ಮಡುಗಟ್ಟಿದ ದುಃಖ ತಾಳದೆ ಬಿಕ್ಕಳಿಸಿದ ಸಚಿನ್

ಅತ್ಯಂತ ಬಿಗಿ ಭದ್ರತೆಯಲ್ಲಿ ಪ್ರಶಾಂತಿ ನಿಲಯಂನ ಕುಲವಂತ್ ಹಾಲ್ ಗೆ ಸಚಿನ್ ತೆಂಡೂಲ್ಕರ್ ಬೆಳಿಗ್ಗೆ 10 ಗಂಟೆ ಸುಮಾರಿಗೆ ಕಾಲಿಟ್ಟಾಗ ನೂರಾರು ಭಕ್ತರು ಜಮಾಯಿಸಿದ್ದರೂ ಒಂದು ಬಗೆಯ ಸಹನೀಯ ಮೌನ ಆವರಿಸಿತ್ತು. ಆಡಬೇಕಾದ ಮಾತುಗಳಿಗಿಂತ ಮೌನವೇ ಹೆಚ್ಚು ಮಾತಾಡುತ್ತಿತ್ತು. ಮೌನ ಆವರಿಸಿಕೊಂಡ ಆ ಹೊತ್ತಿನಲ್ಲಿ ಮನದಲ್ಲಿ ಮಡುಗಟ್ಟಿದ್ದ ದುಃಖ ಕಟ್ಟೆಡೊಡೆದಿತ್ತು. [ಗ್ಯಾಲರಿ]
ಹುಟ್ಟುಹಬ್ಬದ ದಿನವೇ ಏ.24ರಂದು ಆರಾಧ್ಯದೈವ ಶಾಶ್ವತ ಮೌನಕ್ಕೆ ಶರಣಾಗಿದ್ದು ಸಚಿನ್ ಗೆ ಅರಗಿಸಿಕೊಳ್ಳಲು ಸಾಧ್ಯವೇ ಆಗಿರಲಿಲ್ಲ. ಜೀನ್ಸ್ ಮತ್ತು ಶ್ವೇತ ಅಂಗಿ ಧರಿಸಿದ್ದ ಸಚಿನ್ ಸುಮಾರು ಒಂದು ಗಂಟೆ ಕಾಲ ಕುಲವಂತ್ ಹಾಲ್ ನಲ್ಲಿಯೇ ಉಳಿದು ಅಂತಿಮ ನಮನ ಸಲ್ಲಿಸಿದರು. ಮೊಳಕಾಲು ಊರಿ ಪ್ರಣಾಮ ಮಾಡಿ ಸಚಿನ್ ಸುದೀರ್ಘ ಕಾಲ ಮೌನಕ್ಕೆ ಶರಣಾದರು. [ಗ್ಯಾಲರಿ]
ಕೆಲ ಹೊತ್ತಿನಲ್ಲಿ ಹೃದಯದಲ್ಲಿ ಹುದುಗಿಕೊಂಡಿದ್ದ ದುಃಖದ ಒತ್ತಡ ತಾಳಲಾರದೆ ಸಚಿನ್ ಬಿಕ್ಕಳಿಸಲು ಪ್ರಾರಂಭಿಸಿದರು. ಆಗ ಅವರ ಸಹಾಯಕ್ಕೆ ಅವರ ಅಕ್ಕಪಕ್ಕದವರು ಬರಬೇಕಾಯಿತು. ಸಾವರಿಸಿಕೊಂಡು ಕೆಲ ಹೊತ್ತು ಧ್ಯಾನದಲ್ಲಿ ಸಚಿನ್ ಮುಳುಗಿದರು. ಸಾಯಿಬಾಬಾ ಅವರ ಪಾರ್ಥೀವ ಶರೀರಕ್ಕೆ ಪ್ರದಕ್ಷಿಣೆ ಹಾಕಿ ಬಾರದ ಲೋಕಕ್ಕೆ ಹೊರಟಿರುವ ಬಾಬಾಗೆ ಕೊನೆಯ ಪ್ರಣಾಮ ಸಲ್ಲಿಸಿ ಭಾರದ ಹೆಜ್ಜೆಗಳೊಂದಿಗೆ ಹೊರನಡೆದರು. [ಗ್ಯಾಲರಿ]
ಸಾಯಿಬಾಬಾ ಅವರ ಅಂತಿಮ ದರ್ಶನಕ್ಕೆಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನೀಲ್ ಗಾವಸ್ಕರ್ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್ ಮುಂತಾದವರು ಕೂಡ ಆಗಮಿಸಿದ್ದರು. [ವಿಡಿಯೋ]











Click it and Unblock the Notifications