ಗಲ್ಲು ತೀರ್ಪು ನೀಡಿದ 'ಮಹಾಪರಾಧ'ಕ್ಕೆ ನ್ಯಾಯಾಧೀಶರಿಗೇ ಪ್ರಾಣ ಭೀತಿ

ಯಾರಪಾ ಆ ನ್ಯಾಯಾಧೀಶರು ಅಂದಿರಾ? ಅವರೇ ಪಾಕಿಸ್ತಾನದ ನ್ಯಾ. ಪರ್ವೇಜ್ ಅಲಿ ಶಾ. ರಾಜ್ಯಪಾಲ ಸಲ್ಮಾನ್ ತಸೀರ್ ಅವರನ್ನು ಸಾಯಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದ ಆರೋಪಿಗೆ ಇವರು ಮರಣ ದಂಡನೆಯ ತೀರ್ಪು ನೀಡಿರುವುದೇ ಮಹಾಪರಾಧ ಎನಿಸಿದೆ. ಧಾರ್ಮಿಕ ಮೂಲಭೂತವಾದಿಗಳಿಂದ ತಮಗೂ ಹಾಗೂ ತಮ್ಮ ಪರಿವಾರದವರಿಗೆ ಜೀವ ಬೆದರಿಕೆಯಿರುವ ಹಿನ್ನೆಲೆಯಲ್ಲಿ ಅವರು ಸೌದಿ ಅರೇಬಿಯದಲ್ಲಿ ಆಶ್ರಯ ಕೋರಿದ್ದಾರೆ.
ಸ್ವಯಂ ತಪ್ಪೊಪ್ಪಿಕೊಂಡಿರುವ ಕೊಲೆ ಆರೋಪಿ ಮಲಿಕ್ ಮುಮ್ತಾಜ್ ಹುಸೈನ್ ಖಾದ್ರಿಗೆ ಅ. 1ರಂದು ಮರಣ ದಂಡನೆಯ ತೀರ್ಪು ಪ್ರಕಟಿಸಿರುವ ಭಯೋತ್ಪಾದನೆ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ಶಾ ಅವರ ಕೋರ್ಟ್ ಚೇಂಬರಿನಲ್ಲಿ ವಕೀಲರ ತಂಡವೊಂದು ದಾಂಧಲೆ ಎಸಗಿರುವುದು ಮಾತ್ರವಲ್ಲದೆ ಹಲವು ಮೂಲಭೂತವಾದಿ ಸಂಘಟನೆಗಳು ನ್ಯಾಯಾಧೀಶರನ್ನು ಸಾಯಿಸುವವರಿಗೆ ಆಕರ್ಷಕ ಬಹುಮಾನಗಳ ಆಮಿಷವೊಡ್ಡಿವೆ.
ಪ್ರಾಣ ಬೆದರಿಕೆಯಿಂದಾಗಿ ಶಾ ಪರಿವಾರದ ಜತೆಗೆ ಸೌದಿ ಅರೇಬಿಯಕ್ಕೆ ಪಲಾಯನ ಮಾಡಿದ್ದಾರೆ ಹಾಗೂ ಪ್ರಕರಣದ ಗಾಂಭಿರ್ಯವನ್ನು ಪರಿಗಣಿಸಿ ಸರಕಾರ ನ್ಯಾಯಾಧೀಶರ ಪರಿವಾರಕ್ಕೆ ವಸತಿ ಸೌಲಭ್ಯವನ್ನು ಮಾಡಿಕೊಟ್ಟಿದೆ ಎಂದು ವಿಚಾರಣಾ ನ್ಯಾಯಾಲಯದಲ್ಲಿ ಖಾದ್ರಿ ಕೇಸಿನ ವಿಶೇಷ ಸರಕಾರಿ ಅಭಿಯೋಜಕರಾಗಿದ್ದ ಸೈಫುಲ್ ಮಲೂಕ್ ಹೇಳಿದ್ದಾರೆ.
ಪಂಜಾಬ್ ಪೊಲೀಸ್ ಇಲೈಟ್ ಫೋರ್ಸ್‌ನಲ್ಲಿ ಕಾನ್‌ಸ್ಟೆಬಲ್ ಆಗಿದ್ದ ಖಾದ್ರಿ ರಾಜ್ಯಪಾಲರನ್ನು ತಾನು ಸಾಯಿಸಿರುವುದಾಗಿ ಒಪ್ಪಿಕೊಂಡಿದ್ದ. ಬಹುಪತ್ನಿತ್ವವನ್ನು ಟೀಕಿಸಿರುವ ಹಾಗೂ ಪ್ರವಾದಿಯನ್ನು ನಿಂದಿಸಿ ಮರಣ ದಂಡನೆಗೊಳಗಾಗಿದ್ದ ಕ್ರಿಶ್ಚಿಯನ್ ಮಹಿಳೆ ಆಸಿಯಾ ಬೀಬಿಯನ್ನು ಬೆಂಬಲಿಸಿರುವ ರಾಜ್ಯಪಾಲರಿಗೆ ಸಾವೇ ಸರಿಯಾದ ಶಿಕ್ಷೆ ಎಂದು ತೀರ್ಮಾನಿಸಿ ತಾನು ಈ ಕೃತ್ಯ ಎಸಗಿರುವುದಾಗಿ ಕೋರ್ಟಿನಲ್ಲಿ ಅವನು ಹೇಳಿದ್ದ. ಕಳೆದ ಜ. 4ರಂದು ರಾಜ್ಯಪಾಲ ತಸೀರ್ ಅವರನ್ನು ಹೊಟೇಲೊಂದರ ಹೊರಗೆ ಪೊಲೀಸ್ ಗಾರ್ಡ್ ಗುಂಡಿಕ್ಕಿ ಸಾಯಿಸಿದ್ದಾನೆ.












Click it and Unblock the Notifications