ಮೈಸೂರು ಮೌಲ್ವಿ ಕಿಡ್ನಾಪ್ ಹಿಂದಿನ ರಹಸ್ಯ ಬಹಿರಂಗ

ಮೈಸೂರಿನ ಸಿಸಿಬಿ ಕಛೇರಿಯಲ್ಲಿ ನಗರ ಪೊಲೀಸ್ ಕಮೀಷನರ್ ಸುನಿಲ್ ಅಗರವಾಲ್ ಪತ್ರಿಕಾಗೋಷ್ಠಿ ಕರೆದು ಸ್ಪೋಟಕ ಸುದ್ದಿಯೊಂದನ್ನು ಹೊರ ಹಾಕಿದ್ದರು. ಅದು ಉತ್ತರಪ್ರದೇಶದ ಮುಜಾಫರ್ ನಗರದ ನಯಾಜ್‌ಫುರ್ ಮೊಹಲ್ಲಾ ನಿವಾಸಿ ಹಾಜೀ ಸಾಹೇಬ್ ಅವರ ಮಗ ಮೌಲ್ವಿ ಫಜರ್ ಉಲ್ ರೆಹಮಾನ್ ಎಂಬಾತನ ಕಿಡ್ನಾಪ್ ಮಾಡಿದ ದುಷ್ಕರ್ಮಿಗಳನ್ನು ಮೈಸೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ ಸುದ್ದಿಯಾಗಿತ್ತು.
ಬೆಂಗಳೂರಿಗೆ ಬಂದವನು ಕಿಡ್ನಾಪ್: ಮೌಲ್ವಿ ಫಜರ್ ಉಲ್ ರೆಹಮಾನ್ ಹುಬ್ಬಳ್ಳಿಯಲ್ಲಿದ್ದು ಅಲ್ಲಿಂದ ಜೂನ್ 13ರಂದು ಬೆಂಗಳೂರಿಗೆ ಬಂದಿದ್ದನು. ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಕಲಾಸಿಪಾಳ್ಯ ವ್ಯಾಪ್ತಿಯ ತಾಜ್ ಹೋಟೆಲ್ ಬಳಿ ನಿಂತಿದ್ದಾಗ ಕಾರಿನಲ್ಲಿ ಸಹಚರರೊಂದಿಗೆ ಬಂದ ಅಬ್ದುಲ್ ರಜಾಕ್ ಎಂಬಾತ ಫಜ್ಲೂರ್ ರೆಹಮಾನ್‌ನನ್ನು ಎತ್ತಿಹಾಕಿಕೊಂಡು ಹೋಗಿ ಕಲಾಸಿಪಾಳ್ಯದ ದೊಡ್ಡ ಬಿಲ್ಡಿಂಗ್‌ವೊಂದರಲ್ಲಿರಿಸಿ ಆತನಿಗೆ ಹಲ್ಲೆ ಮಾಡಿದ್ದಲ್ಲದೆ, 12 ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದ್ದನು.
ಆದರೆ ಆತ ನನ್ನ ಬಳಿ ಹಣ ಇಲ್ಲ ಎಂದಾಗ ಅವನಿಗೆ ನಾಲ್ಕು ಬಾರಿಸಿ ನಿನ್ನ ಸಂಬಂಧಿಕರ ಫೋನ್ ನಂಬರ್ ಕೊಡು ನಮಗೆ ಹೇಗೆ ಹಣ ವಸೂಲಿ ಮಾಡಬೇಕು ಗೊತ್ತು ಎಂದು ಬೆದರಿಸಿದ್ದನು. ಫೋನ್ ನಂಬರ್ ಕೊಟ್ಟಿಲ್ಲಾಂದ್ರೆ ನನ್ನನ್ನು ಕೊಂದೇ ಬಿಡುತ್ತಾರೆ ಎಂದು ಹೆದರಿದ ರೆಹಮಾನ್ ತನ್ನ ಬಾವ ರಾಜಾಸ್ತಾನದ ತತ್ಸಿಲ್ ಆಲಿವಾರ್ ಜಿಲ್ಲೆಯ ದಾವೂದ್‌ಪುರ ನಿವಾಸಿ, ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ತೌಫೀಕ್ ಎಂಬಾತನ ಮೊಬೈಲ್ ನಂಬರನ್ನು ನೀಡಿದ್ದನು. ಆ ನಂಬರಿಗೆ ಫೋನ್ ಮಾಡಿದ ಅಬ್ದುಲ್ ರಜಾಕ್ ನಿನ್ನ ಬಾವ ರೆಹಮಾನ್‌ನನ್ನು ನಾನು ಕಿಡ್ನಾಪ್ ಮಾಡಿದ್ದು, 12 ಲಕ್ಷ ಕೊಟ್ಟರೆ ಬಿಡುವುದಾಗಿಯೂ ಎಲ್ಲಾದರು ಬುದ್ದಿವಂತಿಕೆ ತೋರಿಸಿ ಪೊಲೀಸರಿಗೆ ತಿಳಿಸಿದರೆ ರೆಹಮಾನ್‌ನ ಪ್ರಾಣ ತೆಗೆಯುವುದಾಗಿಯೂ ಬೆದರಿಕೆ ಹಾಕಿದ್ದನು.
ಬಾವ ರೆಹಮಾನ್‌ನನ್ನು ಕಿಡ್ನಾಪ್ ಮಾಡಲಾಗಿದೆ ಎಂಬುವುದು ತಿಳಿಯುತ್ತಿದ್ದಂತೆಯೇ ತೌಫಿಕ್ ಆತಂಕಗೊಂಡಿದ್ದಾರೆ.. ಇತ್ತ ಅಬ್ದುಲ್ ರಜಾಕ್ ಹೆಚ್ಚು ದಿನ ಒಂದೇ ಕಡೆ ಇದ್ದರೆ ಕಷ್ಟ ಎಂದು ರೆಹಮಾನ್‌ನನ್ನು ಅಲ್ಲಿಂದ ಮೈಸೂರಿಗೆ ಕರೆತಂದಿದ್ದಾನೆ. ಮೈಸೂರಿನ ಶಾಂತಿನಗರದಲ್ಲಿ ಮೂರು ದಿನಗಳ ಕಾಲ ಇರಿಸಿಕೊಂಡು ಮತ್ತೆ ಮೇಲಿಂದ ಮೇಲೆ ತೌಫಿಕ್‌ಗೆ ಫೋನ್ ಮಾಡಿದ್ದಾರೆ. ಆತ ನಾನು ಕರ್ನಾಟಕಕ್ಕೆ ಬರುತ್ತಿದ್ದು ನಿಮ್ಮ ಹಣ ನೀಡಿ ರೆಹಮಾನ್‌ನನ್ನು ಬಿಡಿಸಿಕೊಂಡು ಹೋಗುವುದಾಗಿಯೂ ಆತನಿಗೆ ಏನೂ ಮಾಡದಂತೆ ಬೇಡಿಕೊಂಡಿದ್ದಾನೆ.
ಡಿಜಿಪಿ ಹಾಗೂ ಐಜಿಪಿಗೆ ದೂರು: ಈ ನಡುವೆ ತೌಫಿಕ್ ನೇರವಾಗಿ ಡಿಜಿಪಿ ಮತ್ತು ಐಜಿಪಿಯವರ ಕಛೇರಿಗೆ ತೆರಳಿ ಬಾವ ರೆಹಮಾನ್ ಅವರನ್ನು ಅಪಹರಿಸಲಾಗಿದೆ ಹುಡುಕಿಕೊಡುವಂತೆ ಲಿಖಿತ ದೂರು ನೀಡಿದ್ದನು. ದೂರನ್ನು ಗಂಭೀರವಾಗಿ ಪರಿಗಣಿಸಿದ ಡಿಜಿಪಿಯವರು ಕೂಡಲೇ ಕ್ರಮಕೈಗೊಂಡು ಮೈಸೂರು ನಗರ ಕಮೀಷ್ನರ್ ಸುನಿಲ್ ಅಗರವಾಲ್ ಅವರಿಗೆ ಸೂಚಿಸಿದ್ದರು. ಅದರಂತೆ ಪ್ರಕರಣವನ್ನು ಮೈಸೂರು ಸಿಸಿಬಿಗೆ ವಹಿಸಿ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿತ್ತು. ಇತ್ತ ಅಪಹರಣಕಾರರು ತೌಫಿಕ್‌ಗೆ ಫೋನ್ ಮಾಡುತ್ತಲೇ ಇದ್ದರಲ್ಲದೆ ತಮ್ಮ ವಾಸ್ತವ್ಯವನ್ನು ಕೂಡ ಮೈಸೂರಿನಿಂದ ಪಿರಿಯಾಪಟ್ಟಣಕ್ಕೆ ಬದಲಾಯಿಸಿದ್ದರು. ತೌಫಿಕ್‌ನನ್ನು ಕುಶಾಲನಗರಕ್ಕೆ ಕರೆಯಿಸಿದರೆ ಅಲ್ಲಿ ಹಣ ವಸೂಲಿ ಮಾಡುವುದು ಸುಲಭವೆಂದರಿತ ಅವರು ರೆಹಮಾನ್ ಸಹಿತ ಕುಶಾಲನಗರದ ಕೂಡಿಗೆಯಲ್ಲಿ ವಾಸ್ತವ್ಯ ಹೂಡಿದ್ದರು.
