ಗಣಿ ವರದಿ: ಲೋಕಾಯುಕ್ತ ಅಧಿಕಾರಿಗಳಿಗೆ ತಕ್ಷಣ ಪೊಲೀಸ್ ರಕ್ಷಣೆ ಬೇಕು

ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಮಾತುಗಳಲ್ಲೇ ಹೇಳುವುದಾದರೆ....
ಪ್ರಸ್ತುತ ಈ ನಾಲ್ಕೂ ಅಧಿಕಾರಿಗಳು ಗುಪ್ತ ಸ್ಥಳದಲ್ಲಿ ವರದಿಗೆ ಅಂತಿಮ ರೂಪ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ವರದಿ ರಾಜಕೀಯವಾಗಿ ಸೂಕ್ಷ್ಮವಾಗಿದೆ. ಜತೆಗೆ, ಈ ಹಿಂದೆ ಲೋಕಾಯುಕ್ತ ಅಧಿಕಾರಿಗಳ ಮೇಲೆ ಹಲ್ಲೆಯಾದ ಪ್ರಸಂಗಗಳೂ ನಡೆದಿವೆ. ಆದ್ದರಿಂದ ಈ ಅಧಿಕಾರಿಗಳಿಗೆ ತಕ್ಷಣ ರಕ್ಷಣೆ ನೀಡಿ.
ವರದಿ ಸೋರಿಕೆಗೆ ಅವಕಾಶವೇ ಇಲ್ಲ. ನಾಲ್ಕೂ ಅಧಿಕಾರಿಗಳು ಸ್ಟೆನೋಗ್ರಾಫರ್ ಸೇರಿದಂತೆ ಯಾರೊಬ್ಬರ ಸಹಾಯವೂ ಇಲ್ಲದೆ ರಹಸ್ಯವಾಗಿ ವರದಿ ಸಿದ್ಧಪಡಿಸುತ್ತಿದ್ದಾರೆ. ವರದಿಯನ್ನು ಮುದ್ರಿತ ರೂಪದಲ್ಲಿ ಮತ್ತು ಸಿ.ಡಿ. ರೂಪದಲ್ಲಿ ಸರಕಾರಕ್ಕೆ ಒಪ್ಪಿಸಲಾಗುವುದು.
ಲೋಕಾಯುಕ್ತ ಗಣಿ ವರದಿಯನ್ನು ಯಡಿಯೂರಪ್ಪ ಮಿತ್ರ ಮಂಡಳಿ ಶೈತ್ಯಾಗಾರದಲ್ಲಿ ಇರಿಸುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ವರದಿಯ ಒಂದು ಕಾಪಿಯನ್ನು ಸುಪ್ರೀಂಕೋರ್ಟ್ ನೇಮಿಸಿರುವ ಉನ್ನತ ಸಮಿತಿಗೂ (Central Empowered Committee) ಸಲ್ಲಿಸಲಾಗುವುದು. CEC ಈ ಹಿಂದೆಯೂ ಲೋಕಾಯುಕ್ತ ವರದಿಯ ನೆರವ್ನು ಪಡೆದುಕೊಂಡಿದೆ. ಜತೆಗೆ, ನನ್ನ ಸೇವಾವಧಿ ಆಗಸ್ಟ್ 2ಕ್ಕೆ ಕೊನೆಗೊಳ್ಳಲಿದೆ.
ಸುಪ್ರೀಂಕೋರ್ಟ್, 2ಜಿ ಹಗರಣದಲ್ಲಿ ಕೇಂದ್ರ ಯುಪಿಎ ಸರಕಾರವನ್ನು ತರಾಟೆಗೆ ತೆಗೆದುಕೊಂಡಂತೆ ರಾಜ್ಯದಲ್ಲೂ ಕ್ರಮ ಕೈಗೊಳ್ಳಬಹುದು. ರಾಜ್ಯದಲ್ಲಿ ಅನೇಕ ಅಧಿಕಾರಿಗಳು, ರಾಜಕಾರಣಿಗಳಿಗೆ ಇದು ಮುಳುಗುನೀರು ತರಲಿದೆ.
ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಹೇಳಲು ನನಗೆ ಸರಿಯಾದ ಪದಗಳೇ ಸಿಗುತ್ತಿಲ್ಲ. ಎಷ್ಟು ಮೊತ್ತದ ಅಕ್ರಮ ಎಂದು ಹೇಳಲು ಎಷ್ಟು ಸೊನ್ನೆಗಳಿವೆ ಎಂಬುದನ್ನು ಎಣಿಸುತ್ತಾ ಕುಳಿತುಕೊಳ್ಳಬೇಕು. ಅಕ್ರಮ ಗಣಿಗಾರಿಕೆಯಲ್ಲಿ 600ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿದ್ದಾರೆ.












Click it and Unblock the Notifications