ಮೊಹಾಲಿಯಲ್ಲಿ ಕ್ರಿಕೆಟ್ ರಥೋತ್ಸವ: ಭಾರತ ಬಂದ್
ಮೊಹಾಲಿ, ಮಾ. 30: ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಮಿನಿ ಫೈನಲ್ಸ್ ಎಂದರು. ಈಗ ಪಾಕ್ ವಿರುದ್ಧದ ಸೆಮಿ ಫೈನಲ್ ಅನ್ನು ಫೈನಲ್ ಆಫ್ ಫೈನಲ್ಸ್ ಎನ್ನುತ್ತಿದ್ದಾರೆ. ಹಾಗಾದರೆ ವಿಶ್ವ ಕಪ್ ಫೈನಲ್ಸ್ ಯಾವುದು? ಅದು ನಿಜವಾದ ಫೈನಲ್ ಪಂದ್ಯ ಎನಿಸಿಕೊಳ್ಳಬೇಕಾದರೆ ಇಂದು ಭಾರತ ಗೆಲ್ಲಲೇ ಬೇಕು ಎನ್ನುತ್ತಿದೆ ಕೋಟ್ಯಂತರ ಭಾರತೀಯ ಹೃದಯಗಳು. ಅದೂ ಹೇಗೆ ಅಂತೀರಿ. ಮುಕ್ಕಾಲು ಪಾಲು ಉದ್ಯೋಗಿಗಳು ಕೆಲಸಕ್ಕೆ ಚಕ್ಕರ್ ಹೊಡೆದು ಭಾರತ ಬಂದ್ ಆಚರಿಸುವ ಮೂಲಕ!
ಕೈಗಾರಿಕಾ ಮಹಾ ಒಕ್ಕೂಟ ಆಸೋಚಾಮ್ ಪ್ರಕಾರ ಭಾರತದ ಕಂಪನಿಗಳಲ್ಲಿ ಇಂದು ಶೇ. 60ರಷ್ಟು ಹಾಜರಾತಿ ಇಲ್ಲ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಕ್ಷಿಪ್ರ ಸಮೀಕ್ಷೆ ನಡೆಸಿರುವ ಒಕ್ಕೂಟಕ್ಕೆ 'ನೋಡ್ರಿ ಮ್ಯಾಚ್ ಇರೋವಾಗಾ ಕಚೇರಿಯಲ್ಲಿದ್ದರೆ ಅರೆಮನಸ್ಸಿನಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಕೆಲಸದ ಕಡೆ ಗಮನಹರಿಸುವುದಕ್ಕೇ ಆಗದು, ಗೊತ್ತಾ!?' ಎಂದು ಉದ್ಯೋಗಿಗಳು ಮನವರಿಕೆ ಮಾಡಿಕೊಟ್ಟಿದ್ದಾರೆ.
ಕಂಪನಿಗಳೂ ಮಾಸ್ ಕ್ಯಾಷುಯಲ್ ಲೀವ್ ಗಳನ್ನು ಗ್ರಾಂಟ್ ಮಾಡಿ ಉದ್ಯೋಗಿಗಳ ಮನಗೆದ್ದಿವೆ. ಇನ್ನು ಕೆಲವು ಕಂಪನಿಗಳು ಕಾಂಪ್ ಆಫ್ ಕೊಟ್ಟು ಭಾನುವಾರ ಕೆಲಸ ಮಾಡಿ ಎಂದಿವೆ. ಒಂದು ದಿನ ರಜೆ ನೀಡಲು ಐಟಿ ಕಂಪನಿಗಳಿಗೇನು ಸಮಸ್ಯೆಯಾಗದು. ಆದರೆ ಉತ್ಪಾದನಾ ಕಂಪನಿಗಳು ಹಾಗಲ್ಲ. ಆದರೆ ಅಲ್ಲೂ ಕ್ರಿಕೆಟ್ ಆಟದ ಪರಮ ಭಕ್ತರಿದ್ದಾರಲ್ವಾ. ಅವರಿಗೆಂದೇ ಅನೇಕ ಕಂಪನಿಗಳು ಅರ್ಧ ದಿನ ರಜೆ ಮಂಜೂರು ಮಾಡಿವೆ. ಕೆಲವು ಕಂಪನಿಗಳು ಕಚೇರಿಯಲ್ಲೇ ಬಿಗ್ ಸ್ಕ್ರೀನ್ ಟಿವಿ ಹಾಕಿ ಮಹದುಪಕಾರ ಮಾಡಿವೆ.
'ಮೂರು ವರ್ಷಗಳ ಬಳಿಕ ಪಾಕ್ ವಿರುದ್ಧ ಸೆಣೆಸುತ್ತಿದ್ದೇವೆ. ಅದೂ ವಿಶ್ವ ಕಪ್ ಫೈನಲ್ಸ್-ನಲ್ಲಿ. ಇದು ಖಂಡಿತ ಹೈವೋಲ್ಟೇಜ್ ಮ್ಯಾಚ್. ಇದನ್ನು ಮಿಸ್ ಮಾಡಿಕೊಳ್ಳಲು ಸುತರಾಂ ಇಷ್ಟ ಇಲ್ಲ. ಆಗ್ಲೇ ಬಾಸ್ ಲೀವ್ ಪರ್ಮಿಶನ್ ಕೊಟ್ಟಿದ್ದಾರೆ' ಎಂದು ರಜಾ ತೆಗೆದುಕೊಂಡವರೆಲ್ಲ ಬೀಗುತ್ತಿದ್ದಾರೆ.
ಆದರೆ ಇಲ್ಲೊಂದು ಆಘಾತಕಾರಿ ಸುದ್ದಿಯಿದೆ ಕೇಳಿ. ಉತ್ತರ ಪ್ರದೇಶ ಸರಕಾರವು ಬುಧವಾರ ಗೈರು ಹಾಜರಾಗುವ ತನ್ನ ನೌಕರರಿಗೆ ಸಂಬಳದಲ್ಲಿ 500 ರುಪಾಯಿ ಕಡಿತ ಮಾಡುವುದಾಗಿ ಘೋಷಿಸಿದೆ. ರಾಜ್ಯದಲ್ಲಿ ಬಸ್ ಸಂಚಾರ ಸುವ್ಯವಸ್ಥಿತವಾಗಿರಲೆಂದು ಸರಕಾರ ಈ ಶಾಣ್ಯಾತನ ತೋರಿದೆ. ರಜಾ ಅರ್ಜಿಗಳ ಪ್ರವಾಹವೇ ನುಗ್ಗಿ ಬಂದಿತ್ತು. ಆದ್ದರಿಂದ ಈ ಕ್ರಮ ಅನಿವಾರ್ಯವಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ದೇಶಾದ್ಯಂತ ಬಹುತೇಕ ಎಲ್ಲ ಸರಕಾರಿ ಕಚೇರಿಗಳಲ್ಲಿಯೂ ಇದೇ ಪರಿಸ್ಥಿತಿ ಇದೇ ಆದರೆ ನೌಕರರು 'ಕಡಿತ'ಕ್ಕೊಳಗಾಗಿರುವ ಸುದ್ದಿ ಬಂದಿಲ್ಲ.












Click it and Unblock the Notifications