ಡಿವಿಎಸ್ ಮೇಲೆ ಪತ್ರಕರ್ತೆ ಕೇಸ್: ಏನಿದರ ಹಕೀಕತ್ ?

ಸದಾನಂದ ಗೌಡರು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಬಿಡಿಎಯಿಂದ ಅನುಮತಿ ಪಡೆಯದೆ ಅಕ್ರಮವಾಗಿ '5 ಮಹಡಿಯ ಕಟ್ಟಡ"ವನ್ನು ನಿರ್ಮಿಸುತ್ತಿ ದ್ದಾರೆ ಎಂದು ಆರೋಪಿಸಿ ಪತ್ರಕರ್ತೆ ಕೆ.ಜಿ.ನಾಗಲಕ್ಷ್ಮಿ ಬಾಯಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಏನಿದು ಪ್ರಕರಣ?: ಜಿ-ಕೆಟಗರಿ (ಮುಖ್ಯಮಂತ್ರಿ ವಿವೇಚನಾ) ಕೋಟಾದಡಿ ನಗರದ ಎಚ್‌ಎಸ್‌ಆರ್ ಲೇಔಟ್‌ನ ಮೂರನೆ ಹಂತದ ಯಲ್ಲಗುಂಟೆಯಲ್ಲಿ 50x80 ಅಡಿ ವಿಸ್ತೀರ್ಣದ ಬಿಡಿಎ ನಿವೇಶನವು 2007ರ ಫೆ. 2ರಂದು (ಎಚ್.ಡಿ.ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ) ಸದಾನಂದ ಗೌಡರಿಗೆ ಮಂಜೂರು ಆಗಿದೆ. ಇದರ ಪಕ್ಕದಲ್ಲಿಯೇ ಶೃಂಗೇರಿ ಶಾಸಕ ಡಿ ಎನ್ ಜೀವರಾಜ್ ಗೂ ಇಷ್ಟೇ ವಿಸ್ತೀರ್ಣದ ಬಿಡಿಎ ನಿವೇಶನ ಮಂಜೂರಾಗಿದೆ.
ಈ ಎರಡೂ ನಿವೇಶನಗಳನ್ನು ಒಟ್ಟು ಗೂಡಿಸಿ 5 ಮಹಡಿಯ ಕಟ್ಡಡ ನಿರ್ಮಾಣ ಮಾಡಲು ಅನುಮತಿ ಕೋರಿ ಸದಾನಂದ ಗೌಡರು ಬಿಡಿಎಗೆ ಅರ್ಜಿ ಸಲ್ಲಿಸಿದ್ದರು. ಆದರೆ ರಿವೈಸ್ಡ್ ಮಾಸ್ಟರ್ ಪ್ಲಾನ್ 2015ರ ಪ್ರಕಾರ ಬಿಡಿಎ ಗೌಡರ ಅರ್ಜಿಯನ್ನು ತಿರಸ್ಕರಿಸುವ ಮೂಲಕ ಬಹುಮಹಡಿ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಅನುಮತಿ ನಿರಾಕರಿಸಿತ್ತು.
ಆದರೆ ಸದಾನಂದ ಗೌಡರು, ಬಿಡಿಎ ಆದೇಶ ಮತ್ತು ಬಿಡಿಎ ನಿಯಮ ಉಲ್ಲಂಘಿಸಿ ತಮ್ಮ ಹಾಗೂ ಜೀವರಾಜ್‌ರ ನಿವೇಶನವನ್ನು ಒಂದು ಮಾಡಿ 5 ಮಹಡಿಯ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಇನ್ನೊಂದು ಪ್ರಮುಖ ವಿಷಯ ವೆಂದರೆ ಗೌಡರಿಗೆ ನಿವೇಶನದ 'ಗ್ರಾಂಟ್, ಲೀಸ್ ಮತ್ತು ಸೇಲ್ಸ್"ನ ಅಗ್ರಿಮೆಂಟ್ ಆಗಿರುವುದು 2007ರ ಫೆ. 2ರಂದು. ಅಂದರೆ ನಿವೇಶನಕ್ಕೆ ಸಂಬಂಧಿಸಿದ ಎಲ್ಲ ಪ್ರಕಿಯೆಗಳು ಒಂದೇ ದಿನದಲ್ಲಿ ಪೂರ್ಣಗೊಂಡಿದೆ.
ಇದು ಬಹಳಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಈಗಾಗಲೆ ಕಟ್ಟಡದ ಎರಡು ಮಹಡಿಗಳ ಕಾಮಗಾರಿಗಳು ಪೂರ್ಣಗೊಂಡಿವೆ. ಮೊದಲನೆ ಮಹಡಿಯನ್ನು ಶಾಪಿಂಗ್ ಕಾಂಪ್ಲೆಕ್ಸ್‌ಗಾಗಿ ನಿರ್ಮಿಸಲಾಗಿದೆ. ಮೂರು ಮತ್ತು ನಾಲ್ಕನೆ ಮಹಡಿಗಳು ನಿರ್ಮಾಣ ಹಂತದಲ್ಲಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಕಟ್ಟಡ ಸಮೇತ ನಿವೇಶನದ ವಶಕ್ಕೆ ಮನವಿ: ಬಿಡಿಎ ನಿಯಮಾವಳಿ ಪ್ರಕಾರ ಒಂದೇ ಕುಟುಂಬದ ಸದಸ್ಯರಿಗೆ ಸೇರಿದ ಎರಡು ನಿವೇಶನಗಳು ಅಕ್ಕಪಕ್ಕದಲ್ಲಿಯೆ ಇದ್ದರೂ, ಅವುಗಳನ್ನು ಒಂದು ಮಾಡಿ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಅಲ್ಲದೆ ಸದರಿ ನಿವೇಶನದಲ್ಲಿ ಎರಡು ಮಹಡಿಗಳಿಂತ ಮೇಲ್ಪಟ್ಟು ಮಹಡಿಗಳನ್ನು ನಿರ್ಮಾಣ ಮಾಡುವಂತಿಲ್ಲ. ಆದರೆ ಈ ಪ್ರಕರಣದಲ್ಲಿ ಬಿಡಿಎಯಿಂದ ಅನುಮತಿ ಪಡೆಯದೆ, ಎರಡೂ ನಿವೇಶನಗಳನ್ನು ಒಂದು ಮಾಡಿ 5 ಮಹಡಿಗಳ ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸುತ್ತಿದ್ದಾರೆ ಎಂದು ನೂತನ ಮುಖ್ಯ ಮಂತ್ರಿ ವಿರುದ್ಧ ಅರ್ಜಿದಾರರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಗೌಡರಿಗೆ ಮಂಜೂರಾದ ನಿವೇಶನವನ್ನು ಕಟ್ಟಡ ಸಮೇತ ವಶಪಡಿಸಿ ಕೊಳ್ಳಬೇಕು. ಕಟ್ಟಡದ ವೌಲ್ಯದ ಪ್ರತಿಯಾಗಿ ಗೌಡರಿಗೆ ಒಂದೂ ರೂಪಾಯಿ ಪಾವತಿಸಬಾರದು ಮತ್ತು ಅಕ್ರಮ ಕಟ್ಟಡ ನಿರ್ಮಾಣ ಆರೋಪದಡಿ ಗೌಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಡಿಎಗೆ ಆದೇಶಿಸುವಂತೆ ಅರ್ಜಿದಾರರು ಹೈಕೋರ್ಟ್‌ನ್ನು ಕೋರಿದ್ದಾರೆ.












Click it and Unblock the Notifications