ಶಾಸಕ ಸ್ಥಾನಕ್ಕೆ ರಾಜೀನಾಮೆ: ನಿರ್ಧಾರ ಅಚಲ ಎಂದ ಶ್ರೀರಾಮುಲು

'ರಾಜೀನಾಮೆಯ ನಿರ್ಧಾರಕ್ಕೆ ಬದ್ಧನಾಗಿದ್ದು, ಶೀಘ್ರದಲ್ಲೇ ಸ್ಪೀಕರ್ ಕೆ.ಜಿ. ಬೋಪಯ್ಯನವರನ್ನು ಮತ್ತೊಮ್ಮೆ ಭೇಟಿ ಮಾಡಿ ಅಗತ್ಯ ವಿವರಣೆ ನೀಡುತ್ತೇನೆ. ತನ್ನ ರಾಜೀನಾಮೆಯನ್ನು ಅಂಗೀಕರಿಸುವಂತೆ ಮನವಿ ಮಾಡುತ್ತೇನೆ' ಎಂದು ನುಡಿದರು.
ಅಕ್ರಮ ಗಣಿಗಾರಿಕೆಗೆ ಸಂಬಂಧ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಎಂಬ ಕಾರಣಕ್ಕೆ ಶ್ರೀರಾಮುಲು ಕಳೆದ ಸೆ. 3ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜಿನಾಮೆಯ ನಂತರ ರಾಜ್ಯಾದ್ಯಂತ 'ಸ್ವಾಭಿಮಾನ" ಯಾತ್ರೆ ಕೈಗೊಳ್ಳುತ್ತೇನೆ ಮತ್ತು ಮಾಧ್ಯಮದವರೊಂದಿಗೆ ಮನದಾಳದ ಮಾತುಗಳನ್ನು ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದ ಶ್ರೀರಾಮುಲು, ಹಠಾತ್ ಬೆಳೆವಣಿಗೆಯಲ್ಲಿ ಜನಾರ್ದನ ರೆಡ್ಡಿ ಬಂಧನವಾಗುತ್ತಿದ್ದಂತೆ ಯಾತ್ರೆಯನ್ನು ಕೈಬಿಟ್ಟು, ಸುಮ್ಮನಾಗಿದ್ದಾರೆ.
ಕಾನೂನು ಸಮರದಲ್ಲಿ ರೆಡ್ಡಿಗೆ ಗೆಲುವು: ಓಬಳಾಪುರಂ ಗಣಿ ಕಂಪನಿಯ ಅಕ್ರಮದ ಹಿನ್ನೆಲೆಯಲ್ಲಿ ಸಿಬಿಐ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಕಾನೂನು ಸಮರದಲ್ಲಿ ಗೆದ್ದು ಹೊರ ಬರುತ್ತಾರೆ ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ತೀವ್ರ ಆಕ್ಷೇಪ: ಶಾಸಕ ಸ್ಥಾನಕ್ಕೆ ಶ್ರೀರಾಮುಲು ರಾಜೀನಾಮೆ ನೀಡಿ ಒಂದು ವಾರವಾದರೂ ಅಂಗೀಕರಿಸದಿರುವ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರ ವಿಳಂಬ ಧೋರಣೆಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನಲ್ವ್ರಲಿ ತೀವ್ರವಾಗಿ ಆಕ್ಷೇಪಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಆಡಳಿತಾರೂಢ ಬಿಜೆಪಿಯಿಂದ ಆಪರೇಷನ್ ಕಮಲ ನಡೆದು ಶಾಸಕರು ರಾಜೀನಾಮೆ ನೀಡಿದಾಗ ತಕ್ಷಣ ಅಂಗೀಕಾರ ಮಾಡುತ್ತಿದ್ದ ವಿಧಾನಸಭಾಧ್ಯಕ್ಷರು, ಶ್ರೀರಾಮುಲು ರಾಜೀನಾಮೆ ವಿಚಾರದಲ್ಲಿ ಮೀನಾ ಮೇಷ ಎಣಿಸುತ್ತಿರುವುದು ಏಕೆ? ಎಂದು ಪ್ರಶ್ನಿಸಿದರು. ಇದು ಸ್ಪೀಕರ್ ದ್ವಿಮುಖ ನೀತಿಗೆ ನಿದರ್ಶನ ಎಂದು ಕಿಡಿಕಾರಿದರು.
ಗೃಹ ಸಚಿವ ಆರ್. ಅಶೋಕ್ ಪ್ರತಿಕ್ರಿಯೆ: 'ಬಿಜೆಪಿ ಬಗ್ಗೆ ಕುಮಾರಸ್ವಾಮಿಗೆ ಕಾಳಜಿ ಏಕೆ?. ರಾಮುಲು ರಾಜೀನಾಮೆ ಕೊಡುವಾಗ ಸ್ಪೀಕರ್ರ್ ಜತೆ ಏನು ಮಾತನಾಡಿದ್ದರೋ ಗೊತ್ತಿಲ್ಲ. ರಾಜೀನಾಮೆ ವಿಷಯ ಈಗ ರಾಮುಲು ಮತ್ತು ಸ್ಪೀಕರ್ ನಡುವಿನದು. ಬೇರೆಯವರು ಇದರ ಮಧ್ಯ ಪ್ರವೇಶಿಸುವಂತಿಲ್ಲ. ಸ್ಪೀಕರ್ ಅಧಿಕಾರವನ್ನು ಪ್ರಶ್ನಿಸಬಾರದು. ರಾಮುಲು ನಮ್ಮ ಪಕ್ಷದ ಮುಖಂಡರು, ಸರಿಯಾದ ನಿರ್ಧಾರಕ್ಕೆ ಬರಲಿದ್ದಾರೆ' ಎಂದು ಅಶೋಕ್ ಹೇಳಿದ್ದಾರೆ.












Click it and Unblock the Notifications