ಅಪಾಯದ ನಡುವೆ ರೈಲ ಮೇಲೆ 'ಸುಖಕರ' ಪಯಣ

ಯಾದಗಿರಿ, ವಾಡಿ, ಶಹಾಬಾದ, ನಾಲವಾರ, ರಾಯಚೂರು ಮುಂತಾದೆಡೆಯಿಂದ ಭಕ್ತಾದಿಗಳ ದಂಡು ತುಳಜಾಪುರ ಪ್ರಯಾಣಕ್ಕೆ ರೇಲ್ವೆಯನ್ನೆ ಅವಲಂಬಿಸಿದ್ದಾರೆ. ದಸರಾ ಮಹೋತ್ಸವಕ್ಕಾಗಿ ವಿಶೇಷವಾಗಿ ವಾಹನ, ಸಾರಿಗೆ ಸೌಕರ್ಯವಿಲ್ಲದೆ ಭಕ್ತರು ನೇರವಾಗಿ ತುಳಜಾಪುರಕ್ಕೆ ಹೋಗಿ ದರ್ಶನ ಪಡೆಯುವುದು ಕಷ್ಟ. ಹೀಗಾಗಿ ರೇಲ್ವೆಯನ್ನು ಅವಲಂಬಿಸುವುದು ಅನಿವಾರ್ಯ. ಪ್ರತಿ ವರ್ಷ ಈ ಕಷ್ಟ ತಪ್ಪಿದ್ದಲ್ಲ ಎಂದು ಭಕ್ತರು ಗೋಳಿಡುತ್ತಾರೆ.
ಶೀಘ್ರ ಮತ್ತು ಕಡಿಮೆ ದರದಲ್ಲಿ ಸೌಕರ್ಯ ಒದಗಿಸುವ ರೈಲ್ವೆ ಮೂಲಕ ತೆರಳುವಲ್ಲಿ ಭಯ ತೊರೆದು ಸಂಚರಿಸುವುದು ಈಗ ಸಾಮಾನ್ಯ ಸಂಗತಿ. ತುಂಬಿ ತುಳಕುವ ರಾಯಚೂರ-ಸೊಲ್ಲಾಪುರ ಇಂಟರ್‌ಸಿಟಿ (ಪ್ಯಾಸೆಂಜರ್) ರೈಲಿನ ಟಾಪ್ ಮೇಲೆ ಪ್ರಯಾಣ ಎಂಥವರಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಆದರೂ ಭಕ್ತರು ಯಾವ ಭಯವಿಲ್ಲದೆ ಕ್ಯಾಕಿ ಹೊಡೆಯುತ್ತ, ಜೈಕಾರ ಹಾಕುತ್ತ ತುಳಜಾಪುರಕ್ಕೆ ಪ್ರಯಾಣಿಸುವ ಸಾಹಸಕ್ಕೆ ಕೈಹಾಕುತ್ತಿದ್ದಾರೆ.
ದಸರಾ ಸಂದರ್ಭದಲ್ಲಾದರೂ ತುಳಜಾಪುರಕ್ಕೆ ತೆರಳಲು ವಿಶೇಷವಾಗಿ ರೇಲ್ವೆ ಸೌಕರ್ಯ ಒದಗಿಸುವಂತೆ ಭಕ್ತರು ರೇಲ್ವೆ ಅಧಿಕಾರಿಗಳಲ್ಲಿ ಭಿನ್ನವಿಸಿಕೊಂಡರು ಕ್ರಮ ಮಾತ್ರ ಶೂನ್ಯವಾಗಿದೆ. ಭಕ್ತರ ಸುರಕ್ಷತೆಗೆ ರೈಲ್ವೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವುದು ಎದ್ದು ಕಾಣುತ್ತಿದೆ. ಈ ರೀತಿ ಸಂಚರಿಸುವ ಪ್ರಯಾಣಕ್ಕೆ ತೆರೆ ಬೀಳಿಸುವ ನಿಟ್ಟಿನಲ್ಲಿ ಕೇಂದ್ರ-ರಾಜ್ಯ ಸರ್ಕಾರ ಸೂಕ್ತವಾದ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂಬ ವಾದ ಸಾರ್ವಜನಿಕರದ್ದಾಗಿದೆ.












Click it and Unblock the Notifications