ಧ್ವಜಾರೋಹಣ: ಇದೇನು ಸಭ್ಯತೆ, ಇದೇನು ಸಂಸ್ಕೃತಿ!

ನಡೆದವನ್ನಲಾದ ಈ ಘಟನೆಗಳು ನಾಗರಿಕ ಸಮಾಜದ ನಡೆಗೆ ಕಪ್ಪುಚುಕ್ಕಿ ಇಟ್ಟಂತಿವೆ. ದೇಶಪ್ರೇಮದ ಸಂಕೇತವಾಗಬೇಕಾದ ಧ್ವಜಾರೋಹಣ ಈ ರೀತಿ ಆಗಬಹುದಾ ನೀವೇ ಹೇಳಿ!
* ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ರಾಜ್ಯದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಧ್ವಜಾರೋಹಣ ಮಾಡಿದರು. ಆದರೆ ಸ್ವಾತಂತ್ರ್ಯ ಸಂದೇಶ ಪತ್ರದಲ್ಲಿ ಸದಾನಂದ ಗೌಡರ ಫೋಟೋವನ್ನು ಮೇಲೆ ಹಾಕಿ, ರಾಷ್ಟ್ರಧ್ವಜ ಫೋಟೋ ಕೆಳಗೆ ಹಾಕಿರುವ ಅಚಾತುರ್ಯ ನಡೆದಿದೆ. ಈ ವಿಷಯವನ್ನು ಸಂಸದ ವಿಶ್ವನಾಥ್ ಎಲ್ಲರ ಗಮನಕ್ಕೆ ತಂದು ಪ್ರತಿಭಟಿಸಿದ್ದಲ್ಲದೇ ಸಂದೇಶ ಪತ್ರವನ್ನು ಹರಿದು ಹಾಕಿದರು. ನಂತರ, ನಡೆದ ಅಚಾತುರ್ಯಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ರಾಮದಾಸ್ ಕ್ಷಮೆ ಕೇಳಿದ್ದಾರೆ.
* ಹುಬ್ಬಳ್ಳಿಯಲ್ಲಿ ರೇವಣಕರ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಉಲ್ಟಾ ಹಾರಿದ ಧ್ವಜ, ಸೇರಿದ್ದ ಎಲ್ಲರ ಆಕ್ರೋಶಕ್ಕೆ ಕಾರಣವಾಯಿತು.
* ಇನ್ನು ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಸೋಮಣ್ಣ ಧ್ವಜಾರೋಹಣ ನಡೆಸುತ್ತಿದ್ದ ಸಮಯದಲ್ಲಿ ವೇದಿಕೆಯಮೇಲೆ ಸಚಿವರ ಪಕ್ಕದಲ್ಲೇ ಇದ್ದ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಎಸ್ ಪಿ ಅಮಿತ್ ಸಿಂಗ್ ಚ್ಯೂಯಿಂಗ್ ಗಮ್ ಜಗಿಯುತ್ತಿದ್ದರು. ಇದು ಅಲ್ಲಿ ನೆರೆದಿದ್ದವರ ಆಕ್ರೋಶಕ್ಕೂ ಕಾರಣವಾಗಿದಲ್ಲದೇ ಸಚಿವ ಸೋಮಣ್ಣನವರ ಗಮನಕ್ಕೆ ತಂದ ಪ್ರಸಂಗವೂ ನಡೆಯಿತು
* ಮಂಡ್ಯ ಜಿಲ್ಲೆ, ಕೆ.ಆರ್. ಪೇಟೆ ತಾಲೂಕಿನ ಮಾಕವಳ್ಳಿಯಲ್ಲಿ ಹರಿದ ಬಾವುಟ ಹಾರಿಸಿ ರಾಷ್ಟ್ರಕ್ಕೆ ಅವಮಾನ ಮಾಡಿದ ಘಟನೆ ನಡೆಯಿತು. ಆಮೇಲೆ ಸೇರಿದ್ದ ಜನ ಆಕ್ರೋಶಗೊಂಡು ತಕ್ಷಣವೇ ಬಾವುಟವನ್ನು ತೆರವುಗೊಳಿಸಿದರು.
* ಜೆಡಿಎಸ್ ಪಕ್ಷದ ಕಛೇರಿಯಲ್ಲಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಧ್ವಜ ಕಂಬದಿಂದ ಕೆಳಗೆ ಜಾರಿ, ಇನ್ನೇನು ನೆಲಕ್ಕೆ ಬೀಳಲಿದೆ ಎನ್ನುವಾಗ ಧ್ವಜಾರೋಹಣ ನಡೆಸುತ್ತಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೈನಲ್ಲಿ ಹಿಡಿದು ನಂತರ ಮೇಲಕ್ಕೆ ಕಳಿಸಿ ನಡೆಯಲಿದ್ದ ಅವಾಂತರ ತಪ್ಪಿಸಿದ ಘಟನೆ ನಡೆಯಿತು.
ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯಕ್ಕೆ ಬೆಲೆ ಇಷ್ಟೇನಾ? 64 ವರ್ಷಗಳ ಬಳಿಕ ಜನರು ಈ ರೀತಿ ನಡೆದುಕೊಳ್ಳುತ್ತಿರುವುದು ದೇಶದ ಪ್ರಜೆಗಳೆಲ್ಲರೂ ತಲೆತಗ್ಗಿಸುವಂತಾಗಿದೆ ಎಂದರೆ ತಪ್ಪಿಲ್ಲ.












Click it and Unblock the Notifications