ಅಶೋಕ್ ವಿರುದ್ಧ ವಿವಾದಿತ ಭೂದಾಖಲೆಗಳ ಸಂಗ್ರಹಕ್ಕೆ ಮೂರು ತಂಡ

ಬಿಡಿಎ, ಉಪನೋಂದಣಿ ಅಧಿಕಾರಿ ಕಚೇರಿ ಮತ್ತು ನಗರಾಭಿವೃದ್ಧಿ ಇಲಾಖೆಗಳಿಂದ ದಾಖಲೆಗಳನ್ನು ಸಂಗ್ರಹಿಸಿದ ನಂತರವೇ ತನಿಖೆ ಮಹತ್ವದ ಘಟ್ಟ ತಲುಪಲು ಸಾಧ್ಯ. ಈ ಹಿನ್ನೆಲೆಯಲ್ಲಿ ದಾಖಲೆಗಳನ್ನು ಸಂಗ್ರಹಿಸಲು ಮೂವರು ಪೊಲೀಸ್ ಇನ್‌ಸ್ಪೆಕ್ಟರುಗಳ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿರುವ ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ. ಶಿವಶಂಕರ್, ಬಿಡಿಎ, ಉಪನೋಂದಣಿ ಅಧಿಕಾರಿ ಕಚೇರಿ ಮತ್ತು ನಗರಾಭಿವೃದ್ಧಿ ಇಲಾಖೆಗಳಿಂದ ದಾಖಲೆ ಕಲೆಹಾಕುವ ಜವಾಬ್ದಾರಿಯನ್ನು ಒಪ್ಪಿಸಿದ್ದಾರೆ.
ಲೋಕಾಯುಕ್ತದ ಬೆಂಗಳೂರು ನಗರ ಡಿವೈಎಸ್‌ಪಿ ಅಬ್ದುಲ್ ಅಹದ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ನವೆಂಬರ್ 5ರೊಳಗೆ ಸಲ್ಲಿಸುವಂತೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಗಡುವು ವಿಧಿಸಿರುವುದರಿಂದ ತೀವ್ರಗತಿಯಲ್ಲಿ ತನಿಖೆ ಸಾಗಿದೆ.
ನಗರದ ಲೊಟ್ಟೆಗೊಲ್ಲಹಳ್ಳಿಯಲ್ಲಿ ರಾಜಮಹಲ್ ವಿಲಾಸ್ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ 23 ಗುಂಟೆ ಭೂಮಿಯನ್ನು ಕಾನೂನುಬಾಹಿರವಾಗಿ ಖರೀದಿಸಿ, ನಂತರ ಅದನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಆದೇಶ ಮಾಡಿಸಿಕೊಂಡ ಆರೋಪ ದೂರಿನಲ್ಲಿದೆ. ಎರಡು ಪ್ರತ್ಯೇಕ ಸರ್ವೆ ನಂಬರುಗಳಲ್ಲಿನ 9 ಮತ್ತು 14 ಗುಂಟೆ ಭೂಮಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.












Click it and Unblock the Notifications