ಬಳ್ಳಾರಿ ಬಂದ್ : ಪುಂಡರಿಂದ ಡಿಸಿ ಕಚೇರಿ ಧ್ವಂಸ

ಜಿಲ್ಲಾಧಿಕಾರಿ ಕಚೇರಿಗೆ ಇಂದು ಮುತ್ತಿಗೆ ಹಾಕಿದ ರೆಡ್ಡಿ ಹಿಂಬಾಲಕರು 4 ಕಂಪ್ಯೂಟರ್, ಕಿಟಕಿ ಗಾಜು, ಪೀಠಪಕರಣಗಳನ್ನು ಒಡೆದುಹಾಕಿದ್ದಾರೆ. ಉಪವಿಭಾಗಾಧಿಕಾರಿ ಕಚೇರಿ, ಕಂದಾಯ ಕಚೇರಿ, ಕಾರ್ಮಿಕ ಇಲಾಖೆ, ಜಿಲ್ಲಾನಗರಾಭಿವೃದ್ಧಿ ಕೋಶ ಕಚೇರಿಯ ಮೇಲೆಯೂ ದುಷ್ಕರ್ಮಿಗಳು ದಾಳಿ ನಡೆಸಿ ಆಸ್ತಿಪಾಸ್ತಿಯನ್ನು ಹಾಳು ಮಾಡಿದ್ದಾರೆ.
ದಾಂಧಲೆ ಮಾಡುತ್ತಿರುವ ಪುಂಡರನ್ನು ನಿಯಂತ್ರಿಸಲು ಜಿಲ್ಲಾಧಿಕಾರಿಯಾಗಿರುವ ಅಮಲನ್ ಆದಿತ್ಯ ಬಿಸ್ವಾಸ್ ಸ್ವತಃ ಲಾಠಿ ಹಿಡಿದು ಬೀದಿಗಿಳಿದಿದ್ದಾರೆ. ಬಂದ್ ಮಾಡುವುದೇನಿದ್ದರೂ ಶಾಂತಿಯಿಂದ ಮಾಡಿ, ಪುಂಡಾಟಿಕೆ ಮಾಡುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜಿಲ್ಲಾಧಿಕಾರಿ ಬಿಸ್ವಾಸ್ ಎಚ್ಚರಿಸಿದ್ದಾರೆ.
ಬಸ್ ಗೆ ಕಲ್ಲು : ಕರ್ನಾಟಕ ಮತ್ತು ಆಂಧ್ರ ಪ್ರದೇಶಕ್ಕೆ ಸೇರಿದ ಸರಕಾರಿ ಬಸ್ ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದು, 3 ಬಸ್ ಗಳ ಜಖಂ ಆಗಿವೆ. ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪ್ರತಿಭಟನಾಕಾರರ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ.. ಪೆಟ್ರೋಲ್ ಬಂಕ್ ಮೇಲೆಯೂ ಕಲ್ಲು ತೂರಾಟ ನಡೆದಿದೆ.
ಆತ್ಮಾಹುತಿಗೆ ಯತ್ನ : ಪ್ರತಿಭಟನಾಕಾರನೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಯತ್ನಿಸಿದ್ದಾನೆ. ಆದರೆ, ಸುತ್ತಲಿದ್ದವರ ಸಮಯಸ್ಫೂರ್ತಿಯಿಂದಾಗಿ ಹೆಚ್ಚಿನ ಗಾಯವಾಗದೆ ಆತ ಪಾರಾಗಿದ್ದಾನೆ. ಕೆಲವೆಡೆಗಳಲ್ಲಿ ಪ್ರತಿಭಟನಾಕಾರರು ಟೈರ್ ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೂರಾರು ಕಾರ್ಯಕರ್ತರು ಕೌಲ್ ಬಜಾರ್ ನಿಂದ ಬೈಕ್ ಜಾಥಾ ಮಾಡಿ ರೆಡ್ಡಿಗೆ ಬೆಂಬಲ ವ್ಯಕ್ತಪಡಿಸಿದರು. ಬಂದ್ ಪ್ರಯುಕ್ತ ಇಂದು ಶಾಲಾ-ಕಾಲೇಜು, ಸರಕಾರಿ ಕಚೇರಿಗಳು, ಬ್ಯಾಂಕ್ ಗಳಿಗೆ ರಜಾ ಘೋಷಿಸಲಾಗಿದೆ. ಎಲ್ಲ ಕಡೆ ಅಂಗಡಿ ಮುಂಗಟ್ಟುಗಳಲ್ಲಿ ವಹಿವಾಟು ನಿಲ್ಲಿಸಲಾಗಿದೆ.












Click it and Unblock the Notifications