ಭಾರದ್ವಾಜ್ ಗೆ ಬಳ್ಳಾರಿಯಲ್ಲಿ ಬಿಜೆಪಿ ಬಣದ ಧಿಕ್ಕಾರ

ಈ ಸಂದರ್ಭದಲ್ಲಿ ಮಾತನಾಡಿದ ಗುತ್ತಿಗನೂರು ವಿರೂಪಾಕ್ಷಗೌಡ, ಜನಾದೇಶದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವನ್ನು ಕೆಳಗಿಳಿಸಲು ಕಾಂಗ್ರೆಸ್ - ಜೆಡಿಎಸ್ ನಡೆಸುತ್ತಿರುವ ತಂತ್ರಗಳಿಗೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಕುಣಿಕೆ ಆಗುತ್ತಿದ್ದಾರೆ. ಕಾರಣ ಪದೇ ಪದೇ ಸರ್ಕಾರವನ್ನು ಸಂಕಷ್ಟಕ್ಕೆ ಈಡು ಮಾಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ. ಎಲ್ಲಾ ಜಾತಿ, ಜನಾಂಗ, ವರ್ಗದ ಜನರು ಸುಖ ನೆಮ್ಮದಿಯ ಬದುಕನ್ನು ನಡೆಸುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರ ಆಡಳಿತದ ಯಶಸ್ಸನ್ನು ಸಹಿಸದೇ ಇಲ್ಲಸಲ್ಲದ ನೆಪಗಳನ್ನು ಹುಡುಕಿಕೊಂಡು ಕಾಂಗ್ರೆಸ್ - ಜೆಡಿಎಸ್ ಅಧಿಕ್ಕಾರಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳುಮಾಡುತ್ತಿವೆ ಎಂದು ಆರೋಪಿಸಿದರು. [ಕಾಂಗ್ರೆಸ್ ನಿಂದ ರಸ್ತೆ ಬಂದ್]
ಭಾರದ್ವಾಜ್ ಅವರನ್ನು ಕೇಂದ್ರ ಸರ್ಕಾರ ಕೂಡಲೇ ಹಿಂದಕ್ಕೆ ಕರೆಯಿಸಿಕೊಳ್ಳಬೇಕು. ಸರ್ಕಾರವನ್ನು ಉರುಳಿಸಿ ವಾಮಮಾರ್ಗದಲ್ಲಿ ಅಧಿಕಾರ ಸ್ಥಾಪಿಸುವ ತಂತ್ರಗಾರಿಕೆ ನಡೆಸುತ್ತಿರುವ ಕಾಂಗ್ರೆಸ್ - ಜೆಡಿಎಸ್ ಪಕ್ಷದ ತೀವ್ರ ವಿರೋಧವನ್ನು ಎದುರಿಸಬೇಕು ಎಂದು ಅವರು ಎಚ್ಚರಿಸಿದರು. ರಾಜ್ಯಪಾಲರು ಕೇವಲ ಒಂದು ವರ್ಷದಲ್ಲಿ 2 ಬಾರಿ ರಾಜ್ಯ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಗುರಿ ಮಾಡಿದ್ದಾರೆ. ಪದೇ ಪದೇ ವಿಶ್ವಾಸಮತ ಕೋರುವ ಹೊಸದಾದ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಶಾಸಕತ್ವ ಉಳಿಸಿಕೊಂಡ 16 ಶಾಸಕರು ಕೂಡ ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂದರು.
ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಪಾರ್ವತಿ ಎಸ್. ಇಂದೂಶೇಖರ್, ಉಪ ಮೇಯರ್ ಶಶಿಕಲಾ ಕೃಷ್ಣಮೋಹನ್, ಜಿಲ್ಲಾ - ತಾಲೂಕು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ಕಾರ್ಪೊರೇಟರ್‌ಗಳು, ಆರ್‌ಬಿಕೆಎಂಯು ಅಧ್ಯಕ್ಷ ತಿಮ್ಮಾರೆಡ್ಡಿ, ಬುಡಾ ಅಧ್ಯಕ್ಷ ಎಸ್. ಗುರುಲಿಂಗನಗೌಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು. [ಯಡ್ಡಿ vs ಭಾರದ್ವಾಜ್ : ಸುದ್ದಿ ಸಂಗ್ರಹ]











Click it and Unblock the Notifications