ಮುಖ್ಯಮಂತ್ರಿಗೇ ತಿರುಮಂತ್ರ: ಜ್ಯೋತಿಷಿಗೆ ಗೇಟ್ ಪಾಸ್

ಮುಖ್ಯಮಂತ್ರಿಗಳ ಜನತಾದರ್ಶನವೆಂದರೆ ಸಾಮಾನ್ಯವಾಗಿ ಜನಸಾಮಾನ್ಯರು ತಮ್ಮ ಕಷ್ಟಕಾರ್ಪಣ್ಯಗಳನ್ನು ಹೇಳಿಕೊಂಡು ಒಂದಷ್ಟು ಪರಿಹಾರ ಪಡೆದುಕೊಳ್ಳುವುದು ವಾಡಿಕೆ. ಆದರೆ ಅದನ್ನೇ ಬಳಸಿಕೊಂಡು ಜ್ಯೋತಿಷಿಯೊಬ್ಬ ಸಾಕ್ಷಾತ್ ಮುಖ್ಯಮಂತ್ರಿಗೇ ತಿರುಮಂತ್ರ ಹೇಳಲು ಅಂದರೆ ಭವಿಷ್ಯ ಹೇಳಿ, ಅವರ ಕಷ್ಟಗಳನ್ನು ಪರಿಹರಿಸಲು ಯತ್ನಿಸಿದ್ದಾನೆ. ಹೇಳಿಕೇಳಿ ಯಡಿಯೂರಪ್ಪ ಅವರು ದೇವರು ಮತ್ತು ಭವಿಷ್ಯದಲ್ಲಿ ಅಪಾರ ನಂಬಿಕೆ ಭಕ್ತಿಯಿಟ್ಟವರು. ಮುಂದೇನಾಯಿತು... ಓವರ್ ಟು ಕೃಷ್ಣಾ...
ಬೆಂಗಳೂರಿನ ಸಂಪಂಗಿರಾಮನಗರದ ಜ್ಯೋತಿಷಿ ಬಿ.ವೈ. ನಾರಾಯಣ ಸ್ವಾಮಿಯು 'ನಿಮ್ಮ ಜಾತಕ ಫಲ, ರಾಜಕೀಯ ಭವಿಷ್ಯ ಮತ್ತು ಶತ್ರುನಾಶದ ಕುರಿತು ಜ್ಯೋತಿಷ್ಯ ಹೇಳುತ್ತೇನೆ' ಎಂದು ಯಡಿಯೂರಪ್ಪಗೆ ದುಂಬಾಲು ಬಿದ್ದ. ಇದರಿಂದ ಮುಖ್ಯಮಂತ್ರಿ ಕ್ಷಣಕಾಲ ತಬ್ಬಿಬ್ಬು.
ಜ್ಯೋತಿಷಿಗೆ ತನ್ನ ಮಾತನ್ನು ಪೂರ್ಣಗೊಳಿಸಲು ಬಿಡದೆ 'ಹೋಗು ಹೋಗು' ಎಂದು ಗದರಿಕೊಂಡರು. 'ಅಲ್ಲ ಸ್ವಾಮಿ. ಸ್ವಲ್ಪ ಕೇಳಿ ಇಲ್ಲಿ' ಎಂದು ಹೇಳಲು ಹವಣಿಸಿದ. ಯಡಿಯೂರಪ್ಪ ಆಗಲೂ ಜಗ್ಗಲಿಲ್ಲ. 'ಸಂಪಂಗಿ' ಸ್ವಾಮಿ ಇನ್ನೂ ತಡಬಡಾಯಿಸುತ್ತಿದ್ದನ್ನು ಕಂಡ ಮುಖ್ಯಮಂತ್ರಿ ಸಿಟ್ಟಿಗೆದ್ದು, ಕೂಡಲೇ ಆತನನ್ನು ಹೊರಹಾಕುವಂತೆ ತಮ್ಮ ಭದ್ರತಾ ಸಿಬ್ಬಂದಿಗೆ ಸೂಚಿಸಿದರು. ಬಳಿಕ ಇತರರ ಸಮಸ್ಯೆಗೆ ಕಿವಿಗೊಟ್ಟರು. ಪಾಪ 'ಸಂಪಂಗಿ' ಸ್ವಾಮಿ ತನ್ನ ಭವಿಷ್ಯವನ್ನು ತಾನೇ ಹಳಿಯುತ್ತಾ, ಬಂದ ದಾರಿಗೆ ಸುಂಕವಿಲ್ಲದಂತೆ ಸಂಪಂಗಿ ರಾಮನಗರದ ಬಸ್ ಹಿಡಿದರು.











Click it and Unblock the Notifications