ಬೆನ್ನತ್ತಿ ಹಿಡಿದ ಸಿಸಿಬಿ ತಂಡ: ಇತ್ತ ನಗರ ಪೊಲೀಸ್ ಕಮೀಷ್ನರ್ ಸುನಿಲ್ ಅಗರವಾಲ್‌ರವರ ನಿರ್ದೇಶನದಂತೆ ಡಿಸಿಪಿಗಳಾದ ಬಸವರಾಜ್ ಮಾಲಗತ್ತಿ ಮತ್ತು ಪಿ.ರಾಜೇಂದ್ರಪ್ರಸಾದ್‌ರವರ ಮಾರ್ಗದರ್ಶನದಲ್ಲಿ ತಂಡ ಕಾರ್ಯಾಚರಣೆಗಿಳಿದಿತ್ತು. ತೌಫಿಕ್ ಅವರಿಗೆ ಬರುತ್ತಿದ್ದ ಕರೆಗಳನ್ನು ಆಧರಿಸಿ ಅವರು ಎಲ್ಲಿದ್ದಾರೆ ಎಂದು ಪತ್ತೆ ಹಚ್ಚಿದ ತಂಡ ಕುಶಾಲನಗರದಲ್ಲಿರುವುದು ಖಚಿತವಾಗುತ್ತಿದ್ದಂತೆಯೇ ತೌಫಿಕ್ ಮೂಲಕ ಹಣ ತಂದಿರುವುದಾಗಿಯೂ ಎಲ್ಲಿಗೆ ಬರಬೇಕು ಎಂಬುವುದನ್ನು ತಿಳಿಸುವಂತೆ ಹೇಳಿದರು. ಅವರು ಜಾಗ ಹೇಳಿದ ಬಳಿಕ 12 ಲಕ್ಷ ರೂಪಾಯಿಯಷ್ಟು ಹಣ ತಂದಿಲ್ಲ ಮೊದಲ ಕಂತು ೫ಲಕ್ಷ ತಂದಿದ್ದು ಅದನ್ನು ಪಡೆದು ಬಿಡುಗಡೆ ಮಾಡುವಂತೆ ಗೋಗರೆದಿದ್ದಾರೆ. ಮೊದಲಿಗೆ ಅಷ್ಟಾದರೂ ಸಿಕ್ಕುತ್ತಿದೆಯಲ್ಲ ಸಾಕು ಆಮೇಲೆ ನೋಡೋಣ ಎಂದು ಆಲೋಚಿಸಿದ ತಂಡ ತಾವು ಕೂಡಿಗೆಯಲ್ಲಿರುವುದಾಗಿ ಹೇಳಿದೆ.
ಬಳಿಕ ಅಪಹರಣಕಾರರಿಗೆ ಸಂಶಯ ಬಾರದಂತೆ ಲುಂಗಿ ಹಾಗೂ ಕುರ್ತಾ ಧರಿಸಿ ಕೈಯ್ಯಲ್ಲಿ ಬ್ಯಾಗ್ ಹಿಡಿದು ಅವರು ಹೇಳಿದ ಸ್ಥಳಕ್ಕೆ ಹೋಗಿದ್ದಾರೆ. ಮಫ್ತಿಯಲ್ಲಿದ್ದ ಪೊಲೀಸರು ಸ್ಥಳವನ್ನು ಸುತ್ತುವರೆದು ಕಾಯುತ್ತಾ ನಿಂತಿದ್ದಾರೆ. ಕೈಯ್ಯಲ್ಲಿ ಬ್ಯಾಗ್ ಹಿಡಿದು ತಮ್ಮತ್ತ ಬರುತ್ತಿರುವವರು ಪೊಲೀಸರು ಎಂಬ ಅರಿವಿಲ್ಲದ ಅಪಹರಣಕಾರರು ದುಡ್ಡು ಕೈಗೆ ಬಂತೆಂಬ ಸಂತಸದಲ್ಲಿದ್ದಾಗಲೇ ಸಿಸಿಬಿ ತಂಡ ಅವರನ್ನು ಸುತ್ತುವರೆದಿದೆ.
ಬಳಿಕ ಅಪಹರಣಕಾರರ ತಂಡದಲ್ಲಿದ್ದ ಕುಶಾಲನಗರದ ಬದ್ರುನ್ನಿಸಾ ಬಡಾವಣೆ 4ನೇ ಬ್ಲಾಕ್ ನಿವಾಸಿ ದಸ್ತಗೀರ್ ಪಾಷರ ಪುತ್ರ ಮೊಹಮ್ಮದ್ ಕಬೀರ್(52), ಕಬೀರ್ ಪುತ್ರ ಮೊಹಮ್ಮದ್ ಜಮೀಲ್(27), ಬೈಚನಹಳ್ಳಿ 1ನೇ ಬ್ಲಾಕ್ ನಿವಾಸಿ ಮೂಸರವರ ಪುತ್ರ ಉಮ್ಮರ್(42), ಗುಮ್ಮನಕೊಲ್ಲಿಯ ಹಮೀದ್ ಹಾಜಿರವರ ಪುತ್ರ ಇರ್ಷಾದ್(31), ಕೂಡಿಗೆಯ ಖಾದರ್ ಪುತ್ರ ನಾಸೀರ್(34) ಎಂಬ ಐವರನ್ನು ಬಂಧಿಸಲಾಯಿತು. ಅಲ್ಲದೆ ಅಪಹರಣಕಾರರು ಗೃಹಬಂಧನದಲ್ಲಿಟ್ಟಿದ್ದ ಮೌಲ್ವಿ ರೆಹಮಾನ್‌ನನ್ನು ಸುರಕ್ಷಿತವಾಗಿ ಬಿಡಿಸಿಕೊಳ್ಳಲಾಯಿತು. ಆದರೆ ಈ ಸಂದರ್ಭ ಡೀಲ್ ಪಡೆದಿದ್ದ ಅಬ್ದಲ್ ರಜಾಕ್ ನಾಪತ್ತೆಯಾಗಿದ್ದನು.
ದೂರು ದಾಖಲು: ಆರೋಪಿಗಳನ್ನು ಬಂಧಿಸಿದ ಸಿಸಿಬಿ ತಂಡ ಅವರನ್ನು ಮೈಸೂರಿಗೆ ಕರೆ ತಂದಿದ್ದು, ವಿಚಾರಣೆಗೊಳಪಡಿಸಿದೆಯಲ್ಲದೆ, ಮೌಲ್ವಿ ರೆಹಮಾನ್ ನೀಡಿದ ದೂರಿನಂತೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143,147, 364(ಎ),365 ಮತ್ತು 149 ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ನಡುವೆ ಆರೋಪಿಗಳನ್ನು ಮತ್ತೊಮ್ಮೆ ಕುಶಾಲನಗರಕ್ಕೆ ಕರೆದೊಯ್ಯಲಾಗಿದ್ದು ಅಲ್ಲಿ ವಿಚಾರಣೆ ನಡೆಸಲಾಗಿದೆಯಲ್ಲದೆ, ಕೆಲವು ಮಾಹಿತಿಗಳನ್ನು ಕೂಡ ಕಲೆ ಹಾಕಲಾಗಿದೆ ಎನ್ನಲಾಗುತ್ತಿದೆ.
ಮತ್ತೊಂದೆಡೆ ಕೊಡಗಿನ ಎಸ್ಪಿ ಮಂಜುನಾಥ್ ಅಣ್ಣಿಗೇರಿ ಕೂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣ ತಿರುವು ಪಡೆದುಕೊಳ್ಳುವ ಸಾಧ್ಯತೆಯೂ ಇದೆ. ಇದೆಲ್ಲದರ ನಡುವೆ ಮೌಲ್ವಿ ಫಜರ್ ಉಲ್ ರೆಹಮಾನ್ ಒಬ್ಬ ಖತರ್‌ನಾಕ್ ಆಗಿದ್ದು ಮೌಲ್ವಿ ವೇಷ ಧರಿಸಿ ನಂಬಿದವರಿಗೆ ಪಂಗನಾಮ ಹಾಕುವುದರಲ್ಲಿ ನಿಸ್ಸೀಮ ಎಂಬುವುದು ಕೂಡ ಗೊತ್ತಾಗಿದೆ. ಆತ ಮುಂಡಾಯಿಸಿದ ಹಣವನ್ನು ವಸೂಲಿ ಮಾಡಲು "ಕಿಡ್ನಾಪ್" ಮಾಡಲಾಗಿತ್ತು ಎಂಬ ಸತ್ಯವೂ ಹೊರಬಂದಿದೆ. ಮೌಲ್ವಿ ಫಜರ್ ಉಲ್ ರೆಹಮಾನ್‌ನ ಹಿನ್ನಲೆಯನ್ನು ಕೆದಕಿದರೆ ಆತ ಎಂತಹ ಖತರ್‌ನಾಕ್ ಎಂಬುವುದು ಸುಲಭವಾಗಿ ಅರ್ಥವಾಗಿ ಬಿಡುತ್ತದೆ.
ಟೈಲರ್ ಮೌಲ್ವಿಯಾದ: 46ವರ್ಷ ಪ್ರಾಯದ ಮೌಲ್ವಿ ಫಜರ್ ಉಲ್ ರೆಹಮಾನ್ ಉತ್ತರಪ್ರದೇಶದ ಮುಜಾಫರ್ ನಗರದ ನಯಾಜ್‌ಫುರ್ ಮೊಹಲ್ಲಾ ನಿವಾಸಿ ಹಾಜೀ ಸಾಹೇಬ್ ಅವರ ಪುತ್ರನಾಗಿದ್ದು, ಕೆಲವು ವರ್ಷಗಳ ಹಿಂದೆ ಹೊಟ್ಟೆಪಾಡಿಗಾಗಿ ಹುಬ್ಬಳ್ಳಿಗೆ ಬಂದ ರೆಹಮಾನ್ ಟೈಲರ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು.
ಈತನಿಗೆ ಎರಡು ಹೆಂಡತಿಯರು. ಎರಡನೆ ಹೆಂಡತಿಯೊಂದಿಗೆ ಹುಬ್ಬಳ್ಳಿಯಲ್ಲಿದ್ದ ಈತನಿಗೆ ಟೈಲರ್ ಕೆಲಸ ಮಾಡುತ್ತಿದ್ದಾಗ ಒಂದಷ್ಟು ಮಂದಿಯ ಪರಿಚಯವಾಗಿತ್ತು. ಇಲ್ಲಿಯ ಜನ ಮಾಟ ಮಂತ್ರವನ್ನು ಸುಲಭವಾಗಿ ನಂಬುತ್ತಾರೆ ಎಂಬುದನ್ನು ಅರಿತ ಆತ ತನ್ನ ವರಸೆ ಆರಂಭಿಸಿದ್ದನು. ತಾನು ಮಾಟ ತೆಗೆಸುತ್ತೇನೆ ಹಾಗೆಯೇ ನಿಮ್ಮ ಜಮೀನಿನಲ್ಲಿ ನಿಧಿಯಿದ್ದರೆ ಅದನ್ನು ಕೂಡ ಹೊರ ತೆಗೆದು ಕೊಡುವುದಾಗಿ ಪುಂಗಿ ಬಿಡತೊಡಗಿದನು. ಇದರಿಂದ ಒಂದಷ್ಟು ಸಂಪಾದನೆಯೂ ಆಯಿತು. ಯಾವಾಗ ಇದರಲ್ಲಿ ಹಣ ಮಾಡಬಹುದು ಎಂಬುವುದು ಅರಿವಿಗೆ ಬಂತೋ ತನ್ನ ಗೆಟಪ್ ಬದಲಾಯಿಸಿ ಮೌಲ್ವಿಯಾಗಿ ಬಿಟ್ಟನು.
