ಚಿಕ್ಕಮಗಳೂರು ಲಕ್ಕವಳ್ಳಿ ಬಳಿ ಚಿರತೆ ದಾಳಿ ವಿದ್ಯಾರ್ಥಿ ಬಲಿ

ತರೀಕೆರೆ ಸರ್ಕಾರಿ ಐಟಿಐ ಅಂತಿಮ ವರ್ಷದ ವಿದ್ಯಾರ್ಥಿ ವಿಶ್ವ (18) ಮೃತಪಟ್ಟ ಯುವಕ. ಬುಧವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಕಾಲೇಜಿನಿಂದ ಮನೆಗೆ ವಾಪಸಾಗಿದ್ದ ಆತ ಬಹಿರ್ದೆಸೆಗೆಂದು ತೋಟ ಮತ್ತು ಅರಣ್ಯಗಳ ಮಧ್ಯೆ ರಸ್ತೆ ಪಕ್ಕದಲ್ಲಿ ಕುಳಿತಿದ್ದ. ಈ ವೇಳೆ ಹಿಂದಿನಿಂದ ದಾಳಿ ಮಾಡಿದ ಚಿರತೆ 50 ಅಡಿ ದೂರ ಆತನನ್ನು ಎಳೆದುಕೊಂಡು ಹೋಗಿದೆ. ಆತನ ಮರ್ಮಾಂಗವನ್ನು ತಿಂದು ಹಾಕಿದೆ.
ತಮ್ಮ ಇನ್ನೂ ವಾಪಸಾಗಲಿಲ್ಲವೆಂದು ಅಣ್ಣ ಸೋಮ ಹುಡುಕಿಕೊಂಡು ಹೋದಾಗ ಆತನ ಮೇಲೂ ಚಿರತೆ ದಾಳಿ ಮಾಡಿದೆ. ತಪ್ಪಿಸಿಕೊಂಡು ಆತ ಜೋರಾಗಿ ಕೂಗಿಕೊಂಡಿದ್ದಾನೆ. ಆಸುಪಾಸಿನ ಜನ ಸ್ಥಳಕ್ಕೆ ಧಾವಿಸಿದ್ದನ್ನು ಕಂಡ ಚಿರತೆಗಳು ಪರಾರಿಯಾದವು.
ಜೀಪಿಗೆ ಬೆಂಕಿ ಹಚ್ಚಿ ಆಕ್ರೋಶ: ಮಂಗಳವಾರ ಸಂಜೆ ಸುಬ್ರಹ್ಮಣ್ಯ ಎಂಬಾತನ ಮೇಲೆ ಚಿರತೆ ದಾಳಿ ಮಾಡಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅರಣ್ಯ ಇಲಾಖೆಯವರಿಗೆ ಸ್ಥಳೀಯರು ಕೂಡಲೇ ಸುದ್ದಿ ಮುಟ್ಟಿಸಿದ್ದರು. ಎರಡು ಬಾರಿಯೂ ಅರಣ್ಯ ಇಲಾಖೆ ಸಿಬ್ಬಂದಿ ಶೀಘ್ರವಾಗಿ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಉದ್ರಿಕ್ತಗೊಂಡ ಜನರು, ಇಲಾಖೆಯ ವನ್ಯಜೀವಿ ವಿಭಾಗದ ಜೀಪಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications