ಅಪ್ಪಾ-ಅಮ್ಮ ಜಗಳಕ್ಕೆ ಅಡ್ವಾಣಿ ಬಲಿ!

ಏನಾಗಿತ್ತೆಂದರೆ ಭೂ ಹಗರಣ ಸಂಬಂಧ ಗೃಹ ಸಚಿವ ಆರ್. ಅಶೋಕ್ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂಬ ಕಾರಣಕ್ಕೆ ಅಡ್ವಾಣಿ ಬೆಂಗಳೂರು ಸಮಾವೇಶ ರದ್ದು ಮಾಡಿದ್ದಾರೆ ಎಂದು ಯಡಿಯೂರಪ್ಪ ಬಣ ಬಿಂಬಿಸಿತ್ತು. ಇದರಿಂದ ಹಠಕ್ಕೆ ಬಿದ್ದ ಅನಂತಕುಮಾರ್ ಬಣ ಅಡ್ವಾಣಿ ಅವರನ್ನು ಬೆಂಗಳೂರಿಗೆ ಆಗಮಿಸುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದೆ.
ಒಂದು ವೇಳೆ ಅನಂತ್ ಬಣಕ್ಕೆ ಕಟ್ಟು ಬಿದ್ದು ಅಡ್ವಾಣಿ ಬಸವನಗುಡಿಗೆ ಆಗಮಿಸಿದರೆ ಬಿಜೆಪಿ ಅಧಿನಾಯಕರ ಭ್ರಷ್ಟಾಚಾರದಿಂದ ಕುದಿಯುತ್ತಿರುವ ಜನ ಅಡ್ವಾಣಿ ಅವರ 'ಜನ ಚೇತನ ಯಾತ್ರೆ' ಹೇಗೆ ಸ್ವಾಗತ ಕೋರಬಹುದು ಎಂಬುದು ಆತಂಕಕಾರಿಯಾಗಿದೆ.
ಹೇಳಿ ಕೇಳಿ ಇದು ಭ್ರಷ್ಟಾಚಾರ ವಿರೋಧಿ ಜಾಗೃತಿ ಯಾತ್ರೆ. ಅಂತಹುದರಲ್ಲಿ ಬಗಲಲ್ಲಿ ಭ್ರಷ್ಟಾತಿಭ್ರಷ್ಟರನ್ನಿಟ್ಟುಕೊಂಡು ಅಡ್ವಾಣಿ ಭ್ರಷ್ಟಾಚಾರದ ವಿರುದ್ಧ ಏನು ಮಾತನಾಡಿಯಾರು?
ಒಂದು ರೀತಿಯಲ್ಲಿ ಜೈಲಿನಲ್ಲಿರುವ ಯಡಿಯೂರಪ್ಪ ಮತ್ತು ಜೈಲಿಗೆ ಹೋಗುವ ಸಿದ್ಧತೆಯಲ್ಲಿರುವ ಅಶೋಕ್ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಂದಾಗಿ ಬೆಂಗಳೂರಿಗೆ ಬರೊಲ್ಲ ಎಂದಿದ್ದ ಅಡ್ವಾಣಿ ಸೇಫ್ ಆಗಿಯೇ ಇದ್ದರು. ಆದರೆ ಈಗ ಯಾವ ಭಂಡತನ ಇಟ್ಟುಕೊಂಡು ಬಸವನಗುಡಿಯ ಪ್ರಜ್ಞಾವಂತ ಜನರೆದುರು ಬರುತ್ತಿದ್ದಾರೆ ಎಂದು ಬಸವನಗುಡಿಯ ಮಂದಿ ಈಗಾಗಲೇ ಮಾತನಾಡಿಕೊಳ್ಳುತ್ತಿದ್ದಾರೆ.
ಕರಟಕ-ದಮನಕರ ಕಥೆ ಹೀಗಿರುವಾಗ 'ಊರಿಗೆ ಬಂದವಳು ನೀರಿಗೆ ಬರೋಲ್ವೆ' ಎನ್ನುವಂತೆ 'ಬೆಂಗಳೂರಿಗೆ ಬಂದ ಅಡ್ವಾಣಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಯಡಿಯೂರಪ್ಪ ಭೇಟಿಗೆ ಬರೋಲ್ವೆ' ಎಂಬುದಕ್ಕೆ ಉತ್ತರ ನಿಮ್ನಿಮ್ಮ ಊಹೆಗೆ ಬಿಟ್ಟಿದ್ದು!












Click it and Unblock the Notifications