ಧೋನಿ ಪತ್ನಿಯಿಂದ ಉಪವಾಸ ವ್ರತ
ಮೊಹಾಲಿ, ಮಾ. 30: ಪ್ರಸಕ್ತ ವಿಶ್ವ ಕಪ್ ನ ಆರಂಭದಿಂದ ಭಾರತ ಪಾಲ್ಗೊಂಡಿದ್ದ ಪಂದ್ಯಗಳ ಎಲ್ಲ ದಿನದಂದು ತಂಡದ ಸಾರಥಿ ಎಂ.ಎಸ್.ಧೋನಿ ಅವರ ಪತ್ನಿ ಸಾಕ್ಷಿ ಉಪವಾಸ ಆಚರಿಸಿದ್ದಾರೆ. ಇನ್ನು ಇಂದಿನ ಪಂದ್ಯದ ವೇಳೆಯಂತೂ ಒಂದು ತೊಟ್ಟು ನೀರೂ ಕುಡಿಯುವುದಿಲ್ಲ. ಪಾಕ್ ವಿರುದ್ಧ ಗೆಲ್ಲಲೇಬೇಕು. ಅದೇ ನನಗೆ ಪುಷ್ಕಳ ಭೋಜನ ಎಂದು ಘೋಷಿಸಿದ್ದಾರೆ.
ಸಾರಥಿಯ ಪತ್ನಿ ಇಂತಹ ಕಠಿಣ ವ್ರತಾಚರಣೆಯಲ್ಲಿದ್ದರೆ ಯೋಧರೂ ಅವರವರ ಭಾವ-ಭಕುತಿಗೆ ತಕ್ಕಂತೆ ದೇವರಿಗೆ ಮೊರೆ ಹೋಗಿದ್ದಾರೆ. ತಂಡದ ಕೇಂದ್ರ ಶಕ್ತಿ ಎನಿಸಿರುವ ಯುವರಾಜ್ ಸಿಂಗ್ ಗೆ ಹೆತ್ತಮ್ಮನೇ ಸಾಕ್ಷಾತ್ ದೇವರು. ಮೊನ್ನೆ ಅಮ್ಮ ಶಬನಂ ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕಿಬಂದಿದ್ದಾರೆ. ಇನ್ನು ಆ ಮಹಾತಾಯಿ ಚಂಡೀಗಢದ ಆಸುಪಾಸಿನಲ್ಲಿರುವ ಎಲ್ಲ ದೇವರು ದಿಂಡರಿಗೆ ಮಗನ ಪರ ದಂಡ ಹಾಕಿದ್ದಾರೆ.
ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ತಾಯಿ ಕೃಷ್ಣಾ ಅವರು, 'ಮಗಾ ನೀನು ಮೈದಾನದಲ್ಲಿ ಬೆವರಿಳಿಸುತ್ತಿರು ನಾನು ಒಂದು ರೌಂಡ್ ದೇವಸ್ಥಾನಗಳಿಗೆ ತೆರಳಿ ಕೈಮುಗಿದು ಬರುವೆ' ಎಂದಿದ್ದಾರೆ. 'ವೀರೂ ಇಸ್ ಬಾರ್ ಕೋಇ ಬಡಾ ಧಮಾಕಾ ದಿಕಾಯೇಗಾ' (ವೀರೂ ಈ ಬಾರಿ ದೊಡ್ಡ ಪ್ರದರ್ಶನ ನೀಡಲಿದ್ದಾನೆ) ಎಂದು ಕೃಷ್ಣಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ಹಾಲಿ ವಿಶ್ವ ಕಪ್ ನಲ್ಲಿ ಒಂದು ಪಂದ್ಯವನ್ನೂ ಪ್ರತ್ಯಕ್ಷವಾಗಿ ನೋಡಿಲ್ಲ. ಅಂತೆಯೇ, ಇಂದಿನ ಪಂದ್ಯ ವೀಕ್ಷಿಸಲು ಮೊಹಾಲಿ ಸ್ಟೇಡಿಯಂನತ್ತ ಹೆಜ್ಜೆ ಹಾಕುತ್ತಿಲ್ಲ. ಅವರು ಟಿವಿಯಲ್ಲೂ ಪಂದ್ಯಗಳನ್ನು ನೋಡುತ್ತಿಲ್ಲ ! ಪಂದ್ಯದುದ್ದಕ್ಕೂ ಮನೆಯಲ್ಲಿ ದೇವರ ಮುಂದೆ ಕುಳಿತು ಮಗನ ಮತ್ತು ತಂಡದ ಯಶಸ್ಸಿಗಾಗಿ ಪ್ರಾರ್ಥನೆಯಲ್ಲಿ ತೊಡಗಿರುತ್ತಾರೆ.












Click it and Unblock the Notifications