ಶಾಸಕ ಸ್ಥಾನಕ್ಕೆ ಬಿ ಶ್ರೀರಾಮುಲು ರಾಜೀನಾಮೆ ಪ್ರಕಟ

ಬೆಂಗಳೂರಿನ ಅಶೋಕಾ ಹೋಟೆಲಿನಲ್ಲಿ ಭಾನುವಾರ 11.11ಕ್ಕೆ ಸುದ್ದಿಗೋಷ್ಠಿ ಆರಂಭಿಸಿದ ಶ್ರೀರಾಮುಲು, ತಮ್ಮ ರಾಜಕೀಯ ಹೋರಾಟವನ್ನು ಎಳೆಎಳೆಯಾಗಿ ಬಿಡಿಸಿಡುತ್ತಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರು. ಮಡಿಕೇರಿಗೆ ತೆರಳಿ ಸ್ಪೀಕರ್ ಬೋಪ್ಪಯ್ಯ ಅವರಿಗೆ ರಾಜೀನಾಮೆ ಪತ್ರ ನೀಡುವುದಾಗಿ ಘೋಷಿಸಿದ್ದಾರೆ.
ಮಾಜಿ ಪ್ರಧಾನಿ ವಾಜಪೇಯಿ ಅವರ ಆಶಯದಂತೆ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ತೃಪ್ತಿ ಇದೆ. ಇಂದಿರಾಗಾಂಧಿ ಸತ್ತು ಇಷ್ಟು ವರ್ಷಗಳಾದರೂ ಇನ್ನೂ ಕಾಂಗ್ರೆಸ್ ಪಕ್ಷಕ್ಕೆ ಮಣೆ ಹಾಕುವ ಅಮಾಯಕರು ಇರುವ ನಾಡು ನಮ್ಮದು. ಆದರೆ ಅದನ್ನು ಹೋಗಲಾಡಿಸಿ, ತಾಯಿ ಸುಷ್ಮಾ ಅವರ ಮೂಲಕ ಬಳ್ಳಾರಿಯಲ್ಲಿ ಪಕ್ಷದ ನೆಲೆಗಟ್ಟನ್ನು ಭದ್ರಪಡಿಸಿದ ಶ್ರೇಯಸ್ಸು ನನ್ನದು ಮತ್ತು ನನ್ನ ಸ್ನೇಹಿತರಾದ ಜನಾರ್ದನ ರೆಡ್ಡಿ ಅವರದಾಗಿದೆ.
ನಾನು 20 ವರ್ಷಗಳಿಂದ ರಾಜಕೀಯ ಸೇವೆ ಮಾಡಿಕೊಂಡು ಬಂದಿದ್ದೇನೆ. ನಾನು ಸಾಕಷ್ಟು ಪ್ರಾಮಾಣಿಕ. ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದವನು. ಅಕ್ರಮ ಗಣಿಗಾರಿಕೆಯಲ್ಲಿ ಖಂಡಿತ ಭಾಗಿಯಾಗಿಲ್ಲ. ಆದಾಗ್ಯೂ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳು ಸಾಕಷ್ಟು ನೋವನ್ನು ತಂದಿದೆ. ಆದ್ದರಿಂದ ಅನಿವಾರ್ಯವಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದರು.
ನನ್ನ ಜತೆ ಬಳ್ಳಾರಿ, ಉತ್ತರ ಕರ್ನಾಟಕ ಸೇರಿದಂತೆ ಅನೇಕ ಭಾಗಗಳ ಶಾಸಕರು ನನ್ನೊಂದಿಗೆ ಇದ್ದಾರೆ. ಆದರೆ ನಾನೊಬ್ಬ ಮಾತ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಹೇಳಿದರು.












Click it and Unblock the Notifications