ಕ್ವಾರ್ಟರ್ ಹೆಂಡಕ್ಕಾಗಿ ಸ್ನೇಹಿತನನ್ನೇ ಮುಗಿಸಿದ ಹಂತಕರ ಬಂಧನ

ಜೊತೆಯಲ್ಲಿಯೇ ಹಗಲಿಡೀ ಕೆಲಸ ಮಾಡಿ, ರಾತ್ರಿ ಹೆಂಡ ಕುಡಿದು, ಊಟ ಮಾಡಿ ಮಲಗುವಾಗಲೂ ತನ್ನೊಂದಿಗೆ ಜೊತೆಯಾಗಿರುತ್ತಿದ್ದ ಸಹದ್ಯೋಗಿಗಳೇ ತನ್ನ ಪಾಲಿಗೆ ಯಮನಾಗಿ ಬಿಡುತ್ತಾರೆಂದು ಬಹುಶಃ ಅಪ್ಪಣಿ ಕನಸು ಮನಸಿನಲ್ಲಿ ಯೋಚಿಸಿರಲಿಲ್ಲ. ಆದರೆ ಒಂದೇ ಒಂದು ಕ್ವಾರ್ಟರ್ ಹೆಂಡದ ವಿಚಾರಕ್ಕೆ ನಡೆದ ಸಣ್ಣ ಕಿರಿಕ್ ದೊಡ್ಡ ಜಗಳವಾಗಿ ಅಪ್ಪಣಿಯ ಪ್ರಾಣವನ್ನೇ ಬಲಿತೆಗೆದುಕೊಂಡಿತ್ತು.
ವಿದ್ಯಾನಗರ ನಿವಾಸಿಯಾದ ಸುಬ್ಬಯ್ಯರವರ ಹೋಂಸ್ಟೇ ಕಟ್ಟಡ ಕಾಮಗಾರಿ ನಿರ್ಮಾಣ ಕೆಲಸಕ್ಕೆ ಮೈಸೂರು ಜಿಲ್ಲೆಯ ಕೆ.ಆರ್.ನಗರದ ನಿವಾಸಿಗಳಾದ ಸುನಿಲ್, ಕರಣ್ ಹಾಗೂ ರವಿ ಎಂಬುವರನ್ನು ಕರೆಯಿಸಲಾಗಿತ್ತು. ಇವರೊಂದಿಗೆ ಕೊಡಗಿನವನೇ ಆದ ಕುಶಾಲನಗರ ಬಳಿಯ ಕೂಡಿಗೆಯ ಮಾದಲಾಪುರ ನಿವಾಸಿ ಅಪ್ಪಣಿ(40) ಎಂಬಾತನೂ ಇದ್ದನು.
ಈ ನಾಲ್ವರು ಕೆಲಸ ಮಾಡುತ್ತಾ ಅಲ್ಲಿಯೇ ಶೆಡ್ ನಿರ್ಮಿಸಿಕೊಂಡು ಮಲಗುತ್ತಿದ್ದರು. ಹಗಲೆಲ್ಲಾ ಕೆಲಸ ಮಾಡುತ್ತಿದ್ದ ನಾಲ್ವರು ಸಂಜೆ ಕೆಲಸ ಮುಗಿಸಿ ಟೌನ್‌ಗೆ ಬಂದು ಬಾರ್‌ಗೆ ನುಗ್ಗಿ ಹೆಂಡ ಕುಡಿದು ಪರೋಟ ತಿಂದು ಹಿಂತಿರುಗುವುದು ಮಾಮೂಲಿಯಾಗಿತ್ತು. ಅವತ್ತು ಮಾರ್ಚ್ 9ನೇ ತಾರೀಕು. ಎಂದಿನಂತೆ ಬೆಳಿಗ್ಗೆ ಎದ್ದ ನಾಲ್ವರು ಬೆಳಗ್ಗಿನ ತಿಂಡಿ ಮುಗಿಸಿ ಕೆಲಸ ಆರಂಭಿಸಿದ್ದಾರೆ. ಆ ನಂತರ ಮಧ್ಯಾಹ್ನ ಊಟವೂ ಮಾಡಿದ್ದಾರೆ. ಜೊತೆಯಲ್ಲಿ ಹರಟೆ ಹೊಡೆಯುತ್ತಾ ಸಂಜೆ ತನಕ ಕೆಲಸ ಮಾಡಿ ಕೆಲಸ ಮುಗಿದ ತಕ್ಷಣ ತಾವಿದ್ದ ಶೆಡ್‌ಗೆ ಹೋಗಿದ್ದಾರೆ. ಅಲ್ಲಿ ಸ್ನಾನ ಮಾಡಿ ಬಟ್ಟೆ ಬದಲಾಯಿಸಿ ಅಲ್ಲಿಂದ ಟೌನ್ ಕಡೆಗೆ ಎಂದಿನಂತೆ ಹೊರಟಿದ್ದಾರೆ.
