ಹರದನಹಳ್ಳಿಯ ವೀರನಿಗೆ ಇಂದು ಅಂತಿಮ ವಿದಾಯ

ಬಿಎಸ್ಎಫ್ ನ 57ನೇ ಬಟಾಲಿಯನ್ ನಲ್ಲಿರುವ ಕಾಂತರಾಜು ಕರ್ತವ್ಯನಿರತನಾಗಿರುವಾಗಲೆ ಪಶ್ಚಿಮ ಬಂಗಾಳದ ಪತಿರಾಮ್ ಎಂಬಲ್ಲಿ ಹಸುಗಳ್ಳರಿಂದ ಚೂರಿ ಇರಿತಕ್ಕೊಳಗಾಗಿ ಶನಿವಾರ ರಾತ್ರಿ ಹತ್ಯೆಯಾಗಿದ್ದಾರೆ. ಕಾಂತರಾಜು ಅವರು 1987ರಲ್ಲಿಯೇ ಬಿಎಸ್ಎಫ್ ಸೇರಿದ್ದರು ಮತ್ತು ಇದೇ ವರ್ಷ ಜೂನ್ ನಲ್ಲಿ ನಿವೃತ್ತರಾಗುವವರಿದ್ದರು.
ಮಾನವೀಯತೆ ಮೆರೆದ ದೇವೇಗೌಡ : ಪತ್ನಿ ಹೇಮಾವತಿ ಮತ್ತು 6 ವರ್ಷದ ಮಗಳು ಜಾಹ್ನವಿಯನ್ನು ಅಗಲಿರುವ ಕಾಂತರಾಜು ಅವರ ಮೃತಶರೀರ ಸೋಮವಾರ ಹರದನಹಳ್ಳಿಗೆ ಬಂದು ತಲುಪಿದೆ. ನಮ್ಮ ನಾಯಕರುಗಳೆಲ್ಲ ಒಸಾಮಾನನ್ನು ಹತ್ಯೆಗೈದ ಸಂಭ್ರಮವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಹರದನಹಳ್ಳಿಗೆ ಧಾವಿಸಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಅವರು ಕಾಂತರಾಜು ಅವರ ಕುಟುಂಬವನ್ನು ಭೇಟಿ ಮಾಡಿ, ಸಾಂತ್ವನ ಹೇಳಿ ಮಾನವೀಯತೆ ಮೆರೆದಿದ್ದಾರೆ.
ಭಾರತದ ಈಶಾನ್ಯ ಭಾಗಗಳಲ್ಲಿ ನಮ್ಮ ಕರ್ನಾಟಕದ ಸೈನಿಕರು ಸೇವೆ ಸಲ್ಲಿಸುತ್ತಿದ್ದಾರೆ. ಯಾರಾದರೂ ಹತರಾದರೆ, ಅವರ ದೇಹವನ್ನು ಅಲ್ಲಿಂದ ಇಲ್ಲಿಗೆ ತರಲು ಎರಡರಿಂದ ಮೂರು ದಿನ ಬೇಕಾಗುತ್ತದೆ. ಹುತಾತ್ಮರ ದೇಹವನ್ನು ಇಲ್ಲಿಗೆ ವಿಶೇಷ ವಿಮಾನದಲ್ಲಿ ತರುವ ವ್ಯವಸ್ಥೆ ಮಾಡಬೇಕಾಗಿ ಕೇಂದ್ರಕ್ಕೆ ಆಗ್ರಹಿಸಿರುವುದಾಗಿ ದೇವೇಗೌಡ ಈ ಸಂದರ್ಭದಲ್ಲಿ ಹೇಳಿದರು.
ಹುತಾತ್ಮರಿಗೆ ಅಂತಿಮ ನಮನ ಸಲ್ಲಿಸಿದ ಮಾಜಿ ಸಚಿವ ಎಚ್ ಡಿ ರೇವಣ್ಣ, ಕಾಂತರಾಜು ಅವರ ದುಃಖತಪ್ತ ಕುಟುಂಬಕ್ಕೆ 5 ಲಕ್ಷ ರು. ನಗದು ಮತ್ತು ಒಂದು ನಿವೇಶನವನ್ನು ನೀಡಬೇಕಾಗಿ ರಾಜ್ಯ ಸರಕಾರವನ್ನು ಆಗ್ರಹಿಸಿದರು. ವಿಶ್ವಕಪ್ ಗೆದ್ದ ಕೂಡಲೆ ಕ್ರಿಕೆಟ್ ವೀರರಿಗೆ ಬಿಡಿಎ ನಿವೇಶನ, ನಂತರ 25 ಲಕ್ಷ ರು. ನಗದು ನೀಡುವುದಾಗಿ ಘೋಷಿಸಿದ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು, ಈ ನಮ್ಮ ನಾಡಿನ ವೀರನಿಗೆ ಕನಿಷ್ಠಪಕ್ಷ 5 ಲಕ್ಷ ರು. ನಗದು ಮತ್ತು ಯಾವುದೇ ಒಂದು ಮೂಲೆಯಲ್ಲಿ ನಿವೇಶನ ನೀಡುವ ಮನಸ್ಸಾದರೂ ತೋರುವರೆ?












Click it and Unblock the Notifications