಕ್ತದ ಗಣಿ ಹಗರಣದ ವರದಿಯಲ್ಲಿ ಹೆಸರು ಪ್ರಸ್ತಾಪವಾದ ಕಾರಣ 'ಸ್ವಾಭಿಮಾನ"ಕ್ಕೆ ಧಕ್ಕೆ ಆದ ಕಾರಣ ನೀಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಸ್ಪೀಕರ್ ಕೆ.ಜಿ. ಬೋಪಯ್ಯ ಅವರ ಮಡಿಕೇರಿ ಮನೆಗೆ ತೆರಳಿ ರಾಜೀನಾಮೆಯನ್ನು ನೀಡಿದ್ದರು. ಇದಾದ ಒಂದು ತಿಂಗಳ ನಂತರ ರಾಜೀನಾಮೆಯನ್ನು ಅಂಗೀಕರಿಸಿ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ನಡೆಸಿ ಬಿಜೆಪಿ ಗೆಲುವು ಸಾಧಿಸಿತು.
ಶ್ರೀರಾಮುಲು ರಾಜೀನಾಮೆ ಸಲ್ಲಿಸುವ ಪೂರ್ವದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಿ. ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಪ್ರಶ್ನಾತೀತ ನಾಯಕರಾಗಿದ್ದರು. ಪ್ರಸ್ತುತ ಜನಾರ್ದನರೆಡ್ಡಿ ಗಣಿ ಹಗರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿ ಚಂಚಲಗುಡ ಜೈಲು ಸೇರಿದ್ದಾರೆ. ಶ್ರೀರಾಮುಲು ಮತ್ತು ಬಳ್ಳಾರಿಯ ರೆಡ್ಡಿ ಸಹೋದರರು ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರ ಜೊತೆ ಕಾಂಗ್ರೆಸ್ ಅಥವಾ ಜೆಡಿಎಸ್ ಸೇರಲಿದ್ದಾರೆ ಎನ್ನುವ ಅಭಿಪ್ರಾಯ ಅವರ ಆಪ್ತರಲ್ಲೇ ಮೂಡಿ ರಾಜಕೀಯ ಗೊಂದಲ ಮೂಡಿಸಿತ್ತು.
ರಾಜೀನಾಮೆ ಅಂಗೀಕಾರವಾದ ಕೇವಲ 20 ದಿನಗಳಲ್ಲಿ ಉಪ ಚುನಾವಣೆ ಪ್ರಕಟ ಆಗಿರುವುದು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಸಾಕಷ್ಟು ಆತಂಕ ಮೂಡಿಸಿದೆ. ಶ್ರೀರಾಮುಲು ಅವರೇ ತಮ್ಮ ಅಭ್ಯರ್ಥಿ ಎಂದು ಬಿಜೆಪಿ ಘೋಷಣೆ ಮಾಡುವ ಸಾಧ್ಯತೆಗಳಿದ್ದು, ಶ್ರೀರಾಮುಲು ಪಕ್ಷದಿಂದ ಸ್ಪರ್ಧಿಸಲು ನಿರಾಕರಿಸಿದಲ್ಲಿ ಪರ್ಯಾಯ ಅಭ್ಯರ್ಥಿ ಯಾರು? ಎನ್ನುವ ಪ್ರಶ್ನೆ ಪಕ್ಷದಲ್ಲಿ ವರಿಷ್ಠರನ್ನು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.
ಜನಾರ್ದನ ರೆಡ್ಡಿಯ ಹಿತಕ್ಕಾಗಿ ಶ್ರೀರಾಮುಲು ಯಾವುದೇ ರೀತಿಯ ರಾಜಕೀಯ ನಿರ್ಧಾರ ಕೈಗೊಳ್ಳಲು ಸಿದ್ಧರಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀರಾಮುಲು ಆಪ್ತರ, ಬೆಂಬಲಿಗರ, ಅನುಯಾಯಿಗಳ, ಮುಖಂಡರ ಸಭೆಯನ್ನು ಕುಟೀರದಲ್ಲಿ ಬುಧವಾರ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವಲ್ಲಿ ಸಾಧ್ಯವಾಗದೆ 'ಇನ್ನೆರೆಡು ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟಿಸುವೆ" ಎಂದು ಹೇಳಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಶ್ರೀರಾಮುಲು ಸ್ಪರ್ಧಿಸಿದಲ್ಲಿ ರೆಡ್ಡಿ ಸಹೋದರರ ಪಾಲಿಗೆ ಈ ಚುನಾವಣಾ ಫಲಿತಾಂಶ ಸಾಕಷ್ಟು ರೆಕ್ಕೆಪುಕ್ಕಗಳನ್ನು ನೀಡಲಿದೆ.
ಕ್ಷೇತ್ರದ ಮತದಾರರು ಮಾತ್ರ ಗಣಿಹಗರಣದ ಇತ್ತೀಚಿನ ಬೆಳವಣಿಗೆಗಳಿಂದ ಬಿಜೆಪಿಯಿಂದ ದೂರ ಸರಿದಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡದಲ್ಲಿ ಮಾತ್ರ ಕ್ಷೇತ್ರದ ಬಹುಸಂಖ್ಯಾತ ನಿರ್ಣಾಯಕ ಪಾತ್ರ ನಿರ್ವಹಿಸುವ ಲಿಂಗಾಯಿತ ಮತದಾರರು ಪಕ್ಷಕ್ಕೆ ಒಲವು ತೋರುವ ಸಾಧ್ಯತೆಗಳಿವೆ. ಇಲ್ಲವಾದಲ್ಲಿ ಲಿಂಗಾಯಿತರು ಬಿಜೆಪಿಯಿಂದ ದೂರ ಸರಿಯುವುದು ನಿಶ್ಚಿತ.











Click it and Unblock the Notifications