ಮ್ಯಾನೇಜರ್ ಕಿರುಕುಳ: ಕೆಎಸ್ಆರ್ಟಿಸಿ ಚಾಲಕ ಆತ್ಮಹತ್ಯೆ ಯತ್ನ

ನಂಜನಗೂಡು ತಾಲೂಕಿನ ನಿವಾಸಿ ಮಂಟೇಲಿಂಗಯ್ಯ ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ಚಾಲಕನಾಗಿದ್ದಾನೆ. ಈತ ಹಲವು ವರ್ಷಗಳಿಂದ ಕೆಎಸ್ಆರ್ಟಿಸಿಯ ನಂಜನಗೂಡು ಡಿಪೋಗೆ ಸೇರಿದ ಬಸ್ಸಿನಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು.
ಈತನಿಗೆ ಗುಂಡ್ಲುಪೇಟೆ ಮಾರ್ಗವಾಗಿ ಚಿಕ್ಕಾಟಿಗೆ ತೆರಳಿ ಅಲ್ಲಿ ರಾತ್ರಿ ತಂಗುವಂತೆ ಬಸ್ ಮಾರ್ಗವನ್ನು ನೀಡಲಾಗಿತ್ತು. ಹಲವು ಸಮಯಗಳಿಂದ ಈ ಮಾರ್ಗದ ಬಸ್ಸಿನಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದ ಮಂಟೇಲಿಂಗಯ್ಯ ಶುಕ್ರವಾರ ರಾತ್ರಿ ಬಸ್ ನಿಲ್ಲಿಸಿದ ಬಳಿಕ ಅದರಲ್ಲಿಯೇ ಉಳಿದುಕೊಂಡಿದ್ದಾನೆ.
ಆ ನಂತರ ನಾನು ಡಿಪೋ ಮ್ಯಾನೇಜರ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿದ್ದಾನೆ. ಇದರಿಂದ ಆತ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾನೆ. ಆದರೆ ಚಾಲಕ ವಿಷ ಸೇವಿಸಿದ ವಿಷಯ ಸಾರ್ವಜನಿಕರಿಗೆ ತಿಳಿದಿರಲಿಲ್ಲ.
ಇಂದು ಬೆಳಿಗ್ಗೆ ಬಸ್ ಹತ್ತಲು ಬಂದ ಪ್ರಯಾಣಿಕರಿಗೆ ಚಾಲಕ ವಿಷ ಸೇವಿಸಿರುವ ವಿಷಯ ತಿಳಿದಿದ್ದು ಕೂಡಲೇ ಆತನನ್ನು 108 ವಾಹನದಲ್ಲಿ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications