ಅಣ್ಣಾ ಮತ್ತೊಂದು ದಿನ ಉಪವಾಸ ಕೂತರೆ ಏನಾಗುತ್ತದೆ?

ಇದೆಲ್ಲದರಿಂದ ಏನಾಗುತ್ತದೆ? ಕೆಎಸ್ ಈಶ್ವರಪ್ಪ ಕೂಗಾಡಿ ಚೀರಾಡಿ ದಣಿದು ಮನೆಗೆ ಹೋಗುತ್ತಾರೆ, ಲೋಕಪಾಲ ಮಸೂದೆ ನಾಗರಿಕ ಸಮಿತಿ ಸದಸ್ಯರ ತಂಡ ಬರದಿದ್ದರೆ ಕತ್ತೆಬಾಲ ಎಂದು ಮತ್ತು ಅಣ್ಣಾ ಹಜಾರೆ ಒಂದು ದಿನದ ನಿರಶನ ಕೂತರೆ ಕುದುರೆ ಜುಟ್ಟು ಎಂದು ದಪ್ಪ ಚರ್ಮದ ಕೇಂದ್ರ ಸರಕಾರ ತಾನಿಟ್ಟ ಹೆಜ್ಜೆಯೇ ಸರಿ ಎಂಬಂತೆ ವರ್ತಿಸತೊಡಗುತ್ತದೆ.
ಬೆಂಗಳೂರಿನಲ್ಲಿ ಬಾಬಾ ಬೆಂಬಲಿಸಿ ನಡೆದ ಪ್ರತಿಭಟನೆಯೂ ಅಷ್ಟೇ. ಫ್ರೀಡಂ ಪಾರ್ಕ್ ಮುಂದೆ ಓಡಾಡುವ ವಾಹನ ಸಂಚಾರಕರ ಫ್ರೀಡಂ ಅನ್ನೇ ಕಿತ್ತುಕೊಳ್ಳಲಾಗಿತ್ತು. ಕೇಂದ್ರದ ವಿರುದ್ಧ ಘೋಷಣೆ ಕೂಗುತ್ತಿದ್ದವರಲ್ಲಿ ಅನೇಕರಿಗೆ ಅಲ್ಲಿಗೆ ಯಾಕೆ ಬಂದಿದ್ದೇವೆ, ಪ್ರತಿಭಟನೆಯ ಮೂಲ ಉದ್ದೇಶವೇನು ಎಂಬುದೇ ತಿಳಿದಿರುವುದಿಲ್ಲ. ಪ್ರತಿಭಟನೆಗಳು ಇಂದು ಜನಸಾಮಾನ್ಯರ ದಾರಿ ತಪ್ಪಿಸುತ್ತಿವೆ.
ಅಣ್ಣಾ ಹಜಾರೆ, ಅರವಿಂದ್ ಕೇಜ್ರಿವಾಲ್, ಸ್ವಾಮಿ ಅಗ್ನಿವೇಶ್ ಭಾಷಣ ಮುಗಿದ ನಂತರ, ಕೆಲ ಭಾಷಣಗಳನ್ನು ಹಿಂದಿಯಿಂದ ಕನ್ನಡಕ್ಕೆ ಭಾಷಾಂತರಿಸಲಿಲ್ಲ ಎಂದು ಕೆಲ ಕನ್ನಡ ಬೆಂಬಲಿಗರು ಗುಲ್ಲೆಬ್ಬಿಸಿದರು. ಅಲ್ಲಿಗೆ, ಆವತ್ತಿನ ಸಭೆಯ ಮೂಲ ಉದ್ದೇಶ ನೆಗೆದುಬಿದ್ದಿತ್ತು. ಪ್ರತಿಭಟನಾಕಾರರನ್ನು ಸುಮ್ಮನಾಗಿಸಲು ಪೊಲೀಸರಿಗೆ ಸಾಕುಬೇಕಾಯಿತು.
ಪ್ರತಿಭಟನೆಗಳು, ಸಾಧನಾ ಸಮಾವೇಶಗಳು, ಪಾದಯಾತ್ರೆಗಳು ಏನನ್ನಾದರೂ ಸಾಧಿಸಿವೆಯಾ ಎಂದು ನೋಡಿದರೆ, ದರ್ಶಿನಿ ಹೊಟೇಲಿನಲ್ಲಿ ಕರಿದಿಟ್ಟ ಬಿಗ್ ಬೋಂಡಾ ನೆನಪಾಗುತ್ತದೆ. ದಾರಿಹೋಕರ, ವಾಹನ ಸಂಚಾಲಕರ ಅತ್ಯಮೂಲ್ಯ ಸಮಯವನ್ನು ಈ ಪ್ರತಿಭಟನೆಗಳು, ಸಮಾವೇಶಗಳು ಹೈಜಾಕ್ ಮಾಡುತ್ತಿವೆ. ಈ ನಿಟ್ಟಿನಲ್ಲಿ ಸಾಕಷ್ಟು ಚಿಂತನೆ ನಡೆಯಬೇಕಿದೆ.












Click it and Unblock the Notifications