ಅಣ್ಣಾ ಹಜಾರೆ ಬೆಂಗಳೂರಿನಲ್ಲಿ ಏನು ಹೇಳಿದರು?

ಖಾದಿ ಜುಬ್ಬಾ, ಧೋತಿ, ಗಾಂಧಿ ಟೋಪಿ ಧರಿಸಿದ ಕುಳ್ಳಗಿನ ಆಕೃತಿಯ ಅಣ್ಣಾ ಹಜಾರೆ ಹಸನ್ಮುಖಿಯಾಗಿಯೇ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಾಡಿದ ಭಾಷಣಕ್ಕೆ ನೆರೆದಿದ್ದ ಜನರ ಜಯಘೋಷ ವಿಧಾನಸೌಧವನ್ನು ತಲುಪುವಂತಿತ್ತು, ಕರತಾಡನ ಮುಗಿಲು ಮುಟ್ಟುವಂತಿತ್ತು. 73 ವರ್ಷದ ನಿಷ್ಕಳಂಕ ಮನಸಿನ 'ಯುವಕ' ಅಣ್ಣಾ ಹಜಾರೆ ತಣ್ಣನೆಯ ಮಾತುಗಳಲ್ಲೇ ರಾಜಕಾರಣಿಗಳನ್ನು ಕುಟುಕಿದರು, ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಪಕ್ಕಕ್ಕಿಟ್ಟು ಯುವಜನತೆ ಬದುಕಿನಲ್ಲಿ ಹೇಗಿರಬೇಕೆಂದು ಪಾಠ ಹೇಳಿದರು.
ಶುದ್ಧ ಆಚಾರ, ಶುದ್ಧ ವಿಚಾರ, ನಿಷ್ಕಳಂಕ ಜೀವನ, ಒಂದಿಷ್ಟು ತ್ಯಾಗ ಮತ್ತು ಅವಮಾನ ಸಹಿಸುವ ಶಕ್ತಿ ; ಈ ಐದು ಅಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ದೇವರೇ ನಮ್ಮ ರಕ್ಷಣೆಗೆ ಬಂದು ನಿಲ್ಲುತ್ತಾನೆ. ಆಗ ಅಣ್ಣಾ ಹಜಾರೆಗಿಂತ ಹೆಚ್ಚಿನ ಕೆಲಸ ಮಾಡುವ ಶಕ್ತಿ ಯುವಜನತೆಯಲ್ಲಿ ಬರುತ್ತದೆ ಎಂದು ಕಿವಿಮಾತು ಹೇಳಿದರು. ಆದರೆ, ಬ್ರಹ್ಮಚಾರಿಯಾಗಿರುವ ವಿಷಯದಲ್ಲಿ ಅಣ್ಣಾ ಹಜಾರೆಯನ್ನು ಹಿಂಬಾಲಿಸಬೇಡಿ, ಸಂಸಾರಿಗಳಾಗಿ, ನಿಮ್ಮ ಮಕ್ಕಳು ಮರಿಗಳನ್ನೂ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಅಣಿ ಮಾಡಿ ಎಂದು ಅವರು ಹಾಸ್ಯಪ್ರಜ್ಞೆ ಮೆರೆದರು.
ನನ್ನಲ್ಲಿ ಕಾರಿಲ್ಲ, ಬಂಗಲೆಯಿಲ್ಲ, ಬ್ಯಾಂಕ್ ಬ್ಯಾಲೆನ್ಸ್ ಇಲ್ಲ. ಲಕ್ಷಪತಿ, ಕರೋಡಪತಿಗಳಿಗೆ ಇಲ್ಲದ ಆನಂದ ಮಾತ್ರ ನನ್ನಲ್ಲಿರುವುದು. ಹೀಗಾಗಿಯೇ ಭ್ರಷ್ಟರ ವಿರುದ್ಧ ಹೋರಾಡಲು ನನ್ನಲ್ಲಿ ಇಷ್ಟು ಶಕ್ತಿ ಉಳಿದಿದೆ ತಮ್ಮಲ್ಲಿರುವ ಶಕ್ತಿಯ ಗುಟ್ಟು ರಟ್ಟು ಮಾಡಿದರು. ಹಾಗೆಯೆ, ತಮ್ಮ ಮಾತನ್ನು ಮುಗಿಸುವ ಮುನ್ನ, ರಾಜಕಾರಣಿಗಳು, ಅಧಿಕಾರಿಗಳು ಇಷ್ಟು ವರ್ಷ ಹಣ ತಿಂದಿದ್ದು ಸಾಕು, ನನ್ನ ಮಾತು ಕೇಳಿಯಾದರೂ ಇನ್ನು ಮುಂದೆ ಭ್ರಷ್ಟಾಚಾರವನ್ನು ತ್ಯಜಿಸಲಿ ಎಂದು ಆಹ್ವಾನವನ್ನು ನೀಡಿದರು. ಭ್ರಷ್ಟ ರಾಜಕಾರಣಿಗಳು ಏನೆನ್ನುತ್ತಾರೆ?
ಕಿರಣ್ ಬೇಡಿ ಹೇಳಿದ್ದು : ನೂರು ರುಪಾಯಿಯಲ್ಲಿ 16 ರು. ಮಾತ್ರ ಸಕಾರ್ಯಕ್ಕೆ ವಿನಿಯೋಗವಾಗುತ್ತಿದ್ದು, ಉಳಿದ 84 ರು. ಭ್ರಷ್ಟರ ಪಾಲಾಗುತ್ತಿದೆ. ದೇಶದ ಅತಿ ಭ್ರಷ್ಟ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಭ್ರಷ್ಟರ ವಿರುದ್ಧದ ಹೋರಾಟ ಗೆದ್ದರೆ ಭಾರತೀಯರು ಗೆದ್ದಂತೆ. ಹೋರಾಟ ಇಲ್ಲಿಂದಲೇ ಪ್ರಾರಂಭವಾಗಲಿ ಎಂದು ಹೇಳಿದ ಕಿರಣ್ ಬೇಡಿ, India Against Corruption ಚಳವಳಿ ಆರಂಭವಾಗಿದ್ದು ಮತ್ತು ನಡೆದುಕೊಂಡ ದಾರಿಯನ್ನು ಸಂಕ್ಷಿಪ್ತವಾಗಿ ವಿವರಿಸಿದರು.
ಸ್ವಾಮಿ ಅಗ್ನಿವೇಶ್ ಏನಂದರು? : ಅಣ್ಣಾ ಹೋರಾಟಕ್ಕೆ ಬೆಂಬಲವಾಗಿ ನಿಂತಿರುವ ಸ್ವಾಮಿ ಅಗ್ನಿವೇಶ್ ಅವರು, ಮೋಸ್ಟ್ ವಾಂಟೆಡ್ 50 ಉಗ್ರರ ಪಟ್ಟಿಯನ್ನು ಕೇಳಿದಂತೆ, ನಾವು ಪ್ರತಿ ರಾಜ್ಯದಿಂದ 50 ಅತಿ ಭ್ರಷ್ಟ ರಾಜಕಾರಣಿಗಳ, ಅಧಿಕಾರಿಗಳು ಪಟ್ಟಿ ಕೇಂದ್ರಕ್ಕೆ ಸಲ್ಲಿಸೋಣ. ಜನ ಲೋಕಪಾಲ ಮಸೂದೆ ಮಂಡನೆಯಾಗಿ ಈ ಭ್ರಷ್ಟರನ್ನು ಮಟ್ಟ ಹಾಕಿದರೆ ನಮಗೆ ಎರಡನೇ ಸ್ವಾತಂತ್ರ್ಯ ಲಭಿಸಿದಂತೆ ಎಂದು ಸಿಡಿಲಿನ ಭಾಷಣ ಮಾಡಿದರು.
ಗುಡುಗಿದ ಅರವಿಂದ್ ಕೇಜ್ರಿವಾಲ್ : ನಿಗಿನಿಗಿ ಬಿಸಿನಲ್ಲಿ ಕುಳಿತ ಪ್ರತಿಯೊಬ್ಬರಿಂದ ಹರಿದ ಬೆವರು ವ್ಯರ್ಥವಾಗುವುದಿಲ್ಲ. ಭ್ರಷ್ಟರ ವಿರುದ್ಧ ಇಡೀ ದೇಶ ಮಾಡುತ್ತಿರುವ ಹೋರಾಟಕ್ಕೆ ಜಯ ಸಂದೇ ಸಲ್ಲುತ್ತದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ ಕೇಜ್ರಿವಾಲ್ ಅವರು, ಜನ ಲೋಕಪಾಲ ಮಸೂದೆಯಲ್ಲಿ ಏನಿದೆ ಎಂದು ಎಳೆಎಳೆಯಾಗಿ ಬಿಡಿಸಿ ಹೇಳಿದರು. ಮಸೂದೆಯಲ್ಲಿ ಏನಿರಬೇಕು ಎಂಬುದನ್ನು ಜನರಿಗೆ ತಿಳಿಸಿ ಅವರಿಂದ ಒಪ್ಪಿಗೆ ದೊರೆತನಂತರವೇ ಡ್ರಾಫ್ಟ್ ನಲ್ಲಿ ಸೇರಿಸಲಾಗುತ್ತದೆ ಎಂದು ನೆರೆದಿದ್ದ ಜನತೆಯ ಒಪ್ಪಿಗೆಯನ್ನೂ ಪಡೆದರು. ಹಾಗೆಯೆ, ಈ ಡ್ರಾಫ್ಟನ್ನು ವಿರೋಧಿಸುವ ಪಕ್ಷಕ್ಕೆ ಚುನಾವಣೆಯಲ್ಲಿ ಮತ ನೀಡುವುದಿಲ್ಲ ಎಂಬ ಪ್ರತಿಜ್ಞೆ ಮಾಡಬೇಕೆಂದು ಕರೆ ನೀಡಿದರು.
ಲಂಚಾವತಾರ ಮುಂತಾದ ನಾಟಕಗಳ ಮುಖಾಂತರ ರಾಜಕಾರಣಿಗಳ ಬಣ್ಣ ಬಯಲು ಮಾಡಿರುವ ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯ ಮಾತಿನ ಪಟಾಕಿ ಸಿಡಿಸಿದರು. ಈ ಸಭೆಯನ್ನು ಆಯೋಜಿಸಿದ್ದ 'ಭ್ರಷ್ಟಾಚಾರ ಸಾಕು' ಸಂಘಟನೆಯ ಹಿಂದಿನ ಶಕ್ತಿಯಾಗಿರುವ ಮತ್ತು ಲೋಕಾಯುಕ್ತ ಕಮಿಷನರ್ ಆಗಿರುವ ಬಾಲಸುಬ್ರಮಣ್ಯ ಅವರು ಹಿಂದಿಯಲ್ಲಿ ಮಾಡಿದ ಭಾಷಣವನ್ನು ಸಂಕ್ಷಿಪ್ತವಾಗಿ ಕನ್ನಡದಲ್ಲಿ ಭಾಷಾಂತರಿಸಿದರು. ಕನ್ನಡ ಭಾಷಾಂತರ ಬೇಡ, ಹಿಂದಿ ಅರ್ಥವಾಗುತ್ತದೆ ಎಂದು ಆಗ್ರಹಿಸಿದ ಕೆಲ ಜನರ ವಿರುದ್ಧ ಕೆಲ ಕನ್ನಡಿಗರು ತಿರುಗಿಯೂ ಬಿದ್ದ ಘಟನೆ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಕನ್ನಡಿಗರನ್ನು ಸಮಾಧಾನಪಡಿಸಬೇಕಾಯಿತು.
ಸಭೆಗೆ ಬೆಂಗಳೂರು ಮಾತ್ರವಲ್ಲ, ಮೈಸೂರು, ಮಂಗಳೂರು, ಬಾಗಲಕೋಟೆ, ಗದಗ ಜಿಲ್ಲೆಯ ನವಲಗುಂದದಿಂದ ಕೂಡ ಭ್ರಷ್ಟಾಚಾರವನ್ನು ವಿರೋಧಿಸುವ ಜನರು ಬಂದಿದ್ದರು. ಸಭೆಯನ್ನು ಜನರು ನೀಡಿದ ದೇಣಿಗೆಯಿಂದಲೇ ಆಯೋಜಿಸಲಾಗಿತ್ತು. ಇಂದು ಕೂಡ ಜನರಿಂದಲೇ ಸುಮಾರು 49,350 ರು.ನಷ್ಟು ಹಣ ಸಂಗ್ರಹಿಸಲಾಯಿತು. ಆಯೋಜಕರು ಪ್ರತಿ ದುಡ್ಡಿನ ಲೆಕ್ಕ ನೀಡಿದರು. ಆರಂಭದಲ್ಲಿ ಸ್ಮರಾತ್ಮ ಎಂಬ ರಾಕ್ ಮ್ಯುಸಿಕ್ ತಂಡ ಕನ್ನಡ, ಹಿಂದಿ ಹಾಡುಗಳನ್ನು ಹಾಡಿತು.
ಇಂದಿನ ಸಮಾರಂಭವನ್ನು ಬಹುವಾಗಿ ಮೆಚ್ಚಿದ ಅಣ್ಣಾ ಹಜಾರೆ ಅವರ ಕ್ರಾಂತಿಯ ಕಿಡಿ ನೇರವಾಗಿ ಪ್ರಸಾರ ಮಾಡುತ್ತಿರುವ ಟಿವಿ ಚಾನಲ್ಲುಗಳ ಮುಖಾಂತರ ಕರ್ನಾಟಕದ ಮೂಲೆಮೂಲೆಗಳಿಗೂ ಹಬ್ಬಿದೆ. ಇದೇ ಮಾದರಿಯ ಜನಸಂಘಟನೆ ದೇಶದ ಇತರ ರಾಜ್ಯಗಳಲ್ಲಿಯೂ ಹಬ್ಬಬೇಕು ಎಂದು ಅವರು ಶಬಾಸ್ ಗಿರಿ ನೀಡಿದರು. ಹಾರ ತುರಾಯಿ, ಡಂಭಾಚಾರ, ಒಣ ಆಡಂಬರ, ಶುಷ್ಕ ಮಾತುಗಳಿಲ್ಲದ ಈ ಸಾರ್ವಜನಿಕ ಸಮಾವೇಶವನ್ನು ಜನಸಾಮಾನ್ಯರೇ ನಡೆಸಿಕೊಟ್ಟಿದ್ದು ವಿಶೇಷ.












Click it and Unblock the Notifications