ಬಾಲ್ಡ್ ವಿನ್ ವಿದ್ಯಾರ್ಥಿಗಳಿಂದ ಭ್ರಷ್ಟಾಚಾರ ನಿರ್ಮೂಲನೆ ಶಪಥ

ಅವರು ಗುರುವಾರ ನಗರದ ಹೊಸೂರು ರಸ್ತೆಯ ಬಾಲ್ಡ್ವಿನ್ ಮೆಥಾಡಿಸ್ಟ್ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂಘಟನೆಯ ಉದ್ಘಾಟನೆ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು. ಸಮಾಜವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಮಾಣವಚನ ಸ್ವೀಕರಿಸಿದ್ದರಿಂದ ಅವರು ಉತ್ತೇಜಿತರಾಗಿದ್ದರು.
ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸಿದಷ್ಟೂ ಭ್ರಷ್ಟಾಚಾರ ಪ್ರಕರಣಗಳು ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಲೇ ಇವೆ. ಈ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ಪೂರ್ತಿ ನಿರ್ಮೂಲನೆ ಮಾಡುವುದು ಅಸಾಧ್ಯ ಎಂಬುದನ್ನು ಇದು ಸೂಚಿಸುತ್ತದೆ. ಆದರೆ ನಾವು ಹತಾಶರಾಗಿ ಕುಳಿತುಕೊಳ್ಳುವಂತಿಲ್ಲ, ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುವವರಿಗೆ ಬೆಂಬಲ ನೀಡಬೇಕಾಗಿದೆ ಎಂದರು.
"ನನಗೆ ದೇಶದ ಯುವ ಜನಾಂಗದ ಬಗ್ಗೆ ಬಹಳ ನಂಬಿಕೆ ಇದೆ. ಭ್ರಷ್ಟಾಚಾರ ನಿರ್ಮೂಲನೆ ಇವರಿಂದ ಮಾತ್ರ ಸಾಧ್ಯ ಎಂದು ನಾನು ಭಾವಿಸಿದ್ದೇನೆ. ಹೀಗಾಗಿ ಶಾಲಾ, ಕಾಲೇಜುಗಳಿಗೆ ಕರೆದಾಗ ನಾನು ಬರುವುದಿಲ್ಲ ಎನ್ನುವುದಿಲ್ಲ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದು ನನಗೆ ಇಷ್ಟವಾಗುವುದು ಇದಕ್ಕೇ. ನಾನು ಈಗಾಗಲೇ 230ಕ್ಕೂ ಅಧಿಕ ಶಾಲಾ, ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದೇನೆ" ಎಂದು ಸಂತೋಷ್ ಹೆಗ್ಡೆ ನುಡಿದರು.
ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಸಂಘಟನೆಯ ಪ್ರತಿಜ್ಞೆ ಜತೆಗೆ ಭ್ರಷ್ಟಾಚಾರ ವಿರುದ್ಧ ಸಹ ಪ್ರಮಾಣವಚನ ಸ್ವೀಕರಿಸಿದ್ದನ್ನು ವಿಶೇಷವಾಗಿ ಕೊಂಡಾಡಿದ ಅವರು, ಇಂತಹ ಜಾಗೃತಿ ಯುವಕರಲ್ಲಿ ಮೂಡಿದಾಗಲೇ ಸಮಾಜ ಭ್ರಷ್ಟಾಚಾರದ ಪಿಡುಗಿನಿಂದ ಮುಕ್ತವಾಗಲು ಸಾಧ್ಯ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಜೋಶ್ವಾ ಸ್ಯಾಮ್ಯುಯಲ್ ಮಾತನಾಡಿ, ತಮ್ಮ ಕಾಲೇಜಿನ ವಿದ್ಯಾರ್ಥಿಗಳು ಕೈಗೊಂಡ ವಿಶಿಷ್ಟ ಪ್ರಮಾಣವಚನವನ್ನು ಕೊಂಡಾಡಿದರು. ಇದೇ ಮಾದರಿಯನ್ನು ಇತರ ಕಾಲೇಜುಗಳು ಅನುಸರಿಸುವ ಮೂಲಕ ವಿದ್ಯಾರ್ಥಿ ಸಮುದಾಯದಲ್ಲಿ ಜಾಗೃತಿ ಮೂಡುವ ಅಗತ್ಯ ಇದೆ ಎಂದರು. ವಿದ್ಯಾರ್ಥಿ ನಾಯಕ ಪವನ್ ಪ್ರಮಾಣವಚನ ಬೋಧಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.












Click it and Unblock the Notifications