ಕಸಬ್ ಗಲ್ಲಿಗೆ ತಡೆ : ಎತ್ತ ಸಾಗುತಿದೆ ನಮ್ಮ ದೇಶ!

26.11.2008ರಲ್ಲಿ ಕಸಬ್ ಮತ್ತು ಆತನ ಇತರ ಸಹಚರರು ನಡೆಸಿದ ಪೈಶಾಚಿಕ ದಾಳಿಗೆ ಇಡೀ ದೇಶವೇ ತಲೆ ಥರಗುಟ್ಟಿತ್ತು. ಅರ್ಥರ್ ರಸ್ತೆ ಜೈಲಿನಲ್ಲಿರುವ ಕಸಬ್ ನ್ಯಾಯಾಲಯಕ್ಕೆ ಅಗೌರವ ತೋರುತ್ತಾನೆ ಮತ್ತು ಅಶಿಸ್ತಿನಿಂದ ವರ್ತಿಸುತ್ತಾನೆ. ನನಗೆ ಇದೇ ರೀತಿಯ ಊಟ ಬೇಕೆಂದು ಡಿಮ್ಯಾಂಡ್ ಮಾಡುತ್ತಾನೆ. ಆತನ ಭದ್ರತೆಗೆ ಸರಕಾರ ಇದುವರೆಗೆ ಮಾಡಿದ ಖರ್ಚಿನಲ್ಲಿ ಬಹುಷಃ ಮುಂಬೈ ಜೋಪ್ಡಿಪಟ್ಟಿಯಲ್ಲಿ ವಾಸಿಸುವ ಬಡವರಿಗೆ ಮನೆ ಕಟ್ಟಿ ಆಶ್ರಯ ನೀಡ ಬಹುದಿತ್ತೇನೋ!
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರಿಗೆ ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್ ಕ್ಷಮಾದಾನದ ಮನವಿಯನ್ನು ತಿರಸ್ಕರಿಸಿದ್ದರು. ವೆಲ್ಲೂರು ಜೈಲಿನಲ್ಲಿರುವ ಹಂತಕರಾದ ಮುರುಗನ್, ಸಾಂತನ್ ಮತ್ತು ಪೆರರಿವಾಳನ್ ಅವರಿಗೆ ಸೆ.9, 2011ರಂದು ಗಲ್ಲು ಶಿಕ್ಷೆಯನ್ನು ವಿಧಿಸುವಂತೆ ಕೇಂದ್ರ ಸರ್ಕಾರದಿಂದ ಆದೇಶ ಹೊರಡಿಸಿತ್ತು. ಆದರೆ, ತಮಿಳುನಾಡು ಅಸೆಂಬ್ಲಿಯಲ್ಲಿ ಕೇಂದ್ರದ ಆದೇಶಕ್ಕೆ ವಿರುದ್ಧವಾಗಿ ನಿರ್ಣಯ ಕೈಗೊಳ್ಳಲಾಗುತ್ತದೆ.
ಘನ ಮದರಾಸು ನ್ಯಾಯಾಲಯ ಕೇಂದ್ರದ ಆದೇಶಕ್ಕೆ ಎಂಟು ವಾರಗಳ ತಡೆಯಾಜ್ಞೆ ನೀಡುತ್ತೆ. ಅಷ್ಟೇ ಅಲ್ಲದೆ ಮೂವರು ಆರೋಪಿಗಳಿಗೆ ಕ್ಷಮಾದಾನ ನೀಡಬೇಕು, ಗಲ್ಲುಶಿಕ್ಷೆ ವಿಧಿಸಬಾರದು ಎಂದು ಎಂ ಕರುಣಾನಿಧಿಯ ತಮಿಳುನಾಡು ಸರಕಾರ ಕೇಂದ್ರ ಸರ್ಕಾರಕ್ಕೆ ಪ್ರಮಾಣಪತ್ರ ಸಲ್ಲಿಸುತ್ತೆ. ರಾಜೀವ್ ಗಾಂಧಿ ಮಾನವ ಬಾಂಬ್ ಸ್ಪೋಟದಲ್ಲಿ ಹತರಾಗಿದ್ದು 21.05.1991ರಲ್ಲಿ ಅಂದರೆ ಘಟನೆ ನಡೆದು 20 ವರ್ಷದ ಮೇಲಾಯಿತು.
