ಡಾ.ಯುವಿ ಸಿಂಗ್ ಹೆಗಲೇರಿತು ದೇಶದ ಜವಾಬ್ದಾರಿ!

ದೇಶದ ವಿವಿಧೆಡೆ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ವಿಚಾರಣೆ ನಡೆಸಲು ಕೇಂದ್ರ ಸರ್ಕಾರ 2010ರ ನವೆಂಬರಿನಲ್ಲಿ ನ್ಯಾಯಮೂರ್ತಿ ಎಂ.ಬಿ.ಷಾ ಅಧ್ಯಕ್ಷತೆಯಲ್ಲಿ ವಿಚಾರಣಾ ಆಯೋಗವನ್ನು ನೇಮಕ ಮಾಡಿತ್ತು. ಆಯೋಗದ ಮುಖ್ಯಸ್ಥರ ಕೋರಿಕೆಯನ್ನು ಒಪ್ಪಿಕೊಂಡಿರುವ ಸಿಂಗ್, ಇದೇ 16ರಂದು ಅಹಮದಾಬಾದ್‌ನ ಆಯೋಗದ ಕಚೇರಿಯಲ್ಲಿ ಅಧಿಕೃತವಾಗಿ ತನಿಖಾ ಅಧಿಕಾರಿ ಹುದ್ದೆಯನ್ನು ವಹಿಸಿಕೊಳ್ಳುತ್ತಿದ್ದಾರೆ.
1985ನೇ ತಂಡದ ಐಎಫ್‌ಎಸ್ ಅಧಿಕಾರಿಯಾದ ಇವರು ಪ್ರಸ್ತುತ ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯಲ್ಲಿದ್ದಾರೆ. ಬಳ್ಳಾರಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಕುರಿತ ತನಿಖೆಗೆ ರಾಜ್ಯ ಸರ್ಕಾರ 2006ರಲ್ಲೇ ಸಿಂಗ್ ಅವರನ್ನು ನೇಮಿಸಿತ್ತು.
'ಕರ್ನಾಟಕದಲ್ಲಿನ ಅಕ್ರಮ ಗಣಿಗಾರಿಕೆಯ ಬಗ್ಗೆ ನಮ್ಮ ಬಳಿ ಈಗಾಗಲೇ ಸಾಕಷ್ಟು ದಾಖಲೆಗಳಿವೆ. ಆಂಧ್ರ ಪ್ರದೇಶ, ಒರಿಸ್ಸಾ, ಛತ್ತೀಸ್‌ಗಡ, ಜಾರ್ಖಂಡ್, ಮಧ್ಯ ಪ್ರದೇಶ ಮತ್ತಿತರ ರಾಜ್ಯಗಳಲ್ಲಿನ ಅಕ್ರಮ ಗಣಿಗಾರಿಕೆಯ ಬಗ್ಗೆ ತನಿಖೆ ನಡೆಸಬೇಕಿದೆ. ಆಯಾ ರಾಜ್ಯಗಳಲ್ಲಿ ಇರುವ ದಕ್ಷ, ಪ್ರಾಮಾಣಿಕ ಅಧಿಕಾರಿಗಳ ನೆರವು ಪಡೆಯುವ ಯೋಚನೆ ಇದೆ. ತನಿಖೆಯನ್ನು ಹೇಗೆ ನಡೆಸಬೇಕು ಎಂಬುದನ್ನು ಆಯೋಗದ ಅಧ್ಯಕ್ಷರ ಜೊತೆ ಚರ್ಚಿಸಿದ ಬಳಿಕವೇ ನಿರ್ಧಾರ ಕೈಗೊಳ್ಳಬೇಕಾಗುತ್ತದೆ' ಎಂದು ತಿಳಿಸಿದರು.












Click it and Unblock the Notifications