ಆಕ್ಸಿಸ್ ಬ್ಯಾಂಕ್‌ನ ರೆಡ್ಡಿ ಲಾಕರುಗಳು ಚಿನ್ನಾಭರಣದ ಗಣಿಗಳು: ಸಿಬಿಐ

ಗಾಲಿ ರೆಡ್ಡಿ ಬಳ್ಳಾರಿಯ ಆಕ್ಸಿಸ್ ಬ್ಯಾಂಕಿನಲ್ಲಿ 200ಕ್ಕೂ ಹೆಚ್ಚು ಲಾಕರುಗಳನ್ನು ಹೊಂದಿದ್ದಾರೆ. ಈ ಬ್ಯಾಂಕ್ ಲಾಕರುಗಳಲ್ಲಿ ಅಪಾರ ಮೊತ್ತದ ಚಿನ್ನ, ಪ್ಲಾಟಿನಂ ಹಾಗೂ ವಜ್ರದ ಆಭರಣಗಳು ತುಂಬಿತುಳುಕುತ್ತಿವೆ.
ಜತೆಗಿರಲಿ ಅಂತ ಗಣಿ ವ್ಯವಹಾರಕ್ಕೆ ಸಂಬಂಧಪಟ್ಟ ಮಹತ್ವದ ದಾಖಲೆಗಳನ್ನೂ ಇವುಗಳ ಮಧ್ಯೆ ಅವರು ಅಡಗಿಸಿಟ್ಟಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ದಾಖಲಾರ್ಹ ಸಂಗತಿಯೆಂದರೆ ಬಳ್ಳಾರಿಯ ಈ ಬ್ಯಾಂಕಿನಲ್ಲಿ ಒಟ್ಟು 350 ಲಾಕರುಗಳಿವೆ.
ಇದೇ ರೀತಿ ಜನಾರ್ದನ ರೆಡ್ಡಿಗೆ ಸೇರಿದ ಕಾಂಬೋಡಿಯಾ, ಸಿಂಗಾಪುರ, ವಿಯೆಟ್ನಾಂ, ಚೀನಾ ಹಾಗೂ ಇಂಡೋನೇಶ್ಯ ದೇಶಗಳಲ್ಲಿರುವ ಕಂಪನಿಗಳ ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಸಹ ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅಕ್ರಮ ಗಣಿಗಾರಿಕೆ ಹಾಗೂ ಕಾನೂನು ಬಾಹಿರವಾಗಿ ಓಬಳಾಪುರಂ ಮೈನಿಂಗ್ ಕಂಪನಿಗೆ ನೀಡಲಾದ ಗುತ್ತಿಗೆಯ ಬಗ್ಗೆ ಸಿಬಿಐ ಪೊಲೀಸರು ಬಳ್ಳಾರಿ ಜಿಲ್ಲೆಯಾದ್ಯಂತ ಜಾಲಾಡುತ್ತಿದ್ದಾರೆ. ಈ ವೇಳೆ, ನಗರದ ಹಲವು ಬ್ಯಾಂಕ್‌ಗಳಲ್ಲಿ ಜನಾರ್ದನ ರೆಡ್ಡಿ ಹಾಗೂ ಅವರ ಆಪ್ತರ ಹೆಸರಲ್ಲಿ ಇನ್ನೂ ಹತ್ತಾರು ಲಾಕರುಗಳು ಇರುವುದನ್ನು ಪತ್ತೆ ಮಾಡಿದ್ದಾರೆ.
ಇತ್ತೀಚೆಗಷ್ಟೆ ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿಗೆ ಸೇರಿದ ನಾಲ್ಕು ಲಾಕರುಗಳ ತಪಾಸಣೆ ನಡೆಸಿದ್ದ ಸಿಬಿಐ 10 ಕೆಜಿ ಚಿನ್ನ, ಅಪಾರ ಮೊತ್ತದ ನಗದು ಹಣ ಹಾಗೂ ಪ್ರಮುಖ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿತ್ತು.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಹೈದರಾಬಾದ್‌ನ ಸಿಬಿಐ ವಿಶೇಷ ನಿರ್ದೇಶಕ ಲಕ್ಷ್ಮಿನಾರಾಯಣ ನೇತೃತ್ವದ ತಂಡ ಸೆ. 5ರಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಬಿ. ಶ್ರೀನಿವಾಸ ರೆಡ್ಡಿಯವರನ್ನು ಬಂಧಿಸಿದ್ದರು. ಇಬ್ಬರಿಗೂ ಈಗ ಅ. 3ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಮಧ್ಯೆ, ರೆಡ್ಡಿ ದ್ವಯರ ಸಿಬಿಐ ಕಸ್ಟಡಿ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಾಳೆ (ಸೆ. 23) ನಡೆಯಲಿದೆ.












Click it and Unblock the Notifications