ನಮ್ಮ ದೇಶದ ವ್ಯವಸ್ಥೆಯಲ್ಲಿ ಗಲ್ಲು ಶಿಕ್ಷೆಗೆ ಅಂತಿಮ ಅಂಕಿತ ಹಾಕಬೇಕಾದವರು ರಾಷ್ಟ್ರಪತಿಗಳು. ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿ ದೇಶದ ಸ್ವಾಭಿಮಾನಕ್ಕೆ ಪೆಟ್ಟು ನೀಡಿದ್ದ ಅಫ್ಜಲ್ ಗುರು ಕೂಡಾ ಯಾವುದೇ ಚಿಂತೆ ಇಲ್ಲದೆ ಜೈಲಿನ ಸುಖವನ್ನು ಅನುಭವಿಸುತ್ತಿದ್ದಾನೆ. ಆತನ ಗಲ್ಲು ಶಿಕ್ಷೆಗೆ ಸಂಬಂಧಪಟ್ಟ ಫೈಲ್ ರಾಷ್ಟ್ರಪತಿ ಕಚೇರಿಗೆ ಇನ್ನೂ ತಲುಪಿಯೇ ಇಲ್ಲ ಎನ್ನುವುದು ಸರಕಾರ ದೇಶದ ಭದ್ರತೆಗೆ ನೀಡುತ್ತಿರುವ ಕಾಳಜಿಗೆ ನೀಡ ಬಹುದಾದ ಒಂದು ಉತ್ತಮ ಉದಾಹರಣೆ.
ನಿತ್ಯ ಸಾಯುವುದರ ಬದಲು ನನಗೆ ಒಂದೇ ಸಾರಿ ಶಿಕ್ಷೆ ನೀಡಿ. ನಾನು ಗಲ್ಲು ಶಿಕ್ಷೆಗೆ ತಯಾರಾಗಿದ್ದೇನೆ. ಶೀಘ್ರವೇ ನನ್ನ ಜೀವದಾನ ಅರ್ಜಿಯ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಿ. ಹೋಗಲಿ ಕಾಶ್ಮೀರದ ಜೈಲಿಗಾದರೂ ನನ್ನನ್ನು ತಳ್ಳಿ ಎಂದು ಸದ್ಯ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಉಗ್ರ ಅಫ್ಜಲ್ ಗುರು ಸುಪ್ರಿಂಕೋರ್ಟ್ ಗೆ ಅರ್ಜಿ ಹಾಕಿದರೂ ಕಡತ ಜಪ್ಪಯ್ಯ ಎಂದರೂ ಮುಂದೆ ಹೋಗುತ್ತಿಲ್ಲ.
ಈಗ ಆತ ದೇಶದ ನಾಗರಿಕರ ತೆರಿಗೆ ಹಣದಲ್ಲಿ ದಿನಾ ಜೈಲಿನಲ್ಲಿ ಮಟನ್ ಬಿರಿಯಾನಿ ತಿನ್ನುತ್ತಿದ್ದಾನೋ ಅಥವಾ ಮಟನ್ ಫ್ರೈಡ್ ರೈಸ್ ತಿನ್ನುತ್ತಿದ್ದಾನೋ ಯಾವನಿಗೆ ಗೊತ್ತು. ಈ ಅವಮಾನಕಾರಿ ಘಟನೆ ನಡೆದಿದ್ದು 13.12.2001ರಲ್ಲಿ ಅಂದರೆ ಹೆಚ್ಚು ಕಮ್ಮಿ ಹತ್ತು ವರ್ಷ.
ಇತ್ತೀಚೆಗೆ ದೇಶದ ಭ್ರಷ್ಟಾಚಾರಿ ರಾಜಕಾರಿಣಿಗಳು, ಅಧಿಕಾರಿಗಳು ಜೈಲು ಶಿಕ್ಷೆ ಅನುಭವಿಸುತ್ತಿರುವುದರ ನಂತರ ನ್ಯಾಯಾಲಯ ಅವರ ಬೇಲ್ ಅರ್ಜಿ ತಿರಸ್ಕರಿಸಿ ಜನತೆ ಕೋರ್ಟ್ ಕಲಾಪಗಳ ಮೇಲೆ ನಂಬಿಕೆ ಇಟ್ಟುಕೊಳ್ಳಲು ಆರಂಭಿಸಿದ್ದರು. ಆದರೆ ಕಸಬ್ ಗಲ್ಲಿಗೆ ತಡೆಯಾಜ್ಞೆ ನೀಡಿದ ನಂತರ... ಮುಗ್ದ ನಾಗರಿಕರ ಜೀವಕ್ಕೆ ಬೆಲೆ ಇಲ್ಲವೇ? ದೇಶದ ಸ್ವಾಭಿಮಾನಕ್ಕೆ ಪೆಟ್ಟು ನೀಡಿದರೂ ಲೆಕ್ಕಕ್ಕಿಲ್ಲವೇ? ಎತ್ತ ಸಾಗುತಿದೆ ನಮ್ಮ ದೇಶ?











Click it and Unblock the Notifications