ಜೊತೆಯಲ್ಲಿಯೇ ಮಾತನಾಡುತ್ತಾ ಹೋದವರು ಅಲ್ಲಿನ ಬಾರ್‌ಗೆ ತೆರಳಿ ಕಂಠಮಟ್ಟ ಕುಡಿದಿದ್ದಾರೆ ಬಳಿಕ ಕ್ವಾರ್ಟರ್‌ನ್ನು ಪಾರ್ಸೆಲ್ ಕಟ್ಟಿಸಿಕೊಂಡು ತೂರಾಡುತ್ತಾ ಶೆಡ್‌ಗೆ ಬಂದಿದ್ದಾರೆ.ಹಾಗೆ ಬಂದವರು ಮಲಗಿ ತೆಪ್ಪಗೆ ನಿದ್ದೆ ಮಾಡಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ತಮ್ಮೊಂದಿಗೆ ತಂದಿದ್ದ ಕ್ವಾರ್ಟರ್‌ನನ್ನು ಕುಡಿಯುವ ಸಂದರ್ಭ ಕಿರಿಕ್ ಆರಂಭವಾಗಿದೆ. ಅದು ತಾರಕಕ್ಕೇರಿದೆ. ಹೀಗಾಗಿ ಅವರು ಮೂವರು ಸೇರಿ ಶೆಡ್‌ನಲ್ಲಿದ್ದ ಚೂರಿಯಿಂದ ಆತನ ಕತ್ತನ್ನು ಸೀಳಿದ್ದಾರೆ.
ಅಪ್ಪಣಿ ಸತ್ತಿದ್ದಾನೆ ಎಂದು ತಿಳಿಯುತ್ತಿದ್ದಂತೆಯೇ ಮೂವರಿಗೆ ಭಯವಾಗಿದೆ ಇನ್ನು ಇಲ್ಲಿಯೇ ಇದ್ದರೆ ಕಷ್ಟ ಹಾಗಾಗಿ ಇಲ್ಲಿಂದ ಜಾಗ ಖಾಲಿ ಮಾಡೋದೆ ಒಳ್ಳೆಯದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ರಕ್ತದ ಕಲೆಯಾಗಿದ್ದ ತಮ್ಮ ಬಟ್ಟೆಯನ್ನು ಬದಲಾಯಿಸಿಕೊಂಡ ಅವರು ರಾತ್ರೋ ರಾತ್ರಿ ಅಲ್ಲಿಂದ ನಡೆದು ಬಂದು ಬಸ್ ಸ್ಟ್ಯಾಂಡ್ ತಲುಪಿದ್ದಾರೆ. ಬಳಿಕ ಮೈಸೂರು ಬಸ್ ಹತ್ತಿ ಕೆ.ಆರ್.ನಗರಕ್ಕೆ ಹೋಗಿದ್ದಾರೆ. ಮನೆಯಲ್ಲಿ ಇದ್ದರೆ ಪೊಲೀಸರಿಗೆ ಸಿಕ್ಕಿ ಬೀಳೋದು ಖಂಡಿತಾ ಎಂದರಿತ ಅವರು ಅಲ್ಲಿಂದ ಜಾಗ ಖಾಲಿ ಮಾಡಿ ಒಂದಷ್ಟು ದಿನ ತಲೆಮರೆಸಿಕೊಂಡು ಸುತ್ತಾಡಿದ್ದಾರೆ.
ಇತ್ತ ಮಾರ್ಚ್ 10ರಂದು ಬೆಳಿಗ್ಗೆ ಎಂದಿನಂತೆ ಕೆಲಸ ಮಾಡಲು ಬರಬೇಕಾದವರು ಬಾರದೆಯಿದ್ದಾಗ ಮಾಲೀಕರಾದ ಸುಬ್ಬಯ್ಯರವರು ಆತಂಕಗೊಂಡಿದ್ದರು. ಹಾಗಾಗಿ ಶೆಡ್‌ನತ್ತ ಹೋದಾಗ ಅಲ್ಲಿ ಯಾರೂ ಇರಲಿಲ್ಲ. ಮಲಗಿರ ಬಹುದೆಂದು ಶೆಡ್‌ವೊಳಗೆ ನೋಡಿದಾಗ ಅಪ್ಪಣಿ ಹೆಣವಾಗಿ ಬಿದ್ದಿದ್ದನು. ತಕ್ಷಣ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿ ಸ್ಥಳಕ್ಕೆ ಡಿವೈಎಸ್ಪಿ ಜೆ.ಡಿ.ಪ್ರಕಾಶ್, ಸಿಐ ಸತೀಶ್‌ಕುಮಾರ್, ಇನ್ಸ್‌ಪೆಕ್ಟರ್ ಶ್ರೀಕಾಂತ್ ಹಾಗೂ ಸಿಬ್ಬಂದಿಗಳು ತೆರಳಿ ಸ್ಥಳದ ಮಹಜರು ನಡೆಸಿದರು. ಬಳಿಕ ಶವದ ಮರಣೋತ್ತರ ಪರೀಕ್ಷೆಯನ್ನು ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು.
ಆದರೆ ಅವತ್ತು ಪೊಲೀಸರಿಗೆ ಅಪ್ಪಣಿ ಕೊಲೆ ಮಾಡಿದವರು ಬೇರಾರು ಅಲ್ಲ ಆತ ಜೊತೆಗಿದ್ದವರೇ ಎಂಬುವುದು ತಕ್ಷಣಕ್ಕೆ ಗೊತ್ತಾಗಿ ಹೋಗಿತ್ತು. ಹಾಗಾಗಿ ಸ್ಥಳದಲ್ಲಿ ಸಿಕ್ಕ ಕೆಲವೊಂದು ಸಾಕ್ಷಿಯನ್ನಿಟ್ಟುಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಕೆ.ಆರ್.ನಗರದ ಸುನಿಲ್, ರವಿ ಮತ್ತು ಕರಣ್ ಎಂಬುವರೇ ಹಂತಕರು ಎಂಬುವುದು ಸ್ಪಷ್ಟವಾಗಿತ್ತು. ಹೀಗಾಗಿ ಎಸ್ಪಿ ಮಂಜುನಾಥ್ ಅಣ್ಣಿಗೇರಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಜೆ.ಡಿ.ಪ್ರಕಾಶ್ ನಿರ್ದೇಶನದ ಮೇರೆಗೆ ಸಿಐ ಸತೀಶ್‌ಕುಮಾರ್, ಎಸ್‌ಐ ಶ್ರೀಕಾಂತ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಹಂತಕರನ್ನು ಬಂಧಿಸಲಾಗಿದೆ.












Click it and Unblock the Notifications