ಭದ್ರತೆ ನೆಪ: ಸಿಎಂಗೆ ಬೇಕಂತೆ 2 ಕೋಟಿಯ ಐಷಾರಾಮಿ ಕಾರು

BMW bullet proof car
ಬೆಂಗಳೂರು, ಜು 8: ಇನ್ನು ಮುಂದೆ ಮುಖ್ಯಮಂತ್ರಿಗಳು 2 ಕೋಟಿ ರುಪಾಯಿಗೂ ಅಧಿಕ ಬೆಲೆಬಾಳುವ ಅತ್ಯಾಧುನಿಕ ಕಾರಿನಲ್ಲಿ ಓಡಾಡುವುದನ್ನು ನೋಡುವ ಸೌಭಾಗ್ಯ ಸಮಸ್ತ ಕನ್ನಡಿಗರದ್ದಾಗಲಿದೆ. ಥ್ಯಾಂಕ್ಸ್ ಟು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ಸ್ ವಿಸಿಟ್ ಟು ಬೆಂಗಳೂರು.

ಏನಪಾ ಅಂದರೆ ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ವಿದೇಶಿ ಅತಿಗಣ್ಯರ ಓಡಾಟಕ್ಕೆ ಮೂರು ಗುಂಡು ನಿರೋಧಕ ಐಷಾರಾಮಿ ಕಾರುಗಳನ್ನು ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಭದ್ರತೆಯ ದೃಷ್ಟಿಯಿಂದ ಇದು ಅಗತ್ಯ ಇದ್ದು, ಆ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಸಮರ್ಥನೆ ನೀಡಿದೆ.

ಗುಂಡು ನಿರೋಧಕ ಕಾರು ತಯಾರಿಸುವ ಕಂಪೆನಿಗಳಿಂದ ದರ ಪಟ್ಟಿ ಆಹ್ವಾನಿಸಿದ್ದು, ಆ ನಂತರ ಯಾವ ಕಂಪೆನಿಯ ಕಾರುಗಳನ್ನು ಖರೀದಿಸಬೇಕು ಎನ್ನುವುದನ್ನು ಸರ್ಕಾರ ನಿರ್ಧರಿಸಲಿದೆ. ಮೂಲಗಳ ಪ್ರಕಾರ ಬಿ.ಎಂ.ಡಬ್ಲು ಕಾರು ಖರೀದಿಗೆ ಸರ್ಕಾರ ಆಸಕ್ತಿ ತೋರಿದೆ. ಈ ವಿಶೇಷ ಕಾರುಗಳ ಬೆಲೆ ತಲಾ 2 ಕೋಟಿ ರೂ.ಗೂ ಅಧಿಕ.

ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಕಳೆದ ವರ್ಷ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರಿಗೆ ಕೊಟ್ಟಿದ್ದ ಗುಂಡು ನಿರೋಧಕ ಕಾರಿನ ಬಗ್ಗೆ ಅವರ ಭದ್ರತಾ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕುರಿತು ಬ್ರಿಟನ್ ಪ್ರಧಾನಿ ಸಚಿವಾಲಯವು ರಾಷ್ಟ್ರಪತಿ ಕಾರ್ಯಾಲಯಕ್ಕೆ ಪತ್ರ ಬರೆದು, ಬೆಂಗಳೂರಿನಲ್ಲಿ ಉತ್ತಮ ಕಾರು ಒದಗಿಸಿರಲಿಲ್ಲ ಎಂದೂ ದೂರು ನೀಡಿತ್ತು ಎನ್ನಲಾಗಿದೆ.

ಇಷ್ಟೇ ಅಲ್ಲದೆ, ಇಂಥ ಕಾರು ಒದಗಿಸುವ ಸೂಚನೆ ನೀಡಿದ್ದರೆ ತಮ್ಮದೇ ಕಾರನ್ನು ಇಂಗ್ಲೆಂಡ್‌ನಿಂದ ತೆಗೆದುಕೊಂಡು ಬರುತ್ತಿದ್ದೆವು ಎಂದೂ ಆ ದೇಶದ ಪ್ರಧಾನ ಮಂತ್ರಿಗಳ ಭದ್ರತೆಯ ಉಸ್ತುವಾರಿ ಹೊತ್ತಿರುವ ಅಧಿಕಾರಿಗಳು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು ಎಂದು ಗೊತ್ತಾಗಿದೆ.

ಈ ಎಲ್ಲ ಅಂಶಗಳನ್ನು ಆಧಾರವಾಗಿ ಇಟ್ಟುಕೊಂಡು ರಾಷ್ಟ್ರಪತಿಗಳ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಅತಿಗಣ್ಯ ವ್ಯಕ್ತಿಗಳ ಸಲುವಾಗಿಯೇ ಗುಂಡು ನಿರೋಧಕ ಐಷಾರಾಮಿ ಕಾರುಗಳನ್ನು ಮೀಸಲಿಡುವಂತೆ ಸೂಚಿಸಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರು ಇತ್ತೀಚೆಗೆ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿದರು. ಈ ಸಭೆಯಲ್ಲಿ ರಾಷ್ಟ್ರಪತಿ ಭವನದ ಸಲಹೆ ಪ್ರಕಾರವೇ ಗುಂಡು ನಿರೋಧಕ ವ್ಯವಸ್ಥೆ ಇರುವ ಐಷಾರಾಮಿ ಕಾರುಗಳನ್ನು ಖರೀದಿಸಲು ನಿರ್ಧರಿಸಲಾಗಿದೆ.

ಹಳೆ ಪ್ರಸ್ತಾವ: 'ಗುಂಡು ನಿರೋಧಕ ಕಾರು ಖರೀದಿಸುವುದು ಹಳೆ ಪ್ರಸ್ತಾವ. ಅನೇಕ ವರ್ಷಗಳ ನಂತರ ಇದಕ್ಕೆ ಚಾಲನೆ ಸಿಕ್ಕಿದ್ದು, ಉತ್ತಮ ಗುಂಡು ನಿರೋಧಕ ಕಾರುಗಳನ್ನು ಖರೀದಿಸಲು ಸರ್ಕಾರ ತಾತ್ವಿಕವಾಗಿ ಒಪ್ಪಿದೆ' ಎಂದು ಜಾಮದಾರ್ ತಿಳಿಸಿದ್ದಾರೆ.

'ಸದ್ಯಕ್ಕೆ ಮೂರು ಕಾರುಗಳನ್ನು ಖರೀದಿಸಲಾಗುವುದು. ಇವುಗಳನ್ನು ರಾಜ್ಯಪಾಲರು, ಮುಖ್ಯಮಂತ್ರಿ, ದೇಶ-ವಿದೇಶಗಳ ಪ್ರಧಾನ ಮಂತ್ರಿಗಳು ಸೇರಿದಂತೆ ಇತರ ಅತಿಗಣ್ಯ ವ್ಯಕ್ತಿಗಳೂ ಬಳಸಬಹುದು. ಅಪಾಯಕಾರಿ ಪ್ರದೇಶಗಳಲ್ಲಿ ಸಂಚರಿಸುವಾಗ ಇವರಲ್ಲಿ ಯಾರು ಬೇಕಾದರೂ ಈ ಕಾರುಗಳನ್ನು ಬಳಸಬಹುದು' ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+