ಮತ್ತೆ ಗನ್ ಹಿಡಿಯಲು ಎನ್ಕೌಂಟರ್ ದಯಾನಾಯಕ್ ಸಿದ್ಧತೆ

ಡಿಜಿಪಿ ತಿರಸ್ಕರಿಸಿದ ದಯಾ ನಾಯಕ್ ಅವರ ಕಡತವನ್ನು ಗೃಹ ಇಲಾಖೆಗೆ ಮತ್ತು ಮುಂಬಯಿ ಪೊಲೀಸ್ ಆಯುಕ್ತರಿಗೆ ಕಳುಹಿಸುವುದಾಗಿ ಎಸಿಬಿ ಮೂಲಗಳು ತಿಳಿಸಿವೆ. ಎಲ್ಲವೂ ಸುಗಮವಾಗಿ ನಡೆದರೆ ಅಮಾನತಿನಲ್ಲಿರುವ ಸಬ್‌ಇನ್ಸ್‌ಪೆಕ್ಟರ್ ದಯಾ ನಾಯಕ್ ಅವರು ಒಂದು ತಿಂಗಳಿನೊಳಗೆ ಪೊಲೀಸ್ ಪಡೆಗೆ ಮರು ಸೇರ್ಪಡೆಯಾಗುವ ಸಾಧ್ಯತೆಯಿದೆ.
ದಯಾ ನಾಯಕ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಭ್ರಷ್ಟಾಚಾರ ನಿಗ್ರಹ ವಿಭಾಗದಲ್ಲಿ (ಎಸಿಬಿ) ಯಾವುದೇ ಪುರಾವೆಯಿಲ್ಲ ಎಂದು ಹೇಳಿ ಡಿಜಿಪಿ ಅನುಮತಿ ನೀಡಲು ನಿರಾಕರಿಸಿದ್ದಾರೆ. ಎಸಿಬಿಯ ಕಡತವನ್ನು ಡಿಜಿಪಿ ಕಳೆದ ವಾರ ವಾಪಸು ಕಳುಹಿಸಿದ್ದಾರೆ. ಈ ಕಡತವನ್ನು ಎಸಿಬಿ ಪೊಲೀಸರು ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸುವವರಿದ್ದರು. ಹೆಚ್ಚುವರಿ ಪೊಲೀಸ್ ಆಯುಕ್ತ ನಿಕೇತ್ ಕೌಶಿಕ್ ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ. ಆದರೆ ಹೆಚ್ಚಿನ ವಿವರ ನೀಡಲು ಅವರು ನಿರಾಕರಿಸಿದ್ದಾರೆ.
2006ರಲ್ಲಿ ನಾಯಕ್ ಅಕ್ರಮ ಸಂಪತ್ತು ಹೊಂದಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಎಸಿಬಿ ಕೇಸು ದಾಖಲಿಸಿತ್ತು. ತನ್ನ ಮತ್ತು ಪತ್ನಿಯ ಹೆಸರಿನಲ್ಲಿ ನಾಯಕ್ 60 ಲಕ್ಷ ರೂ. ಮೌಲ್ಯದ ಬೇನಾಮಿ ಆಸ್ತಿಗಳನ್ನು ಹೊಂದಿದ್ದಾರೆ ಎನ್ನುವುದು ಎಸಿಬಿ ಆರೋಪ. ಇದೇ ಆರೋಪದಲ್ಲಿ 2006ರ ಫೆಬ್ರವರಿಯಲ್ಲಿ ಅವರು ಸೆರೆಯಾಗಿ ಎರಡು ತಿಂಗಳ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು. ಅನಂತರ ಸೇವೆಯಿಂದ ಅಮಾನತುಗೊಂಡಿದ್ದರು.
ಕಳೆದ ವರ್ಷ ಸುಪ್ರೀಂ ಕೋರ್ಟ್ ದಯಾ ಅವರ ವಿರುದ್ಧ ಎಲ್ಲ ಮೋಕಾ ಆರೋಪಗಳನ್ನು ವಜಾಗೊಳಿಸಿದೆ. ಭೂಗತಜಗತ್ತಿನ ಜತೆ ನಾಯಕ್‌ಗೆ ಸಂಪರ್ಕವಿದೆ ಎಂಬ ಆರೋಪಗಳನ್ನು ಸಮರ್ಥಿಸುವ ಪುರಾವೆಗಳಿಲ್ಲ ಎಂದು ಉಚ್ಛ ನ್ಯಾಯಾಲಯ ಹೇಳಿತ್ತು. ಮಾಜಿ ಪತ್ರಕರ್ತ ಕೇತನ್ ತಿರೋಡ್ಕರ್ ಅವರು ನಾಯಕ್‌ಗೆ ಭೂಗತ ಜಗತ್ತಿನೊಂದಿಗೆ ನಂಟಿದೆ ಎಂದು ಕೇಸು ದಾಖಲಿಸಿದ್ದರು.












Click it and Unblock the Notifications