ಕುಶಾಲನಗರಕ್ಕೆ ಮೌಲ್ವಿ ಎಂಟ್ರಿ: ಹೀಗೆ ಊರೂರು ತಿರುಗುತ್ತಿದ್ದಾಗ ಈತನಿಗೆ ಕುಶಾಲನಗರದ ಬೈಚನಹಳ್ಳಿಯ ನಿವಾಸಿ ಮ್ಯಾಕ್ಸಿಕ್ಯಾಬ್ ಮಾಲೀಕ ಉಮ್ಮರ್ ಪರಿಚಯನಾಗಿದ್ದನು. ಈ ಸಂದರ್ಭ ಆತ ಮೌಲ್ವಿ ರೆಹಮಾನ್ ಜೊತೆ ನಾನು ಹಾಗೂ ಕಬೀರ್ ಎಂಬುವರು ಸೇರಿ ಕುಶಾಲನಗರದ ಮಾದಾಪಟ್ಟಣದಲ್ಲಿ ಮನೆ ಖರೀದಿಸಿದ್ದಾಗಿ ಹೇಳಿದ್ದನು. ಈ ಸಂದರ್ಭ ರೆಹಮಾನ್ ನನ್ನ ದೂರದೃಷ್ಟಿಯಂತೆ ಅಲ್ಲಿ ನಿಧಿಯಿರುವುದಾಗಿ ಗೋಚರಿಸುತ್ತದೆ ಎಂದಿದ್ದನು. ಇದನ್ನು ಕೇಳಿದ ಉಮ್ಮರ್ ಖುಷಿಪಟ್ಟಿದ್ದನು. ತಮ್ಮ ಮನೆಯಲ್ಲಿರುವ ಕೋಟ್ಯಾಂತರ ರೂಪಾಯಿಯ ಬೆಲೆಬಾಳುವ ನಿಧಿಯನ್ನು ಹೊರತೆಗೆಯುವ ಬಗ್ಗೆ ವಿಚಾರಿಸಿದಾಗ ಅದನ್ನು ತೆಗೆಯಬೇಕಾದರೆ ತುಂಬಾ ಖರ್ಚಾಗುತ್ತದೆ ಎಂದು ಮೌಲ್ವಿ ರೆಹಮಾನ್ ಹೇಳಿದ್ದನು.
ಅದಕ್ಕೆ ಉಮ್ಮರ್ ಹಾಗೂ ಕಬೀರ್ ಅದು ಎಷ್ಟು ಬೇಕಾದರು ಖರ್ಚಾಗಲಿ ಅದನ್ನು ನಾವು ಕೊಡುವುದಾಗಿ ಹೇಳಿದ್ದರು. ಬಕ್ರಾಗಳು ತಾನು ತೋಡಿದ ಗುಂಡಿಗೆ ಬಿದ್ದವೆಂದು ತಿಳಿದ ಮೌಲ್ವಿ ರೆಹಮಾನ್ ನಿಧಿ ತೆಗೆಯಲು ಸುಮಾರು12 ಲಕ್ಷ ರೂಪಾಯಿಯ ಬೇಡಿಕೆಯಿಟ್ಟನು. ಕೋಟ್ಯಾಂತರ ರೂಪಾಯಿಯ ಬೆಲೆ ಬಾಳುವ ಚಿನ್ನಾಭರಣ ಸಿಗುವಾಗ 12 ಲಕ್ಷ ಕೊಡೋದು ನಮಗೇನು ಕಷ್ಟವಿಲ್ಲ ಎಂದು ಅವರು ಹೇಳಿದ್ದರಿಂದ ಮೌಲ್ವಿ ನಿಧಿ ತೆಗೆಯುವ ಕಾರ್ಯ ಆರಂಭಿಸಿಯೇ ಬಿಟ್ಟನು.
ಹಣದೊಂದಿಗೆ ಮೌಲ್ವಿ ನಾಪತ್ತೆ: ನಿಧಿ ತೆಗೆಯುವ ಮುನ್ನ ಪೂಜೆ ಆರಂಭಿಸಿದ ಈತ ಕಾವೇರಿ ನದಿಗೆ ಬಾಗಿನ ಅರ್ಪಿಸಬೇಕೆಂದು ಅದಕ್ಕೆ ೫ಲಕ್ಷ ನೀಡುವಂತೆ ಕೇಳಿದ್ದನು. ಕೋಟ್ಯಾಂತರ ರೂಪಾಯಿ ತಮ್ಮ ವಶವಾಗುತ್ತದೆ ಎಂಬ ಕನಸು ಕಾಣುತ್ತಿದ್ದ ಅವರು ಅದನ್ನು ನೀಡಿದ್ದರು. ಆದರೆ ಅದನ್ನು ನೀರಿಗೆ ಹಾಕಿದಂತೆ ಮಾಡಿ ತನ್ನ ಜೇಬಿಗೆ ಸೇರಿಸಿಕೊಂಡಿದ್ದನು. ಬಳಿಕ ಮನೆಯ ಒಳಗೆ ರಾತ್ರಿಯಿಡೀ ಅಗೆದು ಮೂರು ಡಬ್ಬಿಗಳನ್ನು ಹೊರತೆಗೆದು ಇದನ್ನು ಬಿಚ್ಚದೆ ಮೂರು ತಿಂಗಳ ಕಾಲ ಪೂಜೆ ಮಾಡುವಂತೆಯೂ ಬಳಿಕ ತೆಗೆಯುವಂತೆಯೂ ಹೇಳಿದ್ದನು. ಅವನು ಹೇಳಿದಂತೆ ಮೂರು ತಿಂಗಳ ಕಾಲ ಪೂಜೆ ಮಾಡಿದ ಉಮ್ಮರ್ ಹಾಗೂ ಕಬೀರ್ ಬಳಿಕ ಡಬ್ಬಿಯ ಮುಚ್ಚಳ ಬಿಚ್ಚಿ ನೋಡಿದಾಗ ಅದರಲ್ಲಿ ಬರೀ ಮಣ್ಣು ಮಾತ್ರ ಇತ್ತು. ಇದರಿಂದ ತಾವು ಮೋಸ ಹೋಗಿರುವುದು ಅವರ ಅರಿವಿಗೆ ಬಂದಿತ್ತು. ಆದರೆ ಆ ವೇಳೆಗೆ ಮೌಲ್ವಿ ನಾಪತ್ತೆಯಾಗಿದ್ದನು.
ಮೌಲ್ವಿ ಹುಡುಕಲು ಡೀಲ್: ಸುಮಾರು 12ಲಕ್ಷ ಕಳೆದುಕೊಂಡ ಉಮ್ಮರ್ ಬೇರೆ ದಾರಿ ಕಾಣದೆ ಮೌಲ್ವಿ ರೆಹಮಾನ್‌ನ ಫೋಟೋ ಹಿಡಿದು ಹಾಸನ, ಹುಬ್ಬಳ್ಳಿ, ಬೆಂಗಳೂರು, ಮೈಸೂರು ಮೊದಲಾದ ಕಡೆಯಲೆಲ್ಲಾ ಹುಡುಕಾಡಿದರಾದರೂ ಆತ ಸಿಗದಿದ್ದಾಗ ಬೆಂಗಳೂರಿಗೆ ತೆರಳಿ ಅಬ್ದುಲ್ ರಜಾಕ್‌ಗೆ ಮೌಲ್ವಿ ಫಜರ್ ಉಲ್ ರೆಹಮಾನ್‌ನ ಫೋಟೋ ನೀಡಿ ಡೀಲ್ ಕುದುರಿಸಿ ಬಂದಿದ್ದನು. ಅದರಂತೆ ಅಬ್ದುಲ್ ರಜಾಕ್ ಮೌಲ್ವಿಯನ್ನು ಹುಡುಕಿ ಉಮ್ಮರ್‌ಗೆ ಒಪ್ಪಿಸಿದ್ದು, ಆತನನ್ನು ತಮ್ಮಲ್ಲಿ ಒತ್ತೆಯಿಟ್ಟುಕೊಂಡು ಹಣ ವಸೂಲಿ ಮಾಡಲು ಉಮ್ಮರ್, ಕಬೀರ್ ಇನ್ನಿತರರು ಮುಂದಾಗಿದ್ದರು. ಇದೀಗ ಹಣವೂ ಕಳೆದುಕೊಂಡು ಜೈಲ್ ಪಾಲಾಗಿದ್ದಾರೆ. ಆದರೆ ಮೌಲ್ವಿ ಫಜರ್ ಉಲ್ ರೆಹಮಾನ್‌ನ ಮೇಲೆ ಅನುಮಾನಗಳು ಹೆಚ್ಚಾಗುತ್ತಿದ್ದು, ಈತ ಇದೇ ರೀತಿ ಇನ್ನೆಷ್ಟು ಮಂದಿಗೆ ನಾಮ ತಿಕ್ಕಿದ್ದಾನೋ ಗೊತ್ತಿಲ್ಲ ಪೊಲೀಸರು ಈತನನ್ನು ವಿಚಾರಣೆಗೊಳಪಡಿಸಬೇಕಾದ ಅಗತ್ಯವಿದೆ.












Click it and Unblock the Notifications