ಬಸ್ ಪ್ರಯಾಣಿಕರ ಮೇಲೆ ಲಾರಿ ಹರಿದು ನಾಲ್ವರ ಸಾವು

ಮಂಗಳ ಟ್ರಾವೆಲ್ಸ್ ಬಸ್ ನಲ್ಲಿ ಬರುತ್ತಿದ್ದ ಪ್ರಯಾಣಿಕರು ಭಟ್ಕಳಕ್ಕೆ ತೆರಳಲು ಬಸ್ಸಿನಿಂದ ಕೆಳಗಿಳಿದಿದ್ದರು. ಕ್ಲೀನರ್ ಪ್ರಯಾಣಿಕರ ಲಗೇಜನ್ನು ಇಳಿಸುತ್ತಿದ್ದ. ಆಗ ಹಿಂದಿನಿಂದ ವೇಗವಾಗಿ ಬಂದ ಯಮರೂಪಿ ಲಾರಿ ಬಸ್ ಪಕ್ಕದಲ್ಲಿದ್ದವರ ಮೇಲೆ ಹರಿದಿದೆ. ಅಪಘಾತದ ಬಳಿಕ ಲಾರಿಯನ್ನು ನಿಲ್ಲಿಸದೆ ಪರಾರಿಯಾಗುತ್ತಿದ್ದ ಚಾಲಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಚಿವ ಶ್ರೀರಾಮುಲು ಭದ್ರತಾಧಿಕಾರಿ ಸಾವು: ಕರ್ತವ್ಯ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಕುಡಿತಿನಿ ಠಾಣೆ ಎಎಸ್ಐ ಗವಿಸಿದ್ದಪ್ಪ ಅವರು ರಸ್ತೆ ಅಪಘಾತದಲ್ಲಿ ಪ್ರಾಣತೆತ್ತಿದ್ದಾರೆ. ಇವರು ಸಚಿವ ಶ್ರೀರಾಮುಲು ಅವರ ಭದ್ರತಾಧಿಕಾರಿ. ಬಳ್ಳಾರಿಯ ಹಾಲಂಭಾವಿ ಬಳಿ ಶುಕ್ರವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದೆ. ಗವಿಸಿದ್ದಪ್ಪ ಅವರ ಬೈಕಿಗೆ ಎದುರಿನಿಂದ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದಿದೆ. ಗಾಯಗೊಂಡ ಎಎಸ್ಐ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ದೊಡ್ಡಬಳ್ಳಾಪುರ ಬಳಿ ಮರಳು ಲಾರಿ ಅಪಘಾತ: ಸಮೀಪದ ಗೌರಿಬಿದನೂರು ರಸ್ತೆಯಲ್ಲಿರುವ ಗೊಲ್ಲಹಳ್ಳಿ ಬಳಿ ಮರಳು ತುಂಬಿದ್ದ ಲಾರಿಯೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿದಂತೆ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ಹನುಮಂತಪುರ ನಿವಾಸಿಗಳಾದ ಲಾರಿ ಚಾಲಕ ಶ್ರೀರಾಮ (40), ನಾಗರಾಜು (28) ಮತ್ತು ನಾಗರಾಜು (42) ಮೃತಪಟ್ಟವರು. ಲಾರಿ ಚಾಲಕನ ಅಜಾಗರೂಕತೆಯೇ ಸಾವಿಗೆ ಕಾರಣ ಎನ್ನಲಾಗಿದೆ.












Click it and Unblock the